×
Ad

'ದಿನೇಶ್ ಕನ್ಯಾಡಿಗೆ ನ್ಯಾಯ ಕೊಡಿ': ಎಸ್.ಡಿ.ಪಿ.ಐ. ನೇತೃತ್ವದಲ್ಲಿ ಬೆಳ್ತಂಗಡಿಯಿಂದ ಡಿಸಿ ಕಚೇರಿಗೆ ಜಾಥಾಕ್ಕೆ ಚಾಲನೆ

Update: 2022-03-29 11:50 IST

ಬೆಳ್ತಂಗಡಿ, ಮಾ.29: ಕನ್ಯಾಡಿಯಲ್ಲಿ ಬಜರಂಗದಳದ ಮುಖಂಡನಿಂದ ಹತ್ಯೆಗೀಡಾದ ದಿನೇಶ್ ಕನ್ಯಾಡಿಯವರಿಗೆ ನ್ಯಾಯ ಕೊಡಿಸುವಂತೆ ಒತ್ತಾಯಿಸಿ ಎಸ್.ಡಿ.ಪಿ.ಐ. ನೇತೃತ್ವದಲ್ಲಿ ಹಮ್ಮಿಕೊಂಡಿರುವ ಬೆಳ್ತಂಗಡಿಯಿಂದ ದ.ಕ. ಜಿಲ್ಲಾಧಿಕಾರಿ ಕಚೇರಿಗೆ ಜಾಥಾಕ್ಕೆ ಇಂದು ಬೆಳ್ತಂಗಡಿಯಲ್ಲಿ ಚಾಲನೆ ನೀಡಲಾಯಿತು.

 ಹತ್ಯೆಗೀಡಾದ ದಿನೇಶ್ ಮನೆಗೆ ಭೇಟಿ ನೀಡಿದ ಎಸ್.ಡಿ.ಪಿ.ಐ. ಮುಖಂಡರು, ಸಂತ್ರಸ್ತ ಕುಟುಂಬದವರೊಂದಿಗೆ ಮಾತುಕತೆ ನಡೆಸಿ ಅವರಿಗೆ ಧೈರ್ಯ ತುಂಬಿ‍ದ ಬಳಿಕ ಬೆಳ್ತಂಗಡಿಯಲ್ಲಿ ಜಾಥಾಕ್ಕೆ ಎಸ್.ಡಿ.ಪಿ.ಐ. ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ದಿನೇಶ್ ಅವರನ್ನು ಹತ್ಯೆಗೈದ ಆರೋಪಿ ಹದಿನೈದು ದಿನಗಳಲ್ಲಿ ಜಾಮೀನು ಮೇಲೆ ಹೊರಬಂದಿರುವುದನ್ನು ಗಮನಿಸಿದರೆ ಈ ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಯಾವ ಸ್ಥಿತಿಯಲ್ಲಿದೆ ಎಂದು ತಿಳಿಯಲು ಸಾಧ್ಯ. ದಿನೇಶ್ ಕುಟುಂಬಕ್ಕೆ ಕೂಡಲೇ 50 ಲಕ್ಷ ರೂ. ಪರಿಹಾರ ಒದಗಿಸಬೇಕು. ಅವರಿಗೆ ಎರಡು ಎಕರೆ ಜಾಗ ನೀಡಬೇಕು, ಹಾಗೂ ಅವರ ಕುಟುಂಬದಲ್ಲಿ ಒಬ್ಬರಿಗೆ ಸರಕಾರಿ ಉದ್ಯೀಗ ಒದಗಿಸಬೇಕು ಎಂದು ಒತ್ತಾಯಿಸಿದರು.

ಎಸ್.ಡಿ.ಪಿ.ಐ ರಾಜ್ಯ ಕಾರ್ಯದರ್ಶಿ ಬಿ.ಆರ್ ಭಾಸ್ಕರ ಪ್ರಸಾದ್ ಮಾತನಾಡಿ, ದಲಿತನ ಹತ್ಯೆಯಾದರೆ ಸರಕಾರಗಳು ಜನಪ್ರತಿನಿಧಿಗಳು ಕಣ್ಣು ತೆರೆಯುವುದಿಲ್ಲ. ಅವರ ಕಣ್ಣು ತೆರೆಸಲು ಎಸ್.ಡಿ.ಪಿ.ಐ ಹೋರಾಟಕ್ಕೆ ಮುಂದಾಗಿದೆ. ಇನ್ನು ಎಲ್ಲೇ ಶೋಷಿತರಿಗೆ ಅನ್ಯಾಯವಾದರೆ ಅದನ್ನು ಸಹಿಸಿ ಸುಮ್ಮನಿರಲು ಸಾಧ್ಯವಿಲ್ಲ ಎಂದರು.

ಪಕ್ಷದ ಮುಖಂಡರಾದ ಅಲ್ಫೋನ್ಸ್ ಫ್ರಾಂಕೋ, ಆನಂದ ಮಿತ್ತಬೈಲು, ಅಥಾವುಲ್ಲ ಜೋಕಟ್ಟೆ, ನಿಸಾರ್ ಕುದ್ರಡ್ಕ, ಅಕ್ಬರ್ ಬೆಳ್ತಂಗಡಿ, ನವಾಝ್ ಶರೀಫ್ ಕಟ್ಟೆ, ಇಕ್ಬಾಲ್ ಬೆಳ್ಳಾರೆ, ಅನ್ವರ್ ಸಾದಾತ್ ಹಾಗೂ ಇತರರು ಜಾಥಾದ ನೇತೃತ್ವ ವಹಿಸಿದ್ದರು.

ನೂರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಕಾರ್ಯಕರ್ತರು ಬೆಳ್ತಂಗಡಿ ಅಂಬೇಡ್ಕರ್ ಭವನದ ಮುಂಭಾಗದಿಂದ ಆರಂಭಗೊಂಡ ಜಾಥಾ ಗುರುವಾಯನಕೆರೆಯ ವರೆಗೆ ಕಾಲ್ನಡಿಗೆಯಲ್ಲಿ ಸಾಗಿ ಅಲ್ಲಿಂದ ವಾಹನ ಜಾಥಾದಲ್ಲಿ ಮಂಗಳೂರಿಗೆ ಪ್ರಯಾಣಿಸಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News