×
Ad

ಜಿಲ್ಲೆಯ ಎಲ್ಲಾ 0-5 ವರ್ಷದ ಮಕ್ಕಳಿಕೆ ಪೊಲಿಯೋ ಲಸಿಕೆ ಕಡ್ಡಾಯ: ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ

Update: 2025-12-16 20:20 IST

ಉಡುಪಿ: ಇದೇ ಡಿ.21ರ ರವಿವಾರ ಪಲ್ಸ್ ಪೊಲಿಯೋ ಕಾರ್ಯಕ್ರಮ ಜಿಲ್ಲೆಯಾದ್ಯಂತ ನಡೆಯಲಿದ್ದು, ಲಸಿಕಾ ಕೇಂದ್ರಗಳಲ್ಲಿ ಬೆಳಗ್ಗೆ 8:00ರಿಂದ ಸಂಜೆ 5:00ಗಂಟೆಯವರೆಗೆ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದೆ. ಪೋಷಕರು ತಮ್ಮ 0-5ವರ್ಷದ ಮಕ್ಕಳನ್ನು ಲಸಿಕಾ ಕೇಂದ್ರಗಳಿಗೆ ಕರೆದೊಯ್ದು ತಪ್ಪದೇ ಲಸಿಕೆ ಹಾಕಿಸಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಎಲ್ಲಾ ಹೆತ್ತವರಿಗೆ ಕರೆ ನೀಡಿದ್ದಾರೆ.

ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಇಂದು ನಡೆದ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಜಿಲ್ಲಾ ಲಸಿಕಾ ಕಾರ್ಯಪಡೆ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ರಾಷ್ಟ್ರೀಯ ಪಲ್ಸ್ ಪೊಲೀಯೋ ಕಾರ್ಯಕ್ರಮದಡಿಯಲ್ಲಿ ಡಿ.21ರಂದು ಜಿಲ್ಲೆಯಲ್ಲಿರುವ 0-5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಸುಮಾರು 657 ಲಸಿಕಾ ಕೇಂದ್ರಗಳಲ್ಲಿ ಪೊಲೀಯೋ ಹನಿಗಳನ್ನು ಹಾಕಲಾಗುವುದು ಎಂದ ಅವರು, ಪ್ರತಿಯೊಬ್ಬ ಮಗುವಿಗೂ ಪಲ್ಸ್ ಪೊಲೀಯೋ ಲಸಿಕೆ ದೊರೆಯು ವಂತೆ ನೋಡಿಕೊಳ್ಳಬೇಕು ಎಂದವರು ಸಂಬಂಧಿತರಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಐದು ವರ್ಷದೊಳಗಿನ ಒಟ್ಟು 75,395 ಮಕ್ಕಳನ್ನು ಈಗಾಗಲೇ ಗುರುತಿಸಲಾಗಿದೆ. ಮಕ್ಕಳಿಗೆ ಲಸಿಕೆಗಳನ್ನು ನೀಡಲು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಲಸಿಕಾ ಕೇಂದ್ರಗಳ ಜೊತೆಯಲ್ಲಿ 16 ಟ್ರಾನ್ಸಿಟ್ ಬೂತುಗಳು, 5 ಮೊಬೈಲ್ ಟೀಮ್‌ಗಳಿದ್ದು, ಇದಕ್ಕಾಗಿ 2180 ಲಸಿಕೆದಾರರು ಹಾಗೂ 155 ಮೇಲ್ವಿಚಾರಕರನ್ನು ನೇಮಿಸಲಾಗಿದೆ. ನಗರಸಭಾ ವ್ಯಾಪ್ತಿಯಲ್ಲಿ 272 ಸ್ವಯಂ ಸೇವಕರನ್ನು ನಿಯುಕ್ತಿಗೊಳಿಸಲಾಗಿದ್ದು ಲಸಿಕೆದಾರರಿಗೆ ಲಸಿಕೆ ನೀಡುವ ಬಗ್ಗೆ ಈಗಾಗಲೇ ತರಬೇತಿ ನೀಡಲಾಗಿದೆ ಎಂದರು.

ಲಸಿಕಾ ದಿನದಂದು ಲಸಿಕೆ ನೀಡಲು ಗುರುತಿಸಲಾದ ಶಾಲೆಗಳನ್ನು ತೆರೆದು ಲಸಿಕೆ ನೀಡಲು ಸಜ್ಜುಗೊಳಿಸಲು, ಲಸಿಕೆ ಸಾಗಾಣಿಕೆಗೆ ಅಗತ್ಯವಿರುವ ವಾಹನಗಳನ್ನು ನಿಯುಕ್ತಿಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದರು. ಲಸಿಕೆಯ ಸುರಕ್ಷಿತ ದಾಸ್ತಾನಿನ ಬಗ್ಗೆ ಗಮನ ಹರಿಸಿ ಲಸಿಕೆ ಹಾಳಾಗದಂತೆ ನಿರಂತರ ವಿದ್ಯುತ್ ಪೂರೈಕೆ ಮಾಡಬೇಕು. ಲಸಿಕೆಯ ಸುರಕ್ಷಿತ ವಿತರಣೆಗೆ ಅಧಿಕಾರಿಗಳು ಕ್ರಮವಹಿಸಬೇಕು ಎಂದರು.

ಲಸಿಕಾ ದಿನದಂದು ಲಸಿಕೆಯಿಂದ ಹೊರಗುಳಿವ ಮಕ್ಕಳಿಗೆ ಗ್ರಾಮೀಣ ಭಾಗದಲ್ಲಿ ಡಿಸೆಂಬರ್ 22 ಮತ್ತು 23ರಂದು ಹಾಗೂ ನಗರ ಭಾಗಗಳಲ್ಲಿ ಡಿ.22ರಿಂದ 24ರವರೆಗೆ ಆಶಾ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ನರ್ಸಿಂಗ್ ವಿದ್ಯಾರ್ಥಿಗಳು ಮನೆ-ಮನೆಗೆ ತೆರಳಿ ಲಸಿಕೆ ಹಾಕಲಿದ್ದಾರೆ. ಅವರಿಗೆ ಅಗತ್ಯ ಸಹಕಾರ ನೀಡಬೇಕು ಎಂದ ಡಿಸಿ, ಇದಕ್ಕಾಗಿ ಒಟ್ಟು 1314 ತಂಡಗಳು 2,94,250 ಮನೆಗಳಿಗೆ ಭೇಟಿ ನೀಡಿ ಲಸಿಕೆ ನೀಡಲಿದ್ದಾರೆ ಎಂದರು.

ವಲಸೆ, ಕಟ್ಟಡ ಕಾರ್ಮಿಕರು ಹಾಗೂ ಇತರ ಕೂಲಿ ಕಾರ್ಮಿಕರ ಮಕ್ಕಳು ಲಸಿಕಾ ಕಾರ್ಯಕ್ರಮದಿಂದ ಹೊರಗೆ ಉಳಿಯದಂತೆ ಹೆಚ್ಚು ಜಾಗೃತಿ ಮೂಡಿಸಬೇಕು. ಲಸಿಕಾ ದಿನದಂದು ಮಕ್ಕಳಿಗೆ ಲಸಿಕೆ ತಪ್ಪಿದಲ್ಲಿ ಮರು ದಿನ ಲಸಿಕೆ ಹಾಕಿಸುವಂತೆ ಪೋಷಕರಿಗೆ ಮಾಹಿತಿ ನೀಡಬೇಕು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಪ್ರಚಾರ ನೀಡಬೇಕು. ಪಲ್ಸ್ ಪೊಲಿಯೋ ಕಾರ್ಯಕ್ರಮದ ಯಶಸ್ವಿಗೆ ಎಲ್ಲಾ ಇಲಾಖೆಯೊಂದಿಗೆ ಸಮನ್ವಯತೆ ಸಾಧಿಸಿ ಕೆಲಸ ನಿರ್ವಹಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಪಲ್ಸ್ ಪೊಲಿಯೋ ಕಾರ್ಯಕ್ರಮದ ಕುರಿತ ಭಿತ್ತಿಪತ್ರವನ್ನು ಬಿಡುಗಡೆಗೊಳಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಬಸವರಾಜ ಹುಬ್ಬಳ್ಳಿ, ನಗರಸಭೆ ಪೌರಾಯುಕ್ತ ಮಹಾಂತೇಶ ಹಂಗರಗಿ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಪ್ರಶಾಂತ್ ಭಟ್, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ನಾಗರತ್ನ, ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ.ಲತಾ ನಾಯಕ್, ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ. ಜ್ಯೋತ್ಸ್ನಾ ಬಿ.ಕೆ ಅಲ್ಲದೇ ಜಿಲ್ಲಾ ಮಟ್ಟದ ವಿವಿಧ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.


 



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News