×
Ad

ಶ್ರೀಲಂಕಾ: ತೈಲ ದರ ದಾಖಲೆ ಮಟ್ಟಕ್ಕೆ ಏರಿಕೆ; ಲೀಟರ್ ಪೆಟ್ರೋಲ್‌ಗೆ 303 ರೂ.

Update: 2022-03-26 22:19 IST

ಕೊಲಂಬೊ, ಮಾ.26: ತೈಲವನ್ನು ಆಮದು ಮಾಡಿಕೊಳ್ಳಲು ವಿದೇಶಿ ವಿನಿಮಯದ ಕೊರತೆ ಎದುರಾಗಿರುವ ಶ್ರೀಲಂಕಾದಲ್ಲಿ ತೈಲ ದರದಲ್ಲಿ ಶನಿವಾರ ಮತ್ತೆ 20% ಏರಿಕೆಯಾಗಿದ್ದು ಇದೀಗ ದ್ವೀಪರಾಷ್ಟ್ರದಲ್ಲಿ 1 ಲೀಟರ್ ಪೆಟ್ರೋಲ್‌ನ ದರ 303 ರೂ.ಗೆ ತಲುಪಿದೆ ಎಂದು ವರದಿಯಾಗಿದೆ.

ಶ್ರೀಲಂಕಾದ ತೈಲ ಮಾರುಕಟ್ಟೆಯ ಮೂರನೇ ಒಂದು ಭಾಗದಷ್ಟು ತೈಲ ಪೂರೈಸುವ ಲಂಕಾ ಐಒಸಿ(ಇಂಡಿಯನ್ ಆಯಿಲ್ ಕಾರ್ಪೊರೇಶನ್‌ನ ಶ್ರೀಲಂಕಾ ಸಂಸ್ಥೆ) ಶನಿವಾರ 1 ಲೀಟರ್ ಪೆಟ್ರೋಲ್ ದರವನ್ನು 49 ರೂ. ಹೆಚ್ಚಿಸಿದ್ದು 303 ರೂ.ಗೆ ತಲುಪಿದೆ. ಕಳೆದ 15 ದಿನದಲ್ಲಿ 2ನೇ ಬಾರಿ ಬೆಲೆ ಏರಿಕೆ ಮಾಡಿದಂತಾಗಿದೆ. ದೇಶದ ಕರೆನ್ಸಿಯಾದ ರೂಪಾಯಿ ಈ ತಿಂಗಳಿನಲ್ಲಿ ಅಮೆರಿಕನ್ ಡಾಲರ್ ಹಾಗೂ ಇತರ ಪ್ರಮುಖ ಕರೆನ್ಸಿಗಳ ಎದುರು 30%ದಷ್ಟು ಅಪಮೌಲ್ಯಗೊಂಡಿರುವುದರಿಂದ ತೈಲ ದರ ಏರಿಕೆ ಅನಿವಾರ್ಯ ಎಂದು ಲಂಕಾ ಐಒಸಿ ಹೇಳಿದೆ. ಶ್ರೀಲಂಕಾದ ಸರಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆ ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಶನ್ ಕೂಡಾ ದರ ಏರಿಸಲು ನಿರ್ಧರಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 1948ರಲ್ಲಿ ಬ್ರಿಟಿಷರಿಂದ ಸ್ವತಂತ್ರಗೊಂಡ ಬಳಿಕದ ಅತ್ಯಂತ ತೀವ್ರ ಆರ್ಥಿಕ ಸಂಕಷ್ಟದ ಸುಳಿಗೆ ಶ್ರೀಲಂಕಾ ಸಿಲುಕಿದ್ದು ದೇಶದ ವಿದೇಶಿ ವಿನಿಮಯ ದಾಸ್ತಾನು ಕನಿಷ್ಟ ಮಟ್ಟಕ್ಕೆ ತಲುಪಿದೆ. ಇದರಿಂದ ಆಹಾರ, ತೈಲ, ಔಷಧ ಮುಂತಾದ ದೈನಂದಿನ ಅಗತ್ಯದ ವಸ್ತುಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಲು ತೊಡಕಾಗಿದೆ.

ತೈಲ ಖರೀದಿಸಲು ಮಾರುದ್ದದ ಸರತಿ ಸಾಲಿನಲ್ಲಿ ನಿಂತಿದ್ದ 4 ಮಂದಿ ಕುಸಿದುಬಿದ್ದು ಮೃತಪಟ್ಟ ಘಟನೆ ಕಳೆದ ವಾರ ವರದಿಯಾಗಿದೆ. ಪ್ರವಾಸೋದ್ದಿಮೆಯನ್ನೇ ಪ್ರಮುಖ ಆದಾಯ ಮೂಲವನ್ನಾಗಿರಿಸಿಕೊಂಡಿರುವ ದ್ವೀಪರಾಷ್ಟ್ರದ ಅರ್ಥವ್ಯವಸ್ಥೆಯ ಮೇಲೆ ಕಳೆದ 2 ವರ್ಷದಿಂದ ಕೊರೋನ ಸಾಂಕ್ರಾಮಿಕ ಮಾರಕ ಆಘಾತ ನೀಡಿದೆ. ವಿದೇಶಿ ವಿನಿಮಯವನ್ನು ಉಳಿಸಿಕೊಳ್ಳುವ ಉದ್ದೇಶದಿಂದ 2020ರ ಮಾರ್ಚ್‌ನಲ್ಲಿ ಸರಕಾರ ಆಮದಿನ ಮೇಲೆ ನಿಷೇಧ ಹೇರಿತ್ತು.

ಇದರಿಂದ ದೈನಂದಿನ ಬಳಕೆಯ ವಸ್ತುಗಳ ಕೊರತೆ ಎದುರಾಗಿದ್ದು ಕಳೆದ ತಿಂಗಳು ಆಹಾರದ ದರ 25% ಹೆಚ್ಚಿದ್ದರೆ, ಒಟ್ಟು ಹಣದುಬ್ಬರದ ಪ್ರಮಾಣ 17.5%ಕ್ಕೆ ಏರಿಕೆಯಾಗಿದೆ. ಅಲ್ಲದೆ ವಿದ್ಯುತ್ ಉತ್ಪಾದನೆಗೆ ತೈಲದ ಕೊರತೆ ಎದುರಾಗಿರುವುದರಿಂದ ವಿದ್ಯುತ್ ಉತ್ಪಾದನೆ ಕುಸಿದಿದ್ದು ದೇಶದೆಲ್ಲೆಡೆ ದಿನಕ್ಕೆ 5 ಗಂಟೆ ವಿದ್ಯುತ್ ಕಡಿತಕ್ಕೆ ಸರಕಾರ ಆದೇಶಿಸಿದೆ. ಜೊತೆಗೆ, ಅಂತರಾಷ್ಟ್ರೀಯ ಸಾಲದ ಹೊರೆ ಹೆಚ್ಚಿರುವುದರಿಂದ ತುರ್ತು ಸಾಲಕ್ಕೆ ಅಂತರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್)ಗೆ ಮನವಿ ಮಾಡಿರುವುದಾಗಿ ಸರಕಾರ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News