×
Ad

ಉಡುಪಿ: ಮಾ.28, 29ಕ್ಕೆ ಅಂಚೆ ನೌಕರರಿಂದ ಪ್ರತಿಭಟನೆ - ಎಲ್ಲಾ ಅಂಚೆ ಕಚೇರಿ ಬಂದ್

Update: 2022-03-25 20:28 IST

ಉಡುಪಿ, ಮಾ.25: ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ, ನೌಕರ ವಿರೋಧಿ ಇಬ್ಬಗೆ ನೀತಿ ಧೋರಣೆಗಳಿಗೆ ಪ್ರಬಲ ಪ್ರತಿರೋಧ ಒಡ್ಡಲು ಅಂಚೆ ನೌಕರರ ಕೇಂದ್ರ ಸಂಘಗಳ, ರಾಜ್ಯ ಸಂಘಗಳ ಜಂಟಿ ಕ್ರಿಯಾ ಸಮಿತಿಯ ಕರೆಯಂತೆ ಮಾ.28 ಮತ್ತು 29ರಂದು ಎರಡು ದಿನಗಳ ಕಾಲ ರಾಷ್ಟ್ರವ್ಯಾಪಿ ಮುಷ್ಕರ ನಡೆಯಲಿದ್ದು, ಇದರಂತೆ ಉಡುಪಿ ಜಿಲ್ಲೆಯಲ್ಲೂ ಎರಡು ದಿನಗಳ ಕಾಲ ಎಲಾಲ ಅಂಚೆಕಚೇರಿಗಳು ಬಂದ್ ಆಗಿರುತ್ತವೆ ಎಂದು ಅಂಚೆ ನೌಕರರ ಜಂಟಿ ಕ್ರಿಯಾ ಸಮಿತಿಯ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಪ್ರವೀಣ್ ಜತ್ತನ್ನ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿರುವ 958 ಮಂದಿ ಇಲಾಖಾ ನೌಕರರು, ಪೋಸ್ಟ್‌ಮೆನ್‌ಗಳು, ಎಂಟಿಎಸ್, ಗ್ರಾಮೀಣ್ ಡಾಕ್ ಸೇವಾ ಸಿಬ್ಬಂದಿಗಳು ಎರಡು ದಿನಗಳ ಮುಷ್ಕರದಲ್ಲಿ ಪಾಲ್ಗೊಳ್ಳುವರು. ಹೀಗಾಗಿ ಯಾರೂ ಕರ್ತವ್ಯಕ್ಕೆ ಹಾಜರಾಗುವುದಿಲ್ಲ ಎಂದರು.

ದೇಶದಲ್ಲಿ 158 ವರ್ಷಗಳ ಭವ್ಯ ಇತಿಹಾಸವನ್ನು ಹೊಂದಿರುವ ಅಂಚೆ ಇಲಾಖೆಯನ್ನು ಖಾಸಗೀಕರಣಗೊಳಿಸಲು ಕೇಂದ್ರ ಸರಕಾರ ಎಲ್ಲಾ ಸಿದ್ಧತೆಗಳನ್ನು ಮಾಡುತ್ತಿದೆ. ಇದನ್ನು ನಾವು ಪ್ರಬಲವಾಗಿ ವಿರೋಧಿಸುತ್ತೇವೆ. ಅಲ್ಲದೇ ಅಂಚೆ ಸೇವೆಗಳನ್ನು ಹೊರಗುತ್ತಿಗೆ ನೀಡುವ ಫ್ರಾಂಚೈಸಿಗೆ ನೀಡುವುದನ್ನು ತಕ್ಷಣವೇ ನಿಲ್ಲಿಸಬೇಕು ಹಾಗೂ ಡಾಕ್ ಮಿತ್ರ ಯೋಜನೆಯನ್ನು ರದ್ದುಪಡಿಸಬೇಕೆನ್ನುವುದು ನಮ್ಮ ಬೇಡಿಕೆಯಾಗಿದೆ ಎಂದು ಪ್ರವೀಣ್ ಜತ್ತನ್ನ ಹೇಳಿದರು.

ಈಗಿನ ಹೊಸ ಪೆನ್ಷನ್ ಸ್ಕೀಮ್‌ನ್ನು ತೆಗೆದುಹಾಕಿ 2004ಕ್ಕಿಂತ ಹಿಂದಿನ ಹಳೆಯ ಪಿಂಚಣಿ ಯೋಜನೆಯನ್ನೇ ಮತ್ತೆ ಜಾರಿಗೊಳಿಸಬೇಕೆನ್ನುವುದು ನಮ್ಮ ಒಕ್ಕೊರಳ ಬೇಡಿಕೆಯಾಗಿದೆ. ಹೊಸ ಪಿಂಚಣಿ ಯೋಜನೆಯ ಫಲಾನುಭವಿಗಳಿಗೆ ಈಗ ದೊರೆಯುತ್ತಿರುವ ಪಿಂಚಣಿ ಮೊತ್ತ ತಿಂಗಳಿಗೆ 1,800ರೂ., 2200ರೂ.ಮಾತ್ರ ಎಂದವರು ವಿವರಿಸಿದರು.

ಜಿಲ್ಲೆಯಲ್ಲಿ ಶೇ.30ರಷ್ಟು ಹುದ್ದೆಗಳು ಖಾಲಿಯಾಗಿವೆ. ಅವುಗಳನ್ನು ಕೂಡಲೇ ಭರ್ತಿ ಮಾಡಬೇಕು. 2015-16ನೇ ಸಾಲಿನ ನಂತರ ಯಾವುದೇ ಹೊಸ ನೇಮಕಾತಿ ನಡೆದಿಲ್ಲ. ಗ್ರಾಮೀಣ್ ಡಾಕ್ ಸೇವಕ್ ಹುದ್ದೆಗೆ ಎಲ್ಲಾ ಸೌಲಭ್ಯ ಗಳನ್ನು ನೀಡಬೇಕು. ಜನರಿಗೆ ಸರಿಯಾಗಿ ಸೇವೆ ನೀಡಲು ಸಮಸ್ಯೆಯಾಗಿರುವ ನೆಟ್‌ವರ್ಕ್ ಸಮಸ್ಯೆಯನ್ನು ಶೀಘ್ರವೇ ಬಗೆಹರಿಸಬೇಕು ಎಂಬುದು ತಮ್ಮ ಬೇಡಿಕೆಯಾಗಿದೆ ಎಂದರು.

ಮಾ.28 ಮತ್ತು 29ರಂದು ನಡೆಯುವ ಅಖಿಲ ಭಾರತ ಮುಷ್ಕರಕ್ಕೆ ಅಂಚೆನೌಕರರ ಸಂಪೂರ್ಣ ಬೆಂಬಲವಿದೆ ಎಂದ ಅವರು ಮಾ.28ರಂದು ಬೆಳಗ್ಗೆ ಅಂಚೆ ನೌಕರರು ಉಡುಪಿ ಪ್ರಧಾನ ಅಂಚೆ ಕಚೇರಿ ಎದುರು ಧರಣಿ ಪ್ರತಿಭಟನೆ ನಡೆಸಿ ಮನವಿ ಅರ್ಪಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಕನ್ವೀನರ್ ಸುಹಾಸ್, ಸುರೇಶ್ ಕೆ. ಹಾಗೂ ಬಿ.ವಿಜಯ ನಾಯರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News