ಆಧಾರ್, ಮತದಾರರ ಪಟ್ಟಿ ಜೋಡಣೆ ಕುರಿತು ಕೇಂದ್ರ ಸರಕಾರದ ಚಿಂತನೆ

Update: 2022-03-25 12:43 GMT
ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು (PTI)

ಹೊಸದಿಲ್ಲಿ: ಆಧಾರ್ ಅನ್ನು ಮತದಾರರ ಪಟ್ಟಿಗೆ ಜೋಡಣೆ ಮಾಡುವ ಕುರಿತಂತೆ ಸರಕಾರ ಪರಿಗಣಿಸುತ್ತಿದೆ. ಇದು ಮತದಾನದ ವೇಳೆ ಅಕ್ರಮವನ್ನು ತಡೆಯಲು ಮತ್ತು  ವಿದೇಶಗಳಲ್ಲಿ ಉದ್ಯೋಗದಲ್ಲಿರುವ ಭಾರತೀಯರಿಗೆ ಆನ್‍ಲೈನ್ ಮೂಲಕ ಮತದಾನ ಮಾಡಲು ಅನುವು ಮಾಡಿಕೊಡುತ್ತದೆ ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಇಂದು ಲೋಕಸಭೆಗೆ ತಿಳಿಸಿದರು.

ಚುನಾವಣಾ ಅಕ್ರಮ ಒಂದು ಗಂಭೀರ ವಿಚಾರ, ಇದನ್ನು ಹೇಗೆ ತಡೆಗಟ್ಟಬಹುದು ಎಂಬ ಕುರಿತು ಗಂಭೀರ ಚರ್ಚೆಗಳು ನಡೆಯುತ್ತಿವೆ ಎಂದು ಅವರು ಹೇಳಿದರು.

"ಆಧಾರ್ ಮತ್ತು ಮತದಾರರ ಪಟ್ಟಿಯನ್ನು ಜೋಡಣೆ ಮಾಡುವುದು ಅಕ್ರಮಗಳನ್ನು ತಡೆಯಲು ಇರುವ ಒಂದು ವಿಧಾನವಾಗಿದೆ, ಪ್ರಸ್ತುತ ಆಧಾರ್ ಮತ್ತು ಮತದಾರರ ಪಟ್ಟಿಯನ್ನು ಜೋಡಿಸುವುದು ಸ್ವಯಂಪ್ರೇರಿತವಾಗಿದೆ ಹೊರತು ಕಡ್ಡಾಯವಲ್ಲ. 'ಒಂದು ದೇಶ, ಒಂದು ಮತದಾರ ಪಟ್ಟಿ' ಹೊಂದುವುದು, ಮತದಾರರ ಪಟ್ಟಿಯಲ್ಲಿ ಒಬ್ಬರ ಹೆಸರು ಎರಡು ಬಾರಿ ಸೇರಿಕೊಳ್ಳುವುದು ಹಾಗೂ ಇಡೀ ಮತದಾನ ಪ್ರಕ್ರಿಯೆಯಲ್ಲಿ ಲೋಪದೋಷಗಳಿಲ್ಲದಂತೆ ಮಾಡುವುದು ನಮ್ಮ ಉದ್ದೇಶ ಎಂದು ಅವರು ಹೇಳಿದರು.

"'ಪ್ರವಾಸಿ' ಭಾರತೀಯರಿಗೆ ಮತದಾನ ಹಕ್ಕು ನೀಡುವ ಕುರಿತ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಅವರು ಈ ವಿಚಾರವನ್ನು ಚುನಾವಣಾ ಆಯೋಗ ನೋಡಿಕೊಳ್ಳಬೇಕು, ಆದರೆ ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ಇಡೀ ಪ್ರಕ್ರಿಯೆ ಪಾರದರ್ಶಕವಾಗಿರುವಂತೆ ನೋಡಿಕೊಳ್ಳಬೇಕು,'' ಎಂದು ಹೇಳಿದರು.

ಇವಿಎಂಗಳ ಮೂಲ ಕೋಡ್ ಅದರ ತಯಾರಕ ಕಂಪೆನಿ ಬಳಿ ಇರುವುದೇ ಅಥವಾ ಅದನ್ನು ಚುನಾವಣಾ ಆಯೋಗಕ್ಕೆ ನೀಡಲಾಗುತ್ತದೆಯೇ ಎಂದು ಕಾಂಗ್ರೆಸ್ ಸದಸ್ಯ ಮನೀಶ್ ತಿವಾರಿ ಕೇಳಿದಾಗ, ಅದು ನ್ಯಾಯಾಧೀಶರ ನೇಮಕಾತಿಯಂತೆ,  ಒಮ್ಮೆ ಸರಕಾರ ಅವರನ್ನು ನೇಮಿಸಿದ ನಂತರ ಅವರು ಸ್ವತಂತ್ರರಾಗುತ್ತಾರೆ, ಯಾರೂ ಇವಿಎಂಗಳನ್ನು ಪ್ರಶ್ನಿಸಬಾರದು, ಯಾವುದೇ ಊಹಾಪೋಹಗಳೂ ಇರಬಾರದು ಎಂದರು.

ತಮ್ಮ ಪ್ರಶ್ನೆಗೆ ಸೂಕ್ತ ಉತ್ತರ ದೊರಕಿಲ್ಲ ಎಂದು ತಿವಾರಿ ಹೇಳಿದಾಗ, ಮಧ್ಯಪ್ರವೇಶಿಸಿದ ಸ್ಪೀಕರ್ ಓಂ ಬಿರ್ಲಾ, ಜಗತ್ತಿನಾದ್ಯಂತ ಭಾರತದ ಪ್ರಜಾಪ್ರಭುತ್ವ ಮತ್ತು ಚುನಾವಣಾ ಪ್ರಕ್ರಿಯೆಯನ್ನು ಶ್ಲಾಘಿಸಲಾಗುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News