ಎಸೆಸೆಲ್ಸಿ ಪರೀಕ್ಷೆ: ಉಡುಪಿ ಜಿಲ್ಲೆಯಲ್ಲಿ ಮೊದಲ ದಿನ 210 ಮಂದಿ ಗೈರು

Update: 2022-03-28 13:03 GMT

ಉಡುಪಿ : ಯಾವುದೇ ಗೊಂದಲ, ಅಹಿತಕರ ಘಟನೆಗಳಿಲ್ಲದೇ ಉಡುಪಿ ಜಿಲ್ಲೆಯ 58 ಪರೀಕ್ಷಾ ಕೇಂದ್ರಗಳಲ್ಲಿ ಸೋಮವಾರ ಪ್ರಾರಂಭಗೊಂಡ  ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯ ಮೊದಲ ದಿನದಂದು ಒಟ್ಟು 210 ಮಂದಿ ವಿದ್ಯಾರ್ಥಿಗಳು ಗೈರುಹಾಜರಾಗಿದ್ದಾರೆ.

ಇವರಲ್ಲಿ ಹೊಸದಾಗಿ ಪರೀಕ್ಷೆ ಬರೆಯುವ 117 ಮಂದಿ ಹಾಗೂ ಖಾಸಗಿ ಅಭ್ಯರ್ಥಿಗಳು 93 ಮಂದಿ ಇದ್ದಾರೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.

ಹಿಜಾಬ್ ವಿವಾದದ ಆತಂಕ, ನ್ಯಾಯಾಲಯ ನೀಡಿದ ಆದೇಶದ ಪಾಲನೆ, ಸರಕಾರದ ಸುತ್ತೋಲೆಗಳ ನಡುವೆ ಇಲಾಖೆ ನೀಡಿದ ಸೂಚನೆಗಳಂತೆ ಇಂದು ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದರು. ಗೈರುಹಾಜರಾದವರು ಅನ್ಯ ಕಾರಣಗಳಿಗಾಗಿ ಪರೀಕ್ಷೆಗೆ ಗೈರಾಗಿದ್ದಾರೆಯೇ ಹೊರತು, ಜಿಲ್ಲೆಯಲ್ಲಿ ಹಿಜಾಬ್ ಕಾರಣಕ್ಕಾಗಿ ಯಾರೂ ಪರೀಕ್ಷೆ ಬರೆಯದೇ ಉಳಿದಿಲ್ಲ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

ಇಂದು ನಡೆದ ಪ್ರಥಮ ಭಾಷಾ ಪರೀಕ್ಷೆಗೆ ಗೈರುಹಾಜರಾದವರಲ್ಲಿ ಬಹುಪಾಲು ಮಂದಿ ಕೊರೋನ ಕಾರಣದಿಂದ ಊರಿಗೆ ತೆರಳಿ ಇನ್ನೂ ಮರಳದಿರುವ ಉತ್ತರ ಕರ್ನಾಟಕದ ವಿದ್ಯಾರ್ಥಿಗಳಿದ್ದಾರೆ. ಹಾಜರಾತಿ ಕಡ್ಡಾಯ ಇಲ್ಲದ ಕಾರಣ ಇವರ ಹೆಸರುಗಳನ್ನು ಪರೀಕ್ಷೆಗೆ ನೊಂದಾಯಿಸಿಕೊಳ್ಳಲಾಗಿತ್ತು ಎಂದವರು ತಿಳಿಸಿದರು.

ಜಿಲ್ಲೆಯ ಐದು ವಲಯಗಳಲ್ಲಿ ೧೩,೬೬೬ ಮಂದಿ ಫ್ರಷರ್‌ಗಳು, ೯ ಮಂದಿ ಪುನರಾವರ್ತಿತ ವಿದ್ಯಾರ್ಥಿಗಳು ಸೇರಿ ಒಟ್ಟು ೧೩೬೭೫ ಮಂದಿ ಹೊಸಬರು ಪರೀಕ್ಷೆಗೆ ಹೆಸರು ನೊಂದಾಯಿಸಿಕೊಂಡಿದ್ದರು. ಇವರಲ್ಲಿ ೧೩೫೫೦ ಮಂದಿ ಫ್ರಷರ್‌ಗಳು ಹಾಗೂ ಎಂಟು ಮಂದಿ ರಿಪೀಟರ್ಸ್‌ ಸೇರಿ ೧೩೫೫೮ ಮಂದಿ ಇಂದು ಪರೀಕ್ಷೆ ಬರೆದಿದ್ದಾರೆ. ಈ ಮೂಲಕ ೧೧೬ ಮಂದಿ ಫ್ರಷರ್ ಹಾಗೂ ಒಬ್ಬರು ರಿಪೀಟರ್ಸ್‌ ಸೇರಿ ಒಟ್ಟು ೧೧೭ ಮಂದಿ ಗೈರುಹಾಜರಾಗಿದ್ದರು.

