ಅಪಾರ ಖನಿಜ ಸಂಪತ್ತು ಅಫ್ಘಾನ್‌ನ ಭವಿಷ್ಯ ಬದಲಾಯಿಸುವುದೇ?
ತಾಲಿಬಾನ್ ಪಾಲಿಗೆ ಗಣಿಗಾರಿಕೆಯು ಅತ್ಯುತ್ತಮವಾದ ಬೆಟ್ (ಬಾಜಿ) ಎನ್ನಬಹುದಾಗಿದೆ. ತಾಲಿಬಾನ್ ಅಧಿಕಾರ ವಶಪಡಿಸಿಕೊಂಡ ಬೆನ್ನಲ್ಲೇ ಅಫ್ಘಾನ್ ವಿರುದ್ಧ ಅಂತರ್‌ರಾಷ್ಟ್ರೀಯ ನಿರ್ಬಂಧಗಳನ್ನು ಹೇರಲಾಗಿದೆ. ಪರದೇಶಗಳಲ್ಲಿರುವ ದೇಶದ ಸಂಪತ್ತನ್ನು ಸ್ತಂಭನಗೊಳಿಸಲಾಗಿದೆ ಹಾಗೂ ಉದ್ಯಮ ಚಟುವಟಿಕೆಗಳು ಕುಂಠಿತಗೊಂಡಿದ್ದರಿಂದಾಗಿ ಆರ್ಥಿಕತೆಯು ನೆಲಕಚ್ಚಿದೆ. ಹೀಗಾಗಿ ವರಮಾನವನ್ನು ತ್ವರಿತವಾಗಿ ಸಂಗ್ರಹಿಸಲು ಗಣಿಗಾರಿಕೆಯು ಅವರಿಗೆ ಅತ್ಯುತ್ತಮವಾದ ಆಯ್ಕೆಯಾಗಿದೆ. ಆದರೆ ಅದಕ್ಕಾಗಿ ತಮ್ಮ ಪಾಲುದಾರರ ಆಯ್ಕೆಯಲ್ಲಿ ಅತ್ಯಂತ ಜಾಗರೂಕತೆ ಯಿಂದ ವರ್ತಿಸಬೇಕಾಗಿದೆ, ಜೊತೆಗೆ ದೇಶದ ಪುರಾತತ್ವ ನಿಧಿಗಳನ್ನು ಕೂಡಾ ಸಂರಕ್ಷಿಸಲು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.
ಅಫ್ಘಾನಿಸ್ತಾನದ ಮೇಲೆ ಅಮೆರಿಕದ ಅತಿಕ್ರಮಣವು ಉತ್ತುಂಗ ಸ್ಥಿತಿಯಲ್ಲಿರುವಾಗ ಅಲ್ಲಿ ನಡೆಯುತ್ತಿದ್ದ ಸಂಘರ್ಷಗಳ ಕುರಿತು ಸುದ್ದಿಗಳ ಮಹಾಪೂರವೇ ಹರಿದುಬರುತ್ತಿದ್ದ ನಡುವೆಯೇ ಆ ದೇಶವು ಹೊಂದಿರುವ ಬೃಹತ್ ಖನಿಜ ಸಂಪತ್ತಿನ ಕುರಿತಾಗಿ ಅಮೆರಿಕ ರಹಸ್ಯ ವರದಿಗಳನ್ನು ತಯಾರಿಸಿತ್ತೆಂಬ ಸಂಗತಿ ಬೆಳಕಿಗೆ ಬಂದಿತ್ತು. ಅಫ್ಘಾನಿಸ್ತಾನದ ವಿವಿಧ ಪ್ರಾಂತಗಳಿಂದ ಸಂಗ್ರಹಿಸಲಾದ ಮಣ್ಣುಗಳನ್ನು ವಿಮಾನದಲ್ಲಿ ಹೇರಿ ತಮ್ಮ ದೇಶದಲ್ಲಿ ಅವುಗಳ ವಿಶ್ಲೇಷಣೆಗಾಗಿ ಕೊಂಡೊಯ್ದಿರುವ ಕುರಿತಾದ ವರದಿಗಳು ಕೂಡಾ ಹಲವಾರು ಪ್ರಶ್ನೆಗಳನ್ನು ಮೂಡಿಸಿದ್ದವು. ಆದಾಗ್ಯೂ ಕೆಲವೇ ಕೆಲವು ಮಂದಿ ಮಾತ್ರವಷ್ಟೇ ಈ ವರದಿಗಳನ್ನು ನಂಬಿದ್ದರು.
