9 ನ್ಯಾಯಾಧೀಶರ ನೇಮಕಾತಿಗೆ ಕೇಂದ್ರ ಸರಕಾರ ಅನುಮೋದನೆ
ಹೊಸದಿಲ್ಲಿ, ಮಾ. 25: ನ್ಯಾಯಾಧೀಶರ ನೇಮಕಾತಿ ಕುರಿತ ಬಿಕ್ಕಟ್ಟನ್ನು ಸುಗಮಗೊಳಿಸಲು ಸುಪ್ರೀಂ ಕೋರ್ಟ್ ಕೊಲೀಜಿಯಂ ಈ ಹಿಂದೆ ಮರು ಉಚ್ಚರಿಸಿದ್ದ ಜಮ್ಮು ಹಾಗೂ ಕಾಶ್ಮೀರದ ಇಬ್ಬರು ಸೇರಿದಂತೆ 9 ಮಂದಿಯನ್ನು ನ್ಯಾಯಾಧೀಶರನ್ನಾಗಿ ನೇಮಕ ಮಾಡಲು ಅನುಮೋದನೆ ನೀಡಿದೆ.
ಅಧಿಸೂಚನೆಯ ಪ್ರಕಾರ ರಾಷ್ಟ್ರಪತಿ ಅವರು ರಾಹುಲ್ ಭಾರ್ತಿ ಹಾಗೂ ಮೋಕ್ಷಾ ಖಜುರಿಯಾ ಕಝ್ಮಿ ಅವರನ್ನು ಜಮ್ಮು ಹಾಗೂ ಕಾಶ್ಮೀರ, ಲಡಾಖ್ ನ ಹೆಚ್ಚುವರಿ ನ್ಯಾಯಾಧೀಶರನ್ನಾಗಿ ಎರಡು ವರ್ಷಗಳಿಗೆ ನಿಯೋಜಿಸಿದರು. ಕಝ್ಮಿ ಹಾಗೂ ಭಾರ್ತಿ ಇಬ್ಬರೂ ಅಭ್ಯರ್ಥಿಗಳಾಗಿದ್ದು, ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ಸುಪ್ರೀಂ ಕೋರ್ಟ್‌ನ ಕೊಲೀಜಿಯಂ ಕಳೆದ ವರ್ಷ ಅವರ ಹೆಸರನ್ನು ಪುನರುಚ್ಚರಿಸಿತ್ತು.
ಜಮ್ಮು ಹಾಗೂ ಕಾಶ್ಮೀರದಲ್ಲಿ 2016ರಲ್ಲಿ ರಾಜ್ಯಪಾಲರ ಆಡಳಿತ ಜಾರಿಗೊಳಿಸಿದಾಗ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ಸೇವೆ ಸಲ್ಲಿಸಿದ್ದ, ಅನಂತರ ಜಮ್ಮು ಹಾಗೂ ಕಾಶ್ಮೀರದಲ್ಲಿ ಮೆಹಬೂಬಾ ಮುಫ್ತಿ ನೇತೃತ್ವದ ಪಿಡಿಪಿ-ಬಿಜೆಪಿ ಸರಕಾರದಲ್ಲಿ ಸೇವೆ ಮುಂದುವರಿಸಿದ್ದ ಹಿರಿಯ ನ್ಯಾಯವಾದಿ ಕಝ್ಮಿ ಅವರನ್ನು ನಿಯೋಜಿಸುವಂತೆ ಸಿಜೆಐ ರಂಜನ್ ಗೊಗೋಯಿ ನೇತೃತ್ವದ ಸುಪ್ರೀಂ ಕೋರ್ಟ್‌ನ ಕೊಲೀಜಿಯಂ 2019 ಅಕ್ಟೋಬರ್ 15ರಂದು ಶಿಫಾರಸು ಮಾಡಿತ್ತು.
ಭಾರ್ತಿ ಅವರನ್ನು ಸುಪ್ರೀಂ ಕೋರ್ಟ್ ನ ಕೊಲೀಜಿಯಂ 2021 ಮಾರ್ಚಲ್ಲಿ ಶಿಫಾರಸು ಮಾಡಿತ್ತು. ಅಲ್ಲದೆ, ಕಳೆದ ವರ್ಷ ಸೆಪ್ಟಂಬರ್ ನಲ್ಲಿ ಅವರ ಹೆಸರನ್ನು ಪುನರುಚ್ಚರಿಸಿತ್ತು. ಕೇಂದ್ರ ಸರಕಾರದಲ್ಲಿ ಬಾಕಿ ಇರುವ ಅತಿ ಹಳೆಯ ಶಿಫಾರಸು ಜಮ್ಮು ಮೂಲದ ಹಿರಿಯ ನ್ಯಾಯವಾದಿ ವಾಸಿಮ್ ನಗ್ರಾಲ್. ಸುಪ್ರೀಂ ಕೋರ್ಟ್ ಕೊಲೀಜಿಯಂ 2018 ಎಪ್ರಿಲ್ 6ರಂದು ಅವರ ಹೆಸರನ್ನು ಶಿಫಾರಸು ಮಾಡಿತ್ತು. ತರುವಾಯ 2019 ಜನವರಿ ಹಾಗೂ ಮತ್ತೆ 2021 ಮಾರ್ಚ್ ತಿಂಗಳಲ್ಲಿ ತನ್ನ ನಿರ್ಧಾರವನ್ನು ಅದು ಮರು ಪುನರುಚ್ಚರಿಸಿತ್ತು.
ನ್ಯಾಯವಾದಿ ನಿಡುಮೋಳು ಮಾಲಾ ಹಾಗೂ ಎಸ್ ಸೌಂಥಾರ್ ಅವರನ್ನು ಮದ್ರಾಸ್ ಉಚ್ಚ ನ್ಯಾಯಾಲಯದ ಹೆಚ್ಚುವರಿ ನ್ಯಾಯಾಧೀಶರಾಗಿ ನಿಯೋಜಿಸಲಾಗಿದೆ. ಫೆಬ್ರವರಿ 16ರಂದು ಕೊಲೀಜಿಯಂ ನ್ಯಾಯಧೀಶರಾಗಿ ನಿಯೋಜಿಸಲು ಮಾಲಾ ಹಾಗೂ ಸೌಂಥಾರ್ ಸೇರಿದಂತೆ 6 ಮಂದಿ ಹೆಸರನ್ನು ಶಿಫಾರಸು ಮಾಡಿತ್ತು. ಸುಂದರ್ ಮೋಹನ್, ಕಬಾಲಿ ಕುಮಾರೇಶ್ ಬಾಬು, ಅಬ್ದುಲ್ ಘನಿ ಅಬ್ದುಲ್ ಹಮೀದ್ ಹಾಗೂ ಆರ್. ಜೋನ್ ಸತ್ಯನ್ ಹೆಸರು ಈಗಲೂ ಬಾಕಿ ಇದೆ.
ದಿಲ್ಲಿ ಉಚ್ಚ ನ್ಯಾಯಾಲಯಕ್ಕೆ ನ್ಯಾಯಾಂಗ ಅಧಿಕಾರಿ ಪೂನಂ ಎ. ಬಾಂಬಾ ಹಾಗೂ ಸ್ವರ್ಣ ಕಾಂತಾ ಶರ್ಮಾ ಅವರನ್ನು ನಿಯೋಜಿಸಲಾಗಿದೆ. ಪಾಟ್ನಾ ಉಚ್ಚ ನ್ಯಾಯಾಲಯಕ್ಕೆ ನ್ಯಾಯವಾದಿ ರಾಜೀವ್ ರಾಯ್ ಹಾಗೂ ಹರೀಶ್ ಕುಮಾರ್ ಅವರನ್ನು ನಿಯೋಜಿಸಲಾಗಿದೆ. ನ್ಯಾಯಾಂಗ ಅಧಿಕಾರಿ ಉಮೇಶ್ ಚಂದ್ರ ಶರ್ಮಾ ಅವರನ್ನು ಅಲಹಾಬಾದ್ ಉಚ್ಚ ನ್ಯಾಯಾಲಯಕ್ಕೆ ನ್ಯಾಯಮೂರ್ತಿಯನ್ನಾಗಿ ನಿಯೋಜಿಸಲಾಗಿದೆ.