ಇದೇ ವೇಳೆ ಖಾಸಗಿಯಾಗಿ ಪರೀಕ್ಷೆ ಬರೆಯಲು ಹೆಸರು ನೊಂದಾಯಿಸಿ ಕೊಂಡಿದ್ದ ಒಟ್ಟು ೩೦೫ (೨೯೮+೭) ಮಂದಿಯಲ್ಲಿ ೨೧೨ ಮಂದಿ (೨೦೭+೫) ಮಂದಿ ಇಂದು ಪರೀಕ್ಷೆಗೆ ಹಾಜರಾಗಿದ್ದು ೯೩ ಮಂದಿ (೯೧+೨) ಗೈರುಹಾಜರಾಗಿದ್ದರು ಎಂದು ಇಲಾಖೆಯ ಮಾಹಿತಿ ತಿಳಿಸಿದೆ. ಖಾಸಗಿ ಅಭ್ಯರ್ಥಿಗಳಿಗಾಗಿ ಕುಂದಾಪುರ ಮತ್ತು ಉಡುಪಿ ದಕ್ಷಿಣ ವಲಯದಲ್ಲಿ ಪರೀಕ್ಷಾ ಕೇಂದ್ರಗಳಿವೆ.

ಫ್ರಷರ್‌ಗಳ ಪೈಕಿ ಬೈಂದೂರು ವಲಯದಲ್ಲಿ ೧೩, ಕುಂದಾಪುರದಲ್ಲಿ ೩೭, ಕಾರ್ಕಳದಲ್ಲಿ ೧೦, ಉಡುಪಿ ಉತ್ತರದಲ್ಲಿ ೩೨ ಹಾಗೂ ಉಡುಪಿ ದಕ್ಷಿಣ ವಲಯದಲ್ಲಿ  ೨೪ ಮಂದಿ ಪರೀಕ್ಷೆಗೆ ಗೈರುಹಾಜರಾಗಿದ್ದಾರೆ.

ಈ ಬಾರಿ ಯಾರೂ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ ಪರೀಕ್ಷೆ ಬರೆಯಲಿಲ್ಲ. ಆದರೆ ಪರೀಕ್ಷಾ ಕೇಂದ್ರಗಳಲ್ಲಿ ವ್ಯವಸ್ಥೆಗೊಳಿಸಲಾದ ವಿಶೇಷ ಕೊಠಡಿಗಳಲ್ಲಿ ಒಟ್ಟು ೧೨ ಮಂದಿ ಪರೀಕ್ಷೆ ಬರೆದಿದ್ದಾರೆ. ಇವರಲ್ಲಿ ಮೂವರು ಕುಂದಾಪುರ, ನಾಲ್ವರು ಉಡುಪಿ ಉತ್ತರ ಹಾಗೂ ಐವರು ಉಡುಪಿ ದಕ್ಷಿಣದಲ್ಲಿ ಪರೀಕ್ಷೆ ಬರೆದಿದ್ದಾರೆ. ಕೋವಿಡ್ ರೋಗಲಕ್ಷಣವಿದ್ದವರು ಹಾಗೂ ಅನಾರೋಗ್ಯದಿಂದ ಬಳಲುತಿದ್ದವರಿಗಾಗಿ ಈ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ.

ಇಂದು ಪ್ರಥಮ ಭಾಷಾ ಪರೀಕ್ಷೆ (ಕನ್ನಡ, ಇಂಗ್ಲೀಷ್ ಅಥವಾ ಉರ್ದು)  ಬೆಳಗ್ಗೆ ೧೦:೩೦ರಿಂದ ಅಪರಾಹ್ನ ೧:೪೫ರವರೆಗೆ ಸುಗಮವಾಗಿ ನಡೆದಿದ್ದು, ಬುಧವಾರ ಮಾ.30ರಂದು ದ್ವಿತೀಯ ಭಾಷಾ ಪರೀಕ್ಷೆ ನಡೆಯಲಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News