ಇದೀಗ ಈ ವಿಷಯವು ಒಂದು ನಿರ್ದಿಷ್ಟ ಮಿತಿಯವರೆಗೆ ಸತ್ಯವಾಗಿರಲೂಬಹುದೆಂಬ ಮಾತುಗಳು ಕೇಳಿಬರುತ್ತಿವೆ. ಜಗತ್ತಿನ ಅತ್ಯಂತ ಕಡುಬಡತನದ ದೇಶಗಳಲ್ಲೊಂದಾದ ಅಫ್ಘಾನಿಸ್ತಾನವು ಚಿನ್ನ, ಅಮೂಲ್ಯವಾದ ಹರಳುಕಲ್ಲುಗಳು, ಕಲ್ಲಿದ್ದಲು, ತೈಲ, ಅನಿಲ, ಲಿಥಿಯಮ್ ಮತ್ತು ಅಪರೂಪದ ಭೂಖನಿಜ ಗಳ ನಿಕ್ಷೇಪಗಳನ್ನು ಅಪಾರ ಪ್ರಮಾಣದಲ್ಲಿ ಹೊಂದಿದೆ.
ಅಫ್ಘಾನಿಸ್ತಾನವು 1 ಟ್ರಿಲಿಯನ್ ಡಾಲರ್‌ಗೂ ಅಧಿಕ ಪ್ರಮಾಣದ ಖನಿಜ ಸಂಪನ್ಮೂಲಗಳನ್ನು ಹೊಂದಿರುವುದಾಗಿ ಒಂದು ದಶಕದ ಹಿಂದೆ ಭೌಗೋಳಿಕಶಾಸ್ತ್ರಜ್ಞರು ಅಂದಾಜಿಸಿದ್ದರು. ಅತ್ಯಂತ ಅಪರೂಪದ ಭೂಸತ್ವಗಳನ್ನು ಹೊಂದಿರುವ ಈ ಖನಿಜಗಳ ವೌಲ್ಯ ಈಗ ಹಲವಾರು ಪಟ್ಟು ಅಧಿಕವಾಗಿರಬೇಕೆಂದು ಊಹಿಸಲಾಗಿದೆ. ಪಾಶ್ಚಾತ್ಯ ರಾಷ್ಟ್ರಗಳು ಹಾಗೂ ಚೀನಾ ಸಾಧಿಸಿರುವ ತಂತ್ರಜ್ಞಾನದ ಪ್ರಗತಿಗಳು ದೊಡ್ಡ ಮಟ್ಟದಲ್ಲಿ ಇಂತಹ ಅಪರೂಪದ ಭೂಖನಿಜಗಳನ್ನು ಅವಲಂಬಿಸಿವೆ. ಹಲವಾರು ನೂತನ ಪರ್ಯಾಯ ಇಂಧನಗಳು ಅವುಗಳ ಸ್ಥಿರವಾದ ಪೂರೈಕೆಯನ್ನೇ ಆಧರಿಸಿದೆ.
ಚೀನಾವು ಈಗಾಗಲೇ ಜಗತ್ತಿನ ಅತ್ಯಂತ ಅಪರೂದ ಖನಿಜ ಸಂಪನ್ಮೂಲ ಗಳ ಮೇಲೆ ನಿಯಂತ್ರಣ ಹೊಂದಿದೆ. ಇಲೆಕ್ಟ್ರಿಕ್ ವಾಹನಗಳು ಹಾಗೂ ಸ್ಮಾರ್ಟ್‌ಫೋನ್ ಟಚ್ ಸ್ಕ್ರೀನ್‌ಗಳು ಸೇರಿದಂತೆ ವೈವಿಧ್ಯಮಯ ತಂತ್ರಜ್ಞಾನ ಸಾಮಗ್ರಿಗಳ ಉತ್ಪಾದನೆಗೆ ಅವುಗಳನ್ನು ಬಳಸಲಾಗುತ್ತದೆ.
ಅಮೆರಿಕ ಸೇನೆಯ ಹಿಂದೆಗೆತದ ಬಳಿಕ ಚೀನಾವು ಅಫ್ಘಾನಿಸ್ತಾನವೆಂಬ ‘ಕದಡಿದ ಸರೋವರ’ಕ್ಕೆ ಧುಮುಕಿದೆ. ನಿಕಟಪೂರ್ವದಿಂದಲೂ ಚೀನಾವು ತಾಲಿಬಾನ್ ಆಡಳಿತದ ಜೊತೆ ಡಂಭಾಚಾರದ ಮೈತ್ರಿಯನ್ನು ಪ್ರದರ್ಶಿಸುತ್ತಾ ಬಂದಿದೆ. ಅಫ್ಘಾನಿಸ್ತಾನದ ಆಡಳಿತವನ್ನು ತಾಲಿಬಾನ್ ವಶಕ್ಕೆ ತೆಗೆದುಕೊಂಡ ಆನಂತರ ಪಾಶ್ಚಾತ್ಯ ದೇಶಗಳ ಹಲವಾರು ರಾಯಭಾರಿ ಕಚೇರಿಗಳ ಸಿಬ್ಬಂದಿ ಆ ದೇಶವನ್ನು ತೊರೆದರೂ ಚೀನಾದ ರಾಯಭಾರಿ ಕಚೇರಿ ಮಾತ್ರ ಕಾರ್ಯಾಚರಿಸುತ್ತಿತ್ತು.
ಇದರ ಜೊತೆಗೆ ಅಫ್ಘಾನಿಸ್ತಾನದ ನೂತನ ಸರಕಾರದ ಸ್ಥಾಪನೆಗಾಗಿ ಹಲವಾರು ಸುತ್ತುಗಳ ಮಾತುಕತೆಗೆ ಮಧ್ಯಸ್ಥಿಕೆ ವಹಿಸಿದ್ದ ಇರಾನ್ ಕೂಡಾ ತಾಲಿಬಾನ್‌ನ ಉನ್ನತ ನಾಯಕರ ಜೊತೆ ಉತ್ತಮ ಬಾಂಧವ್ಯಗಳನ್ನು ಬೆಳೆಸಿಕೊಳ್ಳಲು ಯತ್ನಿಸುತ್ತಿದೆ.
ವಾಲ್‌ಸ್ಟ್ರೀಟ್ ಜರ್ನಲ್‌ನಲ್ಲಿ ಪ್ರಕಟವಾದ ವರದಿಯ ಪ್ರಕಾರ ಲೊಗಾರ್ ಪ್ರಾಂತದಲ್ಲಿ ಗಣಿಗಾರಿಕೆಯನ್ನು ಆರಂಭಿಸಲು ಚೀನಾವು ತಾಲಿಬಾನ್ ಅಧಿಕಾರಿಗಳ ಜೊತೆ ಮಾತುಕತೆಗಳನ್ನು ನಡೆಸುತ್ತಿದೆ. ರಾಜಧಾನಿ ಕಾಬೂಲ್‌ನಿಂದ ಎರಡು ತಾಸುಗಳ ಕಾರು ಪ್ರಯಾಣದಷ್ಟು ದೂರವಿರುವ ಲೋಗಾರ್ ಪ್ರಾಂತವು ಇನ್ನೂ ಉತ್ಖನನವಾಗದೆ ಇರುವಂತಹ ಜಗತ್ತಿನಲ್ಲೇ ಅತ್ಯಧಿಕ ಪ್ರಮಾಣದ ತಾಮ್ರದ ನಿಕ್ಷೇಪವನ್ನು ಹೊಂದಿದೆ.
ಉತ್ತರ ಅಫ್ಘಾನಿಸ್ತಾನದ ಅಮು ದರಿಯಾ ಪ್ರಾಂತದಲ್ಲಿ ತೈಲ ಹಾಗೂ ನೈಸರ್ಗಿಕ ಅನಿಲ ಸಂಪನ್ಮೂಲ ನಿಕ್ಷೇಪಗಳ ಉತ್ಖನನದ ಕಾರ್ಯ ಆರಂಭಿಸುವ ಬಗೆಗೂ ಬೀಜಿಂಗ್, ತಾಲಿಬಾನ್ ಮುಖಂಡರ ಜೊತೆ ಮಾತುಕತೆ ನಡೆಸುತ್ತಿದೆ. ಯುದ್ಧದ ಕಾರಣದಿಂದಾಗಿ ಈ ಎರಡೂ ಯೋಜನೆಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದವು. ಆಗಸ್ಟ್‌ನಲ್ಲಿ ತಾಲಿಬಾನ್ ಅಧಿಕಾರ ಹಿಡಿದ ಬಳಿಕ ಮತ್ತೆ ಈ ಯೋಜನೆಗಳಿಗೆ ಮರುಜೀವ ದೊರೆತಿದೆ.
ಅಫ್ಘಾನಿಸ್ತಾನದಿಂದ ಅಮೆರಿಕ ಸೇನೆಯ ಹಿಂದೆಗೆತದಿಂದಾಗಿ ಉಂಟಾಗಿರುವ ನಿರ್ವಾತವನ್ನು ಚೀನಾ ತುಂಬುವ ಸಾಧ್ಯತೆಯ ಬಗ್ಗೆ ಅಮೆರಿಕನ್ ಅಧಿಕಾರಿಗಳು ಆತಂಕಹೊಂದಿದ್ದಾರೆ.
ತನ್ನ ದೇಶವು ಕಳೆದ 43 ವರ್ಷಗಳಿಂದ ಯುದ್ಧದಲ್ಲೇ ನಿರತವಾಗಿದ್ದುದರಿಂದ ಅಭಿವೃದ್ಧಿಗಾಗಿ ಈ ಅಮೂಲ್ಯ ಸಂಪನ್ಮೂಲಗಳ ಗಣಿಗಾರಿಕೆ ನಡೆಸಲು ಸಾಧ್ಯವಾಗಲಿಲ್ಲವೆಂಬುದು ತಾಲಿಬಾನ್ ಸರಕಾರದ ಖನಿಜ ಹಾಗೂ ಪೆಟ್ರೋಲಿಯಂ ಸಚಿವ ಶಹಾಬುದ್ದೀನ್ ದಿಲಾವರ್ ವಿಷಾದ ವ್ಯಕ್ತಪಡಿಸಿದ್ದಾರೆ.
ಅಮೆರಿಕ ಸೇನೆ ನಿರ್ಗಮಿಸಿರುವುದರಿಂದ, ಅಮೆರಿಕನ್ ಹಾಗೂ ಇತರ ಪಾಶ್ಚಾತ್ಯ ಕಂಪೆನಿಳು ಅಫ್ಘಾನಿಸ್ತಾನಕ್ಕೆ ಆಗಮಿಸಬೇಕೆಂದು ದಿಲಾವರ್ ಬಯಸಿದ್ದಾರೆ. ಖನಿಜಗಳ ಉತ್ಖನನದಲ್ಲಿ ಅಪಾರ ಪರಿಣತಿಯನ್ನು ಹೊಂದಿರುವ ಅಮೆರಿಕನ್ ಕಂಪೆನಿಗಳಿಗೆ ಆದ್ಯತೆ ನೀಡಲು ತನ್ನ ಸರಕಾರ ಬಯಸಿದೆಯೆಂದು ಅವರು ಹೇಳುತ್ತಾರೆ.
ಅಫ್ಘಾನಿಸ್ತಾನದಲ್ಲಿ ಅಗತ್ಯವಸ್ತುಗಳ ದರ ಗಗನಕ್ಕೇರಿರುವಂತೆಯೇ ಹಾಗೂ ಅಮೆರಿಕ ಪಡೆಗಳು ಮತ್ತು ತಾಲಿಬಾನ್ ನಡುವೆ ಘರ್ಷಣೆಗಳು ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನದಲ್ಲಿ ಗಣಿಗಾರಿಕೆಯ ಆರಂಭಕ್ಕೆ ಇದು ಪ್ರಶಸ್ತವಾದ ಕಾಲವೆಂದು ವಿಶ್ಲೇಷಕರು ಅಭಿಪ್ರಾಯಿಸಿದ್ದಾರೆ.
ಅಫ್ಘಾನಿಸ್ತಾನದಲ್ಲಿರುವ 2 ಸಾವಿರ ವರ್ಷಗಳಷ್ಟು ಹಳೆಯದಾದ ಪುರಾತನ ನಗರ ಮೆಸ್‌ಆಯ್‌ನಾಕ್‌ನ ಅವಶೇಷಗಳ ಕೆಳಗೆ ಹುದುಗಿರುವ ಅಪಾರ ಪ್ರಮಾಣದ ತಾಮ್ರದ ನಿಕ್ಷೇಪದ ಮೇಲೆ ಇದೀಗ ಚೀನಿ ಕಂಪೆನಿಗಳ ಕಣ್ಣು ಬಿದ್ದಿದೆ.
2001ರಲ್ಲಿ ಬಾಮಿಯಾನ್‌ನಲ್ಲಿ ವಿಗ್ರಹಗಳನ್ನು ಭಗ್ನಗೊಳಿಸಿದ್ದ ಆಗಿನ ತಾಲಿಬಾನ್ ಆಡಳಿತದ ಕೃತ್ಯಕ್ಕೆ ತದ್ವಿರುದ್ಧವಾಗಿ ಈ ಸಲ ದೇಶದ ಅಮೂಲ್ಯ ಕಲಾಕೃತಿಗಳನ್ನು ರಕ್ಷಿಸಲಾಗುವುದೆಂದು ದಿಲಾವರ್ ಭರವಸೆ ನೀಡಿದ್ದಾರೆ. ಆದರೆ ಅವುಗಳನ್ನು ಹೇಗೆ ರಕ್ಷಿಸಲಾಗುವುದೆಂಬ ಬಗ್ಗೆ ಅವರು ವಿವರಗಳನ್ನು ನೀಡಿಲ್ಲ. ಒಂದು ವೇಳೆ ಖನಿಜಗಳ ಉತ್ಖನನ ಆರಂಭಗೊಂಡಲ್ಲಿ, ಅದಕ್ಕಿಂತ ಮೊದಲು ಇಡೀ ನಗರವನ್ನು ಸಮೀಪದ ಪ್ರದೇಶಕ್ಕೆ ಕೊಂಡೊಯ್ದು ಅಲ್ಲಿ ಮರುಸ್ಥಾಪಿಸಲು ಅವರು ಬಯಸಿದ್ದಾರೆ. ಈಗಾಗಲೇ ಹಲವಾರು ಅಮೂಲ್ಯ ಕಲಾಕೃತಿಗಳನ್ನು ಕಾಬೂಲ್ ಮ್ಯೂಸಿಯಂಗೆ ವರ್ಗಾಯಿಸಲಾಗಿದೆ.
ಮೆಸ್‌ಆಯ್‌ನಾಕ್ ನಗರವು ಮೊದಲನೇ ಹಾಗೂ ಏಳನೇ ಶತಮಾನಗಳ ನಡುವೆ ಉಚ್ಛ್ರಾಯದಲ್ಲಿತ್ತು. ಅಲ್ಲಿ ಹಲವಾರು ಬೌದ್ಧ ಸ್ತೂಪಗಳು, ಬೌದ್ಧ ಸನ್ಯಾಸಿಗಳ ಮಠಗಳು, ಸ್ಮಶಾನಗಳ ಅವಶೇಷಗಳು ಕಾಣಸಿಗುತ್ತಿವೆ ಹಾಗೂ ಪರ್ವತಗಳ ಬುಡದಲ್ಲಿ ಅಪೂರ್ವವಾದ ಚಿತ್ರಗಳನ್ನು ಬಿಡಿಸಲಾಗಿದೆ. ಮೆಸ್‌ಆಯ್‌ನಾಕ್‌ನ ಪೂರ್ವ ಭಾಗವು ಅಮೂಲ್ಯವಾದ ಪುರಾತನ ಕಟ್ಟಡ ಸಂರಚನೆಗಳನ್ನು ಹೊಂದಿದೆ.
ಸುಮಾರು ಒಂದು ದಶಕಗಳ ಕೆಲಸದ ಬಳಿಕ ಮೆಸ್‌ಆಯ್‌ನಾಕ್ ನಗರದ ಶೇ.70ರಷ್ಟು ಉತ್ಖನನ ಪೂರ್ಣಗೊಂಡಿದೆಯೆಂದು ಪುರಾತತ್ವಶಾಸ್ತ್ರಜ್ಞರು ತಿಳಿಸಿದ್ದಾರೆ.
ಒಂದು ವೇಳೆ ಚೀನಿಯರು ಸುರಂಗಮಾರ್ಗಗಳ ಮೂಲಕ ಗಣಿಗಾರಿಕೆಯನ್ನು ಮಾಡಲು ಸಿದ್ಧರಿದ್ದಲ್ಲಿ ಈ ಪುರಾತನ ನಗರವು ಈಗಿರುವ ಜಾಗದಲ್ಲೇ ಉಳಿಯಬಹುದಾಗಿದೆ ಎಂದು ತಜ್ಞರು ಹೇಳಿದ್ದಾರೆ. ಆದರೆ ಹಾಗೆ ಮಾಡಬೇಕಾದರೆ, ಗಣಿಗಾರಿಕೆಯನ್ನು ಆರಂಭಿಸುವ ಮುನ್ನ ಪುರಾತತ್ವ ಉತ್ಖನನಕ್ಕೆ ಕನಿಷ್ಠ ಇನ್ನೂ ಮೂರು ವರ್ಷಗಳ ಬೇಕಾದೀತು ಎಂದವರು ಹೇಳಿದ್ದಾರೆ
ಒಂದು ವೇಳೆ ಚೀನಿಯರು ತೆರೆದ ಗುಂಡಿ (ಓಪನ್-ಪಿಟ್ ಮೈನಿಂಗ್)ಮೂಲಕ ಗಣಿಗಾರಿಕೆ ನಡೆಸುವ ಯೋಜನೆ ಹೊಂದಿದ್ದರೆ, ಈ ಪುರಾತನ ನಗರದ ದಾಖಲೀಕರಣ ಹಾಗೂ ಪ್ರಾಚೀನ ಅವಶೇಷಗಳನ್ನು ಸಾಗಿಸುವುದಕ್ಕೋಸ್ಕರವೇ ಏಳರಿಂದ ಹತ್ತು ವರ್ಷಗಳು ಬೇಕಾಗಬಹುದು. ಅಲ್ಲದೆ ಎಲ್ಲವನ್ನೂ ಪುನರ್‌ಸ್ಥಾಪಿಸಲು ಸಾಧ್ಯವಿಲ್ಲವಾದ್ದರಿಂದ ಅಲ್ಲಿರುವ ಅರ್ಧಾಂಶಕ್ಕಿಂತಲೂ ಅಧಿಕ ಪ್ರಾಚೀನ ಕಟ್ಟಡ, ಕಲಾಕೃತಿಗಳು ನಷ್ಟವಾಗಲಿವೆ. ಅಲ್ಲದೆ, ಆ ನಿವೇಶನವು ತನ್ನ ಪುರಾತತ್ವ ಪ್ರಾಮುಖ್ಯತೆಯನ್ನು ಕೂಡಾ ಕಳೆದುಕೊಳ್ಳಲಿದೆ.
ಪ್ರಸಕ್ತ ತಾಲಿಬಾನ್ ಪಡೆಯಲು ಬಯಸುತ್ತಿರುವುದು ಏನನ್ನು ಹಾಗೂ ಚೀನಿಯರು ಏನನ್ನು ನೀಡಲು ಬಯಸುತ್ತಿದ್ದಾರೆ ಎಂಬ ಬಗ್ಗೆ ಭಿನ್ನಾಭಿಪ್ರಾಯಗಳು ಮೂಡಿರುವುದರಿಂದ ಪ್ರಸಕ್ತ ಚೀನಿ ಕಂಪೆನಿಗಳ ಜೊತೆಗಿನ ಮಾತುಕತೆಗಳು ಸ್ಥಗಿತಗೊಂಡಿವೆ. 2007ರಲ್ಲಿ ಏರ್ಪಟ್ಟ ಗುತ್ತಿಗೆ ಒಪ್ಪಂದದ ಪ್ರಕಾರ ಚೀನಾವು ಮೆಸ್‌ಆಯ್‌ನಾಕ್ ಹಾಗೂ ಅದರ ಸುತ್ತಮುತ್ತಲಿನ ಪ್ರದೇಶ ಮತ್ತು ರಾಜಧಾನಿ ಕಾಬೂಲ್‌ಗೆ ವಿದ್ಯುತ್ತನ್ನು ಪೂರೈಕೆ ಮಾಡಲು ವಿದ್ಯುತ್ ಸ್ಥಾವರವನ್ನು ನಿರ್ಮಿಸಬೇಕಾಗುತ್ತದೆ. ಅಲ್ಲದೆ ಅಫ್ಘಾನಿಸ್ತಾನದಲ್ಲೇ ತಾಮ್ರವನ್ನು ಸಂಸ್ಕರಿಸಬೇಕಾಗುತ್ತದೆ ಹಾಗೂ ತೋರ್ಖಾಮ್‌ನಲ್ಲಿ ಪಾಕಿಸ್ತಾನ ಗಡಿಗೆ ರೈಲು ಮಾರ್ಗವನ್ನು ನಿರ್ಮಿಸಬೇಕಾಗುತ್ತದೆ. ಮೆಸ್‌ಆಯ್‌ನಾಕ್‌ನಲ್ಲಿರುವ ಪುರಾತತ್ವ ವಸ್ತುಗಳನ್ನು