ಕ್ಷಯ ರೋಗದ ಗಂಭೀರತೆ ಜನರಿಗೆ ಮನವರಿಕೆ ಮಾಡುವ ಕಾರ್ಯವಾಗಲಿ: ಮೇಯರ್

Update: 2022-03-24 07:29 GMT

ಮಂಗಳೂರು, ಮಾ.24: ವಿಶ್ವ ಕ್ಷಯ ರೋಗ ದಿನಾಚರಣೆ ಒಂದು ದಿನದ ಕಾರ್ಯಕ್ರಮಕ್ಕೆ ಸೀಮಿತವಾಗದೆ ನಿರಂತರ ಕಾರ್ಯಕ್ರಮಗಳ ಮೂಲಕ ರೋಗದ ಗಂಭೀರತೆಯನ್ನು ಜನರಿಗೆ ಮನವರಿಕೆ ಮಾಡುವ ಕೆಲಸವಾಗಬೇಕಾಗಿದೆ ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ಅಭಿಪ್ರಾಯಿಸಿದ್ದಾರೆ.

ಅವರು ಇಂದು ಕೋಡಿಕಲ್‌ನ ಕುದ್ಮುಲ್ ರಂಗರಾವ್ ಸಮುದಾಯ ಭವನದಲ್ಲಿ ದ.ಕ. ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿಗಳ ಕಚೇರಿ, ಕೊರಗ ಅಭಿವೃದ್ಧಿ ಸಂಘದ ನಗರದ ವಲಯ, ಐಎಂಎ ಮತ್ತು ಯೆನೆಪೊಯ ವೈದ್ಯಕೀಯ ಶಸ್ತ್ರಚಿಕಿತ್ಸಾ ಶುಶ್ರೂಷಾ ವಿಭಾಗದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಕ್ಷಯರೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಕ್ಷಯ ರೋಗ ವಿಶ್ವದೆಲ್ಲೆಡೆ ಕಾಡುವ ಸಾಂಕ್ರಾಮಿಕ ರೋಗವಾಗಿದ್ದು, ಭಾರತ ಸರಕಾರವು 2025ರ ವೇಳೆಗೆ ಕ್ಷಯರೋಗ ಮುಕ್ತ ಭಾರತವನ್ನಾಗಿಸಲು ಕಾರ್ಯಕ್ರಮಗಳನ್ನು ರೂಪಿಸಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಕೂಡಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ರೋಗದ ಬಗ್ಗೆ ಮಾಹಿತಿ ನೀಡುವ ಕೆಲಸ ಆಗಬೇಕು ಎಂದು ಅವರು ಹೇಳಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಮುದಾಯಗಳಲ್ಲಿ ಜಾಗೃತಿ ಬೆಳೆದಾಗ ಮನುಕುಲಕ್ಕೆ ತೊಂದರೆ ಮಾಡುವ ರೋಗಗಳನ್ನು ನಿಯಂತ್ರಿಸಲು ಸಾಧ್ಯ ಎಂದರು.

ಕ್ಷಯರೋಗ ಶ್ವಾಸಕೋಶಕ್ಕೆ ಹಾನಿ ಮಾಡುವ ರೋಗವಾಗಿರುವ ಕಾರಣ, ಡಯಾಬಿಟಿಕ್, ಕೋವಿಡ್ ರೋಗಿಗಳೂ ಈ ರೋಗ ಕಾಡುವ ಸಮಸ್ಯೆ ಇರುವುದರಿಂದ ಈ ಬಗ್ಗೆ ಹೆಚ್ಚಿನ ಮುತುವರ್ಜಿ ಅಗತ್ಯ ಎಂದರು.

ವೇದಿಕೆಯಲ್ಲಿ ಯೆನೆಪೊಯ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲೆ ಡಾ.ಲೀನಾ, ವೈದ್ಯಾಧಿಕಾರಿಗಳಾದ ಡಾ.ಶಶಿಕುಮಾರ್, ಕೊರಗ ಅಭಿವೃದ್ಧಿ ಸಂಘ ನಗರದ ವಲಯದ ಅಧ್ಯಕ್ಷ ರಾಜ, ತಾಲೂಕು ಆರೋಗ್ಯಾಧಿಕಾರಿ ಸುಜಯ್ ಭಂಡಾರಿ, ಐಎಂಎ ಕಾರ್ಯದರ್ಶಿ ಡಾ.ಸದಾನಂದ ಪೂಜಾರಿ ಮೊದಲಾದವರು ಉಪಸ್ತಿತರಿದ್ದರು.

ಕ್ಷಯರೋಗ ನಿಯಂತ್ರಣಾಧಿಕಾರಿ ಡಾ.ಬದ್ರುದ್ದೀನ್ ಸ್ವಾಗತಿಸಿದರು. ಉದ್ಘಾಟನಾ ಸಮಾರಂಭದ ಬಳಿಕ ಡಾ.ಶರತ್ ಕುಮಾರ್ ಕ್ಷಯ ರೋಗದ ಬಗ್ಗೆ ಉಪನ್ಯಾಸ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News