×
Ad

ಕುಂದಾಪುರ | ಕೊಂಕಣಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ನಾರಾಯಣ ಖಾರ್ವಿ ನಿಧನ

Update: 2025-12-15 21:31 IST

ಕುಂದಾಪುರ, ಡಿ.15: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ (2008-11), ಸಿಂಡಿಕೇಟ್ ಬ್ಯಾಂಕ್‌ನ ನಿವೃತ್ತ ಉದ್ಯೋಗಿ ಕೆ.ನಾರಾಯಣ ಖಾರ್ವಿ (79) ಅವರು ರವಿವಾರ ಮಣೂರಿನ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಅವರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.

ಕೊಂಕಣಿ ಮಾತನಾಡುವ ಜಿಎಸ್‌ಬಿ ಅಥವಾ ಕ್ರಿಶ್ಚಿಯನ್ ಸಮುದಾಯಕ್ಕೆ ಹೊರತಾದ ಹಿಂದುಳಿದ ಖಾರ್ವಿ ಸಮುದಾಯದಿಂದ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಆಯ್ಕೆಯಾದ ಮೊದಲಿಗರು ನಾರಾಯಣ ಖಾರ್ವಿ. ಇವರು ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು.

ಕೊಂಕಣಿ ಜನಪದ ಹಾಗೂ ಸಂಸ್ಕೃತಿಗಾಗಿ ವಿಶೇಷವಾಗಿ ಮುತುವರ್ಜಿಯಿಂದ ದುಡಿದಿದ್ದ ಅವರು ಮಾಂಡ್ ಸೋಭಾಣ್‌ನ ಪ್ರಮುಖ ಆಧಾರ ಸ್ತಂಭವಾಗಿದ್ದರು. 2005ರಲ್ಲಿ ಇವರಿಗೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಯು ದೊರಕಿತ್ತು. ಕೊಂಕಣಿ ಖಾರ್ವಿ ಕಲಾ ಗುಂಪಿನ ಮುಖ್ಯಸ್ಥರು ಇವರಾಗಿದ್ದರು.

ಕಾರ್ಮಿಕ ನಾಯಕನಾಗಿ ಭಾರತೀಯ ಮಜ್ದೂರ್ ಸಂಘದಲ್ಲಿ ಸಕ್ರಿಯವಾಗಿ ದುಡಿದ ಇವರು ಸಾಹಿತ್ಯ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಸಂಘಟನೆಯ ಕ್ಷೇತ್ರದಲ್ಲೂ ತಮ್ಮನ್ನು ಗುರುತಿಸಿಕೊಂಡಿದ್ದರು. ಕುಂದಾಪುರ ಖಾರ್ವಿಕೇರಿ ಶ್ರೀ ಮಹಾಕಾಳಿ ದೇವಸ್ಥಾನದ ಅಧ್ಯಕ್ಷರಾಗಿ, ವಿದ್ಯಾರಂಗ ಮಿತ್ರ ಮಂಡಳಿಯ ಅಧ್ಯಕ್ಷರಾಗಿಯೂ ಕರ್ತವ್ಯ ನಿರ್ವಹಿಸಿದ್ದು, ಕಾರ್ಮಿಕರ ಸಮಸ್ಯೆಗೆ ಸಂಬಂಧಪಟ್ಟಂತೆ ಹಲವಾರು ಹೋರಾಟದ ಮೂಂಚೂಣಿಯಲ್ಲಿದ್ದರು. ಚಿಪ್ಪು ಕಾರ್ಮಿಕರ ಪರ ಹೋರಾಟದಲ್ಲೂ ಇವರು ಮುಂಚೂಣಿಯಲ್ಲಿದ್ದು, ಸಂಘಟನೆಗೆ ಒತ್ತು ನೀಡಿದ್ದರು.

ನಾರಾಯಣ ಖಾರ್ವಿಯವರ ನಿಧನಕ್ಕೆ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ತೀವ್ರ ಸಂತಾಪ ವ್ಯಕ್ತಪಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News