ಪಂದ್ಯ ಸೋತರೂ ಸೌಹಾರ್ದ ಸಂದೇಶದ ಮೂಲಕ ಜನರ ಹೃದಯ ಗೆದ್ದ ಭಾರತೀಯ ಫುಟ್ಬಾಲ್ ತಂಡ

Update: 2022-03-28 02:03 GMT
photo: twitter.com/IndianFootball

ಬಹ್ರೈನ್: ಸೌಹಾರ್ದ ಪಂದ್ಯದಲ್ಲಿ ಬೆಲಾರುಸ್ ವಿರುದ್ಧ 0-3 ಅಂತರದ ಸೋಲಿನೊಂದಿಗೆ ಭಾರತೀಯ ಫುಟ್ಬಾಲ್ ತಂಡವು ತನ್ನ ಬಹ್ರೇನ್ ಪ್ರವಾಸವನ್ನು ಕೊನೆಗೊಳಿಸಿದೆ, ಅದಾಗ್ಯೂ,  ಮೂರು ಭಾರತೀಯ ಆಟಗಾರರು ಒಟ್ಟಿಗೆ ಪ್ರಾರ್ಥಿಸುವ ಚಿತ್ರವು ಕ್ರೀಡಾಭಿಮಾನಿಗಳ ಹೃದಯವನ್ನು ಗೆದ್ದಿದೆ.

ಬೆಲಾರುಸ್ ವಿರುದ್ಧದ ಪಂದ್ಯದ ಮೊದಲು ಆಟಗಾರರು ಒಟ್ಟಿಗೆ ನಿಂತು ಪ್ರಾರ್ಥಿಸುವ ಚಿತ್ರವು ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ವೈರಲ್‌ ಆಗಿದ್ದು, ವಿಭಿನ್ನ ನಂಬಿಕೆಯ ಮೂವರು ಭಾರತೀಯ ತಂಡದ ಆಟಗಾರರು ತಮ್ಮ ನಂಬಿಕೆಗಳಿಗೆ ಅನುಗುಣವಾಗಿ ಪ್ರಾರ್ಥಿಸುವ ಚಿತ್ರವು ʼನಿಜವಾದ ಭಾರತೀಯತೆʼಯನ್ನು ಜಗತ್ತಿಗೆ ಅನಾವರಣ ಮಾಡಿದೆ.

ಮಾರ್ಚ್ 26 ರ ಪಂದ್ಯಾಟಗಳಿಗೆ ಸಂಬಂಧಿಸಿದ ಇತರ ಕೆಲವು ಚಿತ್ರಗಳೊಂದಿಗೆ ಭಾರತೀಯ ಫುಟ್ಬಾಲ್ ತಂಡದ ಅಧಿಕೃತ ಖಾತೆಯಿಂದ ಈ ಚಿತ್ರವನ್ನು ಹಂಚಿಕೊಳ್ಳಲಾಗಿದೆ. ಈ ನಿರ್ದಿಷ್ಟ ಚಿತ್ರವು ನೆಟ್ಟಿಗರ ಗಮನ ಸೆಳೆದಿದ್ದು, ಭಾರತೀಯ ಫುಟ್‌ಬಾಲ್ ತಂಡವು ಎಲ್ಲಾ ನಂಬಿಕೆಗಳನ್ನು ಗೌರವಿಸುವ ಭಾರತದ ಮೂಲಗುಣವನ್ನು ಪ್ರತಿಬಿಂಬಿಸುತ್ತಿದೆ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಚಿತ್ರವನ್ನು ಹಂಚಿಕೊಂಡಿರುವ ಡಾ. ಗೌರವ್‌ ಗಾರ್ಗ್‌ ಎಂಬವರು, ʼ (ಇದು) ಭಾರತದ ನಿಜವಾದ ಆತ್ಮ. ಭಾರತೀಯ ಫುಟ್ಬಾಲ್ ಆಟಗಾರರು ಪಂದ್ಯಕ್ಕೂ ಮುನ್ನ ತಮ್ಮದೇ ರೀತಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.ʼ ಎಂದು ಟ್ವೀಟ್‌ ಮಾಡಿದ್ದಾರೆ.

“ಫುಟ್ಬಾಲ್ ಯಾವುದೇ ಧರ್ಮ ಮತ್ತು ಯಾವುದೇ ಜನಾಂಗವನ್ನು ಮೀರಿದೆ ಅದಕ್ಕಾಗಿಯೇ ಇದು ಸುಂದರವಾದ ಆಟವಾಗಿದೆ. ಇದು ಭಾರತದ ಸೌಂದರ್ಯ.  ನೀವು ಇದನ್ನು ಜಗತ್ತಿನಲ್ಲಿ ಎಲ್ಲಿಯೂ ಹುಡುಕಲು ಸಾಧ್ಯವಿಲ್ಲ. ಆದರೆ ದುಃಖಕರವೆಂದರೆ ಕೆಲವು ರಾಜಕೀಯ ಪಕ್ಷಗಳು ಇದನ್ನು ಹಾಳುಮಾಡಲು ಪ್ರಯತ್ನಿಸುತ್ತಿವೆ.” ಎಂದು ಮಹಿಯಾರ್‌ ಶರ್ಮ ಎಂಬವರು ಟ್ವೀಟ್‌ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News