ತೃಪ್ತಿಕರವಲ್ಲ, ಆದರೆ ಅನಿರೀಕ್ಷಿತವಲ್ಲ: ಉಕ್ರೇನ್ ಕುರಿತ ಭಾರತದ ನಿಲುವಿಗೆ ಅಮೆರಿಕದ ಪ್ರತಿಕ್ರಿಯೆ

Update: 2022-03-26 17:12 GMT

ವಾಷಿಂಗ್ಟನ್, ಮಾ.26: ಉಕ್ರೇನ್‌ನಲ್ಲಿನ ಬಿಕ್ಕಟ್ಟಿನ ವಿಷಯದಲ್ಲಿ ವಿಶ್ವಸಂಸ್ಥೆಯಲ್ಲಿ ಭಾರತ ತಳೆದಿರುವ ನಿಲುವು ತೃಪ್ತಿಕರವಾಗಿಲ್ಲ. ಆದರೆ ರಶ್ಯದ ಜತೆಗಿನ ಆ ದೇಶದ ಐತಿಹಾಸಿಕ ಸಂಬಂಧವನ್ನು ಗಮನಿಸಿದರೆ ಅನಿರೀಕ್ಷಿತವಲ್ಲ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

ರಶ್ಯದೊಂದಿಗಿನ ನಿಕಟ ಬಾಂಧವ್ಯಕ್ಕೆ ಪರ್ಯಾಯ ಕ್ರಮಗಳನ್ನು ಭಾರತ ಕಂಡುಕೊಳ್ಳುವ ಅಗತ್ಯವಿದೆ ಎಂದು ಶ್ವೇತಭವನದ ರಾಷ್ಟ್ರೀಯ ಭದ್ರತಾ ಸಮಿತಿಯ ಇಂಡೊ-ಪೆಸಿಫಿಕ್ ವಿಭಾಗದ ನಿರ್ದೇಶಕಿ ಮಿರಾ ರ್ಯಾಪ್ ಹೂಪರ್ ಹೇಳಿದ್ದಾರೆ. ವಾಷಿಂಗ್ಟನ್‌ನ ಸ್ಕೂಲ್ ಆಫ್ ಅಡ್ವಾನ್ಸ್‌ಡ್ ಇಂಟರ್‌ನ್ಯಾಷನಲ್ ಸ್ಟಡೀಸ್ ಆಯೋಜಿಸಿದ್ದ ಆನ್‌ಲೈನ್ ವಿಚಾರಸಂಕಿರಣದಲ್ಲಿ ಅವರು ಉಪನ್ಯಾಸ ನೀಡಿದರು. ಚೀನಾದೊಂದಿಗಿನ ಸಂಬಂಧ ಹದಗೆಟ್ಟ ಕಾರಣಕ್ಕೆ ಭಾರತವು ರಶ್ಯಕ್ಕೆ ಇನ್ನಷ್ಟು ನಿಕಟವಾಯಿತು. ಆದರೆ ರಕ್ಷಣಾ ಕ್ಷೇತ್ರದಲ್ಲಿ ರಶ್ಯಾದ ಮೇಲಿನ ಅವಲಂಬನೆಯ ಬಗ್ಗೆ ಭಾರತ ಆಳವಾಗಿ ಚಿಂತನೆ ನಡೆಸುವುದು ಒಳಿತು ಎಂದವರು ಹೇಳಿದ್ದಾರೆ.

ಭಾರತದ ಜತೆಗಿನ ಸಂಬಂಧವನ್ನು ಇನ್ನಷ್ಟು ನಿಕಟವಾಗಿಸುವುದು, ಅದಕ್ಕಾಗಿ ಅವರಿಗೆ ಆಯ್ಕೆಗಳನ್ನು ನೀಡುವುದು ಮತ್ತು ಕಾರ್ಯತಂತ್ರದ ಸ್ವಾಯತ್ತೆಯನ್ನು ನಿರಂತರ ಮುಂದುವರಿಸುವ ಬಗ್ಗೆ ನಮ್ಮ ದೃಷ್ಟಿಕೋನ ಇರಬೇಕು ಎಂದು ಭಾವಿಸುವುದಾಗಿ ಹೂಪರ್ ಹೇಳಿದರು. ಅಮೆರಿಕ ಹಾಗೂ ಅದರ ಮಿತ್ರದೇಶಗಳು ತಮ್ಮ ಪೂರೈಕೆ ಸರಪಳಿಯ ಬಗ್ಗೆ ಗಮನ ಹರಿಸುವ ಅಗತ್ಯವಿದೆ ಮತ್ತು ರಶ್ಯದ ರಕ್ಷಣಾ ಸಾಮಾಗ್ರಿಗಳ ಪೂರೈಕೆಯ ವ್ಯವಸ್ಥೆಗೆ ಬದಲಿ ವ್ಯವಸ್ಥೆ ಕಂಡುಕೊಳ್ಳಲು ಇತರ ದೇಶಗಳಿಗೆ ಯಾವ ರೀತಿ ನೆರವಾಗಬಹುದು ಎಂದು ಯೋಜನೆ ರೂಪಿಸಬೇಕಿದೆ. ರಶ್ಯದಿಂದ ಪಡೆಯುತ್ತಿರುವ ಶಸ್ತ್ರಾಸ್ತ್ರ ಅಥವಾ ಕಂಪ್ಯೂಟರ್ ಚಿಪ್‌ಗಳಿಗೆ ಪರ್ಯಾಯ ವ್ಯವಸ್ಥೆ ಕಂಡುಹಿಡಿದರೆ ಹಲವು ದೇಶಗಳು ರಶ್ಯದ ಮೇಲಿನ ಅವಲಂಬನೆಯಿಂದ ಹೊರಬರಲು ಸಾಧ್ಯವಿದೆ ಎಂದು ಕೂಪರ್ ಹೇಳಿದ್ದಾರೆ.

ಉಕ್ರೇನ್ ವಿರುದ್ಧದ ರಶ್ಯದ ಆಕ್ರಮಣವನ್ನು ಖಂಡಿಸುವಲ್ಲಿ ಕ್ವಾಡ್ ಸಂಘಟನೆಯ ಇತರ ಸದಸ್ಯ ದೇಶಗಳಿಗೆ ಹೋಲಿಸಿದರೆ ಭಾರತ ಸ್ವಲ್ಪ ನಡುಗುತ್ತಿದೆ ಎಂದು ಅಮೆರಿಕದ ಅಧ್ಯಕ್ಷ ಬೈಡನ್ ಕಳೆದ ವಾರ ಹೇಳಿಕೆ ನೀಡಿದ್ದರು. ಕ್ವಾಡ್‌ನ ಇತರ ಸದಸ್ಯರಾದ ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾ ರಶ್ಯದ ವಿರುದ್ಧ ನಿರ್ಬಂಧ ಹೇರಿರುವುದನ್ನು ಅವರು ಉಲ್ಲೇಖಿಸಿದ್ದರು. ಇತ್ತೀಚಿನ ದಿನಗಳಲ್ಲಿ ಭಾರತವು ಅಮೆರಿಕದೊಂದಿಗೆ ನಿಕಟ ಸಂಪರ್ಕ ಬೆಳೆಸಿಕೊಂಡಿದೆ ಮತ್ತು ಚೀನಾದ ಪ್ರಾಬಲ್ಯವನ್ನು ನಿಯಂತ್ರಿಸುವ ಉದ್ದೇಶದ ಕ್ವಾಡ್ ಸಂಘಟನೆಯ ಪ್ರಮುಖ ಸದಸ್ಯನಾಗಿದೆ. ಆದರೆ, ರಕ್ಷಣಾ ಪಡೆಗಳಿಗೆ ಅಗತ್ಯವಿರುವ ಪ್ರಮುಖ ಶಸ್ತ್ರಾಸ್ತ್ರ ಸಹಿತ ಹಲವು ಪ್ರಮುಖ ಕ್ಷೇತ್ರಗಳಲ್ಲಿ ರಶ್ಯದ ಜತೆ ನಿಕಟ ಸಂಪರ್ಕ ಮುಂದುವರಿಸಿದೆ. ಉಕ್ರೇನ್ ಮೇಲಿನ ರಶ್ಯದ ಆಕ್ರಮಣವನ್ನು ಖಂಡಿಸುವ ನಿರ್ಣಯದ ಬಗ್ಗೆ ವಿಶ್ವಸಂಸ್ಥೆ ಹಾಗೂ ವಿಶ್ವಸಂಸ್ಥೆಯ ಭದ್ರತಾ ಸಮಿತಿ ಸಭೆಯಲ್ಲಿ ನಡೆದ ಮತದಾನದಿಂದ ಭಾರತ ದೂರ ಉಳಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News