×
Ad

ಉಕ್ರೇನ್ ಯುದ್ಧ ಅಂತ್ಯಕ್ಕೆ ಮುಸ್ಲಿಂ ರಾಷ್ಟ್ರಗಳು ನೆರವಾಗಬೇಕು: ಒಐಸಿ ದೇಶಗಳಿಗೆ ಪಾಕಿಸ್ತಾನ ಆಗ್ರಹ

Update: 2022-03-23 23:07 IST

ಇಸ್ಲಮಾಬಾದ್, ಮಾ.23: ಉಕ್ರೇನ್ ನಲ್ಲಿನ ಯುದ್ಧವನ್ನು ಅಂತ್ಯಗೊಳಿಸುವ ಪ್ರಯತ್ನಕ್ಕೆ ಮುಸ್ಲಿಂ ರಾಷ್ಟ್ರಗಳು ನೆರವಾಗಬೇಕು ಮತ್ತು ಈ ಪ್ರಯತ್ನಕ್ಕೆ ಚೀನಾವೂ ಕೈಜೋಡಿಸಬೇಕು ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್ ಆಗ್ರಹಿಸಿದ್ದಾರೆ. ‌

ಇಸ್ಲಮಾಬಾದಿನಲ್ಲಿ ಮಂಗಳವಾರ ಆರಂಭಗೊಂಡ 57 ಸದಸ್ಯದೇಶಗಳ ಇಸ್ಲಾಮಿಕ್ ಸಹಕಾರ ಸಂಘಟನೆ (ಒಐಸಿ)ಯ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಉಕ್ರೇನ್‌ನಲ್ಲಿ ನಡೆಯುತ್ತಿರುವ ಯುದ್ಧವು ಜಗತ್ತಿನ ಮೇಲೆ ಭಾರೀ ಪರಿಣಾಮ ಬೀರಲಿದೆ. ಈಗಾಗಲೇ ತೈಲ, ಅನಿಲ, ಗೋಧಿ ಮತ್ತಿತರ ವಸ್ತುಗಳ ದರ ಹೆಚ್ಚಳದಿಂದ ಸಮಸ್ಯೆ ಸೃಷ್ಟಿಯಾಗಿದೆ ಎಂದು ಎಚ್ಚರಿಸಿದರು. ಇದೇ ಮೊದಲ ಬಾರಿಗೆ ಒಐಸಿ ಸಮ್ಮೇಳನದಲ್ಲಿ ಚೀನಾದ ಪ್ರತಿನಿಧಿ ವಿಶೇಷ ಆಹ್ವಾನಿತರಾಗಿ ಪಾಲ್ಗೊಂಡಿದ್ದಾರೆ.

ಮಧ್ಯಸ್ಥಿಕೆ ವಹಿಸಿ, ಕದನ ವಿರಾಮ ಜಾರಿಯಾಗಲು ಮತ್ತು ಯುದ್ಧ ಅಂತ್ಯಗೊಳ್ಳಲು ಪ್ರಯತ್ನಿಸಿ ಎಂದು ಪ್ರತಿನಿಧಿಗಳನ್ನು ಆಗ್ರಹಿಸಿದ ಅವರು, ಪೆಲೆಸ್ತೀನ್ ಹಾಗೂ ಕಾಶ್ಮೀರದ ಜನತೆಗೆ ನೆರವಾಗುವಲ್ಲಿ ನಾವು ವಿಫಲವಾಗಿದ್ದೇವೆ. ಈ ಎರಡೂ ವಿಷಯದಲ್ಲಿ ನಮ್ಮ ಸಂಘಟನೆ ಯಾವ ಪರಿಣಾಮ ಬೀರಲೂ ಸಾಧ್ಯವಾಗಲಿಲ್ಲ ಎಂದು ಹೇಳಲು ಬೇಸರವಾಗುತ್ತಿದೆ. ಮುಸ್ಲಿಮರು 1.5 ಬಿಲಿಯನ್ ಸಂಖ್ಯೆಯಲ್ಲಿದ್ದರೂ ಈ ಘೋರ ಅನ್ಯಾಯವನ್ನು ತಡೆಯಲು ನಮ್ಮ ಧ್ವನಿ ಪರಿಣಾಮಕಾರಿಯಾಗಲಿಲ್ಲ ಎಂದು ಹೇಳಿದರು.

ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿರುವ ಅಫ್ಗಾನಿಸ್ತಾನಕ್ಕೆ ಆರ್ಥಿಕ ನೆರವು, ಪೆಲೆಸ್ತೀನೀಯರಿಗೆ ನೆರವು, ವಿವಾದಾತ್ಮಕ ಕಾಶ್ಮೀರ ವಲಯದಲ್ಲಿ ನೆಲೆಸಿರುವ ಜನರಿಗೆ ನೆರವು ನೀಡುವುದು ಸೇರಿದಂತೆ 100ಕ್ಕೂ ಅಧಿಕ ನಿರ್ಣಯಗಳನ್ನು ಈ ಸಮ್ಮೇಳನದಲ್ಲಿ ಅನುಮೋದಿಸುವ ಉದ್ದೇಶವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News