ಕೊಲ್ಲೂರು ದೇವಳದಲ್ಲಿನ ಟಿಪ್ಪು ಹೆಸರಿನ ಸಲಾಂ ಮಂಗಳಾರತಿ ಹೆಸರನ್ನು ತೆಗೆಯಲು ವಿಹಿಂಪ ಮನವಿ

Update: 2022-03-26 10:25 GMT

ಉಡುಪಿ, ಮಾ.26: ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಟಿಪ್ಪು ಸುಲ್ತಾನ್ ಹೆಸರಿನಲ್ಲಿ ಪ್ರತಿದಿನ ನಡೆಯುವ ಸಲಾಂ ಮಹಾಮಂಗಳಾರತಿಯ ಹೆಸರನ್ನು ತೆಗೆಯುವಂತೆ ಉಡುಪಿ ವಿಶ್ವ ಹಿಂದೂ ಪರಿಷತ್ ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಿಗೆ ಮನವಿ ಸಲ್ಲಿಸಿದೆ.

ಕೊಲ್ಲೂರು ದೇವಸ್ಥಾನವು ಐತಿಹಾಸಿಕ ಹಿನ್ನೆಲೆ ಇರುವ ಪವಿತ್ರ ಕ್ಷೇತ್ರ. ಇಲ್ಲಿ ಆದಿ ಶಂಕರಾಚಾರ್ಯರು ಮೂಕಾಂಬಿಕಾ ದೇವಿಯನ್ನು ನೆಲೆಗೊಳಿಸಿದ್ದಾರೆ. ಮೂಕಾಂಬಿಕಾ ದೇವಿಯ ದೇವಸ್ಥಾನದಲ್ಲಿ ಕೋಟ್ಯಂತರ ಭಕ್ತರು ಅತೀವ ನಂಬಿಕೆ ಇರಿಸಿಕೊಂಡಿದ್ದಾರೆ. ಇಂತಹ ಪುಣ್ಯ ಕ್ಷೇತ್ರದಲ್ಲಿ ನೂರಾರು ದೇವಸ್ಥಾನಗಳನ್ನು ಧ್ವಂಸಗೊಳಿಸಿ, ನರಮೇಧ ನಡೆಸಿರುವ ಟಿಪ್ಪುವಿನ ಹೆಸರಿನಲ್ಲಿ ಪ್ರತಿದಿನ ರಾತ್ರಿ 8 ಗಂಟೆಗೆ ದೇವಿ ಮೂಕಾಂಬಿಕೆಗೆ ಸಲಾಂ ಮಹಾಮಂಗಳಾರತಿಯಾಗುವುದು ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆ ತರುವಂತದ್ದು ಎಂದು ಮನವಿಯಲ್ಲಿ ದೂರಲಾಗಿದೆ.

ಇದರಿಂದ ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗೆ ಘಾಸಿಯುಂಟು ಮಾಡಿದೆ. ಸಲಾಂ ಎಂಬ ಹೆಸರಿನಲ್ಲಿ ಪ್ರತಿನಿತ್ಯ ದೇವಿಗೆ ಮಹಾಮಂಗಳಾರತಿಯಾಗುವುದು ಗುಲಾಮಗಿರಿಯ ಸಂಕೇತವಾಗಿದೆ. ಆದುದರಿಂದ ತಕ್ಷಣ ಕ್ಷೇತ್ರದ ವ್ಯವಸ್ಥಾಪನಾ ಮಂಡಳಿ ಮತ್ತು ಧಾರ್ಮಿಕ ದತ್ತಿ ಇಲಾಖೆ ಗಂಭೀರವಾಗಿ ಪರಿಗಣಿಸಿ ಸಲಾಂ ಹೆಸರನ್ನು ತೆಗೆದು ಕೇವಲ ದೇವರ ಹೆಸರಿನಲ್ಲಿ ಮಹಾ ಮಂಗಳಾರತಿ ಮಾಡಲು ಕ್ರಮ ತೆಗೆದುಕೊಳ್ಳಬೇಕು ಎಂದು ವಿಹಿಂಪ ಮನವಿಯಲ್ಲಿ ಒತ್ತಾಯಿಸಿದೆ.

ಈ ಸಂದರ್ಭದಲ್ಲಿ ವಿಹಿಂಪ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್, ಬೈಂದೂರು ಪ್ರಖಂಡ ಅಧ್ಯಕ್ಷ ಜಗದೀಶ್ ಕೊಲ್ಲೂರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News