ಬಂದ್‌ನಲ್ಲಿ ಸರಕಾರದ ಉದ್ಯೋಗಿಗಳು ಪಾಲ್ಗೊಳ್ಳುವಂತಿಲ್ಲ: ಕೇರಳ ಹೈಕೋರ್ಟ್

Update: 2022-03-28 17:13 GMT

ತಿರುವನಂತಪುರ, ಮಾ. 28: ಕಾರ್ಮಿಕ ಒಕ್ಕೂಟಗಳು ಕರೆ ನೀಡಿದ 48 ಗಂಟೆಗಳ ರಾಷ್ಟ್ರವ್ಯಾಪಿ ಬಂದ್‌ನಲ್ಲಿ ಪಾಲ್ಗೊಳ್ಳದಂತೆ ಕೇರಳ ಉಚ್ಚ ನ್ಯಾಯಾಲಯ ಸೋಮವಾರ ಸರಕಾರಿ ಉದ್ಯೋಗಿಗಳಿಗೆ ನಿರ್ಬಂಧ ವಿಧಿಸಿದೆ. ಈ ಕುರಿತಂತೆ ಕೂಡಲೇ ಆದೇಶ ನೀಡುವಂತೆ ಅದು ಸರಕಾರಕ್ಕೆ ನಿರ್ದೇಶಿಸಿದೆ. ಸರಕಾರದ ಉದ್ಯೋಗಿಗಳು ಕಾರ್ಮಿಕರ ವ್ಯಾಪ್ತಿಯ ಅಡಿಯಲ್ಲಿ ಬರುವುದಿಲ್ಲ ಹಾಗೂ ಬಂದ್‌ನಲ್ಲಿ ಅವರ ಪಾಲ್ಗೊಳ್ಳುವಿಕೆ ಸೇವಾ ನಿಯಮಕ್ಕೆ ವಿರುದ್ಧವಾಗಿದೆ ಎಂದು ಅದು ಹೇಳಿದೆ.

ಸಾಮಾಜಿಕ ಹೋರಾಟಗಾರ ಚಂದ್ರಚೂಡ ನಾಯರ್ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್. ಮಣಿ ಕುಮಾರ್ ಹಾಗೂ ಶಾಜಿ ಪಿ. ಚಾಲಿ ಅವರನ್ನು ಒಳಗೊಂಡ ವಿಭಾಗೀಯ ನ್ಯಾಯಪೀಠ, ಬಂದ್‌ನಲ್ಲಿ ಸರಕಾರಿ ಉದ್ಯೋಗಿಗಳು ಪಾಲ್ಗೊಳ್ಳುವುದು ಕಾನೂನುಬಾಹಿರವಾಗಿದೆ ಎಂದರು. ಅವರು ಕೆಲಸದಿಂದ ದೂರವಿರುವ ದಿನಗಳ ವರೆಗೆ ವೇತನಕ್ಕೆ ಅನರ್ಹರಾಗುತ್ತಾರೆ ಎಂದು ಪೀಠ ಹೇಳಿದೆ. ಕೆಲಸ ಮಾಡದೇ ಇದ್ದರೆ, ವೇತನ ಇಲ್ಲ ಎಂದು ಘೋಷಿಸುವಂತೆ ನ್ಯಾಯಾಲಯ ಸರಕಾರಕ್ಕೆ ನಿರ್ದೇಶಿಸಿದೆ. ಈ ಹಿಂದೆ ಇಂತಹ ಪ್ರಕರಣಗಳಲ್ಲಿ ಉದ್ಯೋಗಿ ಗೈರಾದರೆ ರಜೆ ಎಂದು ಪರಿಗಣಿಸಲಾಗುತ್ತಿತ್ತು ಹಾಗೂ ಪೂರ್ಣ ವೇತನ ನೀಡಲಾಗುತ್ತಿತ್ತು.

ಸರಕಾರದ ಉದ್ಯೋಗಿಗಳು ಬಂದ್‌ನಲ್ಲಿ ಪಾಲ್ಗೊಳ್ಳುವುದು ಅಸಂವಿಧಾನಾತ್ಮಕ ಎಂದು ಘೋಷಿಸುವಂತೆ ಕೋರಿ ನಾಯರ್ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಕೆಲಸದಿಂದ ದೂರವಿರುವಂತೆ ರಾಜ್ಯ ಸರಕಾರ ಪ್ರಚೋದನೆ ನೀಡುತ್ತಿದೆ ಎಂದು ಅವರು ಆರೋಪಿಸಿದ್ದರು. ನ್ಯಾಯಾಲಯದ ಈ ಪ್ರತಿಪಾದನೆ ದುರಾದೃಷ್ಟಕರ ಎಂದು ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ ನಾಯಕ ಕೆ.ಪಿ. ರಾಜೇಂದ್ರನ್ ಹೇಳಿದ್ದಾರೆ. ನ್ಯಾಯಾಲಯ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಬೇಕು. ಬಡ ಕಾರ್ಮಿಕರಿಗೆ ಅಲ್ಲ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News