ರಾಜೀನಾಮೆಯ ಪ್ರಶ್ನೆಯೇ ಇಲ್ಲ: ಇಮ್ರಾನ್‌ ಖಾನ್‌

Update: 2022-03-23 17:45 GMT

ಇಸ್ಲಾಮಾಬಾದ್, ಮಾ.23: ಶುಕ್ರವಾರ ನಡೆಯಲಿರುವ ಅವಿಶ್ವಾಸ ನಿರ್ಣಯದ ಮತದಾನಕ್ಕೂ ಮುನ್ನ ಯಾವುದೇ ಕಾರಣಕ್ಕೂ ರಾಜೀನಾಮೆ ನೀಡುವುದಿಲ್ಲ ಎಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್ ಸ್ಪಷ್ಟಪಡಿಸಿದ್ದಾರೆ.

 ವಿಪಕ್ಷಗಳು ತಮ್ಮ ಎಲ್ಲಾ ತಂತ್ರಗಾರಿಕೆ ಪ್ರಯೋಗಿಸಿ ಪ್ರಯತ್ನಿಸಿದರೂ ತನ್ನ ವಿರುದ್ಧ ಮಂಡಿಸಿರುವ ಅವಿಶ್ವಾಸ ನಿರ್ಣಯ ಗೊತ್ತುವಳಿ ಯಶಸ್ವಿಯಾಗದು ಎಂದು ಸುದ್ಧಿಗಾರರ ಜತೆ ಮಾತನಾಡಿದ ಇಮ್ರಾನ್‌ ಖಾನ್ ವಿಶ್ವಾಸ ವ್ಯಕ್ತಪಡಿಸಿದರು. ಕಡೆಯ ಚೆಂಡಿನವರೆಗೂ ಆಟ ಮುಂದುವರಿಸಲು ನಾನು ಬಯಸುತ್ತೇನೆ. ವಿಪರೀತ ಒತ್ತಡದಲ್ಲಿರುವ ವಿಪಕ್ಷಗಳನ್ನು ಒಂದು ದಿನದ ಮೊದಲೇ ಅಚ್ಚರಿಯಲ್ಲಿ ಕೆಡವಲಿದ್ದೇನೆ ಎಂದು ಇಮ್ರಾನ್‌ ಖಾನ್ ಹೇಳಿದ್ದಾರೆ.

 ಅವಿಶ್ವಾಸ ನಿರ್ಣಯದ ಸಂದರ್ಭ ನಿಮ್ಮ ಟ್ರಂಪ್‌ ಕಾರ್ಡ್ ಯಾವುದು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು , ನಾನಿನ್ನೂ ನನ್ನ ಕಾರ್ಡ್ ಗಳನ್ನು ಬಳಸಿಯೇ ಇಲ್ಲ, ಇದುವೇ ನನ್ನ ಟ್ರಂಪ್‌ ಕಾರ್ಡ್ ಎಂದರು. ನಾನು ಮನೆಯಲ್ಲಿ ಕುಳಿತಿರಬೇಕಾಗುತ್ತದೆ ಎಂದು ಯಾರೂ ತಪ್ಪು ತಿಳಿಯುವುದು ಬೇಡ. ನಾನು ರಾಜೀನಾಮೆ ನೀಡುವುದಿಲ್ಲ, ಯಾಕೆ ನೀಡಬೇಕು? ಕಳ್ಳರಿಂದ ಒತ್ತಡ ಎದುರಾಗಿರುವುದಕ್ಕೆ ನಾನೇಕೆ ರಾಜೀನಾಮೆ ನೀಡಬೇಕು? ಎಂದವರು ಪ್ರಶ್ನಿಸಿದರು.
 ‌
ಸೇನೆಯೊಂದಿಗೆ ತನ್ನ ಸಂಬಂಧ ಉತ್ತಮವಾಗಿದೆ ಎಂದ ಅವರು, ಸೇನೆಯ ವಿರುದ್ಧ ನಿರಂತರ ಟೀಕೆ ನಡೆಸುವುದು ಸರಿಯಲ್ಲ. ಬಲಿಷ್ಟ ಸೇನೆ ಪಾಕಿಸ್ತಾನದ ಹಿತದೃಷ್ಟಿಯ ಹಿನ್ನೆಲೆಯಲ್ಲಿ ಅತ್ಯಗತ್ಯವಾಗಿದೆ. ಸೇನೆ ಬಲಿಷ್ಟವಾಗಿ ಇರದಿದ್ದರೆ ದೇಶವು 3 ಭಾಗಗಳಾಗಿ ವಿಭಜನೆಯಾಗಲಿತ್ತು ಎಂದು ಹೇಳಿದರು. ಸರಕಾರದ ಉಳಿವಿಗಾಗಿ ಸಿದ್ಧಾಂತದಲ್ಲಿ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಮತ್ತು ಸರಕಾರ ಪತನಗೊಂಡರೆ ಖಂಡಿತಾ ಸುಮ್ಮನೆ ಕೂರುವ ಜಾಯಮಾನ ತನ್ನದಲ್ಲ. ಜನರಿಗೆ ಮತ್ತು ದೇವರಿಗೆ ವಿಶ್ವಾಸದ್ರೋಹ ಮಾಡುವುದಿಲ್ಲ ಎಂದು ಇಮ್ರಾನ್‌ ಖಾನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News