×
Ad

ದಿಲ್ಲಿಯ ಹೋಟೆಲ್ ನಲ್ಲಿ ಕಾಶ್ಮೀರಿ ವ್ಯಕ್ತಿಗೆ ಕೋಣೆ ನಿರಾಕರಿಸಿದ ವೀಡಿಯೊ ವೈರಲ್

Update: 2022-03-24 23:34 IST

ಹೊಸದಿಲ್ಲಿ,ಮಾ.24: ಓಯೊ ರೂಮ್ಸ್ ನ ಪಟ್ಟಿಯಲ್ಲಿರುವ ದಿಲ್ಲಿಯ ಹೋಟೆಲ್ವೊಂದು ಕಾಶ್ಮೀರಿ ವ್ಯಕ್ತಿಯೋರ್ವನಿಗೆ ವಸತಿ ಸೌಲಭ್ಯವನ್ನು ನಿರಾಕರಿಸಿದ್ದಕ್ಕಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಆಕ್ರೋಶವನ್ನು ಎದುರಿಸುತ್ತಿದೆ.

ಹೋಟೆಲ್ ಸಿಬ್ಬಂದಿಯ ಜೊತೆಗೆ ಕಾಶ್ಮೀರಿ ವ್ಯಕ್ತಿಯ ಸಂಭಾಷಣೆಯ ವೀಡಿಯೊವನ್ನು ಪೋಸ್ಟ್ ಮಾಡಿರುವ ಜಮ್ಮು-ಕಾಶ್ಮೀರ ವಿದ್ಯಾರ್ಥಿಗಳ ಸಂಘದ ರಾಷ್ಟ್ರೀಯ ವಕ್ತಾರ ನಾಸಿರ್ ಖ್ವೆಹಾಮಿ ಅವರು, ಇದು ‘ದಿ ಕಾಶ್ಮೀರ ಫೈಲ್ಸ್’ನ ಪ್ರಭಾವವಾಗಿದೆ ಎಂದು ಬಣ್ಣಿಸಿದ್ದಾರೆ. ಕಾಶ್ಮೀರಿಯಾಗಿರುವುದು ಅಪರಾಧವೇ ಎಂದೂ ಅವರು ಪ್ರಶ್ನಿಸಿದ್ದಾರೆ.

ಕಾಶ್ಮೀರದ ನಿವಾಸಿಯೋರ್ವ ಆಧಾರ ಕಾರ್ಡ್, ಪಾಸ್ಪೋರ್ಟ್ ಸೇರಿದಂತೆ ತನ್ನ ಗುರುತಿನ ಪುರಾವೆಗಳನ್ನು ತೋರಿಸಿದ್ದರೂ ಹೋಟೆಲ್ನ ರಿಸೆಪ್ಶನ್ನಲ್ಲಿದ್ದ ಮಹಿಳಾ ಸಿಬ್ಬಂದಿ ಕೋಣೆಯನ್ನು ನೀಡಲು ನಿರಾಕರಿಸಿದ್ದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವೀಡಿಯೊ ತೋರಿಸಿದೆ.

ವ್ಯಕ್ತಿ ಓಯೊ ವೆಬ್ ಸೈಟ್ ನ ಮೂಲಕ ಈ ಹೋಟೆಲ್ನಲ್ಲಿ ರೂಮ್ ಅನ್ನು ಬುಕ್ ಮಾಡಿದ್ದ. ತನಗೆ ರೂಮ್ ನಿರಾಕರಿಸಿದ್ದನ್ನು ವ್ಯಕ್ತಿ ಪ್ರಶ್ನಿಸಿದಾಗ ತನ್ನ ಸೀನಿಯರ್ಗೆ ಕರೆ ಮಾಡಿದ ಮಹಿಳೆ,ಗ್ರಾಹಕನೊಂದಿಗೆ ಮಾತನಾಡುವಂತೆ ಮತ್ತು ರೂಮ್ ಅನ್ನು ಏಕೆ ನಿರಾಕರಿಸಲಾಗಿದೆ ಎನ್ನುವುದನ್ನು ತಿಳಿಸುವಂತೆ ಸೂಚಿಸಿದ್ದು ವೀಡಿಯೊದಲ್ಲಿ ಕಂಡುಬಂದಿದೆ.

ತನ್ನ ಸೀನಿಯರ್ ಜೊತೆ ಕೆಲ ಕಾಲ ಮಾತನಾಡಿದ ಮಹಿಳೆ,ಕಾಶ್ಮೀರದ ನಿವಾಸಿಗಳಿಗೆ ಹೋಟೆಲ್ನಲ್ಲಿ ಉಳಿದುಕೊಳ್ಳಲು ಅವಕಾಶ ನೀಡದಂತೆ ಮತ್ತು ಜಮ್ಮು-ಕಾಶ್ಮೀರದ ಗುರುತಿನ ದಾಖಲೆಗಳನ್ನು ಸ್ವೀಕರಿಸದಂತೆ ದಿಲ್ಲಿ ಪೊಲೀಸರು ತಮಗೆ ಸೂಚಿಸಿದ್ದಾರೆ ಎಂದು ತಿಳಿಸಿದ್ದಳು. ದಿಲ್ಲಿಯ ಪ್ಲೆಸಂಟ್ ಇನ್ ಹೋಟೆಲ್ನಲ್ಲಿ ಈ ಘಟನೆ ನಡೆದಿದೆ.

ಇದೊಂದು ಹಳೆಯ ವೀಡಿಯೊ ಎಂದು ಕೆಲವರು ಸಾಮಾಜಿಕ ಮಾಧ್ಯಮಗಳಲ್ಲಿ ಹೇಳಿದ್ದಾರಾದರೂ ಫ್ಯಾಕ್ಟ್ ಚೆಕಿಂಗ್ ವೆಬ್ಸೈಟ್ ಆಲ್ಟ್ ನ್ಯೂಸ್ ಸಹಸಂಸ್ಥಾಪಕ ಮುಹಮ್ಮದ್ ಝುಬೇರ್ ಅವರು ವೀಡಿಯೊವನ್ನು ಚಿತ್ರೀಕರಿಸಿದ್ದ ವ್ಯಕ್ತಿಯಿಂದ ಸ್ಕ್ರೀನ್ ರೆಕಾರ್ಡಿಂಗ್ ಅನ್ನು ಹಂಚಿಕೊಂಡಿದ್ದಾರೆ. ವೀಡಿಯೊವನ್ನು ಮಾ.22ರಂದು ಚಿತ್ರೀಕರಿಸಿರುವುದನ್ನು ಈ ರೆಕಾರ್ಡಿಂಗ್ ತೋರಿಸಿದೆ.

ಕಾಶ್ಮೀರಿಗಳಿಗೆ ಕೋಣೆಗಳನ್ನು ನೀಡದಂತೆ ಪೊಲೀಸರು ತಮಗೆ ಸೂಚಿಸಿದ್ದಾರೆ ಎಂಬ ಹೋಟೆಲ್ ನ ಹೇಳಿಕೆಗೆ ಪ್ರತಿಕ್ರಿಯಿಸಿರುವ ದಿಲ್ಲಿ ಪೊಲೀಸರು ಬುಧವಾರ ರಾತ್ರಿ ಸರಣಿ ಟ್ವೀಟ್ಗಳಲ್ಲಿ ಸ್ಪಷ್ಟನೆಯನ್ನು ನೀಡಿದ್ದು,ದಿಲ್ಲಿಯಲ್ಲಿನ ಹೋಟೆಲ್ಗಳಿಗೆ ತಾವು ಇಂತಹ ಯಾವುದೇ ನಿರ್ದೇಶವನ್ನು ನೀಡಿಲ್ಲ ಎಂದು ತಿಳಿಸಿದ್ದಾರೆ.

ಕೆಲವು ನೆಟ್ಟಿಗರು ಚಾಲ್ತಿಯಲ್ಲಿರುವ ವೀಡಿಯೊವನ್ನು ತಪ್ಪಾಗಿ ಬಿಂಬಿಸುವ ಮೂಲಕ ದಿಲ್ಲಿ ಪೊಲೀಸರ ಗೌರವಕ್ಕೆ ಚ್ಯುತಿ ತರಲು ಪ್ರಯತ್ನಿಸುತ್ತಿದ್ದಾರೆ ಮತ್ತು ಇದು ದಂಡನೀಯವಾಗಿದೆ ಎಂದೂ ದಿಲ್ಲಿ ಪೊಲೀಸರು ಹೇಳಿದ್ದಾರೆ. ಬಳಿಕ ವ್ಯಕ್ತಿಯು ಅದೇ ಪ್ರದೇಶದಲ್ಲಿಯ ಇನ್ನೊಂದು ಹೋಟೆಲ್ನಲ್ಲಿ ಉಳಿದುಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ವೀಡಿಯೊ ವೈರಲ್ ಆದ ಬೆನ್ನಿಗೇ ಓಯೊ ರೂಮ್ಸ್ ಹೋಟೆಲ್ ಅನ್ನು ತನ್ನ ಪಟ್ಟಿಯಿಂದ ತೆಗೆದುಹಾಕಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News