ಉತ್ತರ ಕೊರಿಯಾದ ವಿರುದ್ಧ ಕಠಿಣ ನಿರ್ಬಂಧ: ಅಮೆರಿಕ ಆಗ್ರಹ
ವಾಷಿಂಗ್ಟನ್, ಮಾ.26: ಉತ್ತರಕೊರಿಯಾವು ಬೃಹತ್ ಖಂಡಾಂತರ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿಸುವ ಮೂಲಕ ನಿರಂತರ ಅಪಾಯಕಾರಿ ಪ್ರಚೋದನೆ ನಡೆಸುತ್ತಿರುವುದರಿಂದ ಆ ದೇಶದ ವಿರುದ್ಧ ಅತ್ಯಂತ ಕಠಿಣ ಅಂತರ್‌ರಾಷ್ಟ್ರೀಯ ನಿರ್ಬಂಧ ಜಾರಿಗೊಳಿಸಬೇಕು ಎಂದು ವಿಶ್ವಸಂಸ್ಥೆಯ ಭದ್ರತಾ ಸಮಿತಿ ಸಭೆಯಲ್ಲಿ ಅಮೆರಿಕ ಆಗ್ರಹಿಸಿದೆ.
ಉತ್ತರ ಕೊರಿಯಾಕ್ಕೆ ಸಂಬಂಧಿಸಿ ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಹಾಲಿ ನಿರ್ಣಯವನ್ನು ಪೂರ್ಣಪ್ರಮಾಣದಲ್ಲಿ ಜಾರಿಗೊಳಿಸಲು ವಿಶ್ವಸಂಸ್ಥೆಯ ಸದಸ್ಯ ದೇಶಗಳನ್ನು ಅಮೆರಿಕ ಆಗ್ರಹಿಸುತ್ತಿದೆ. ಉತ್ತರ ಕೊರಿಯಾ ನಿರಂತರವಾಗಿ ಅಪಾಯವನ್ನು ಪ್ರಚೋದಿಸುತ್ತಿರುವುದರಿಂದ 2017ರ ಡಿಸೆಂಬರ್‌ನಲ್ಲಿ ಆ ದೇಶದ ವಿರುದ್ಧ ವಿಶ್ವಸಂಸ್ಥೆ ಭದ್ರತಾ ಸಮಿತಿ ಜಾರಿಗೊಳಿಸಿದ್ದ ನಿರ್ಣಯವನ್ನು ಪರಿಷ್ಕರಿಸಿ ಮತ್ತಷ್ಟು ಸದೃಢಗೊಳಿಸಬೇಕು ಎಂದು ವಿಶ್ವಸಂಸ್ಥೆಯಲ್ಲಿನ ಅಮೆರಿಕದ ರಾಯಭಾರಿ ಲಿಂಡಾ ಥಾಮಸ್ ಗ್ರೀನ್‌ಫೀಲ್ಡ್ ಆಗ್ರಹಿಸಿದ್ದಾರೆ. 2017ರಲ್ಲಿ ನಿರ್ಣಯವನ್ನು ಅನುಮೋದಿಸುವಾಗ ‘ಉತ್ತರಕೊರಿಯಾ ಖಂಡಾಂತರ ಕ್ಷಿಪಣಿ ಪ್ರಯೋಗಿಸಿದರೆ ಮತ್ತಷ್ಟು ಕ್ರಮ ಕೈಗೊಳ್ಳುವ’ ಬಗ್ಗೆ ನಿರ್ಧರಿಸಲಾಗಿತ್ತು. ಈಗ ಆಗುತ್ತಿರುವುದೂ ಅದೇ ಆಗಿದೆ. ಈಗ ಆ ಸಮಯ ಬಂದಿದೆ ಎಂದು ಲಿಂಡಾ ಥಾಮಸ್ ಹೇಳಿದ್ದಾರೆ.
2017ರಲ್ಲಿ ಉತ್ತರಕೊರಿಯಾ ಪರೀಕ್ಷಿಸಿದ ಹ್ವಸೋಂಗ್-15 ಖಂಡಾಂತರ ಕ್ಷಿಪಣಿಯು ಅಮೆರಿಕ ಖಂಡವನ್ನು ತಲುಪುವ ಸಾಮರ್ಥ್ಯ ಹೊಂದಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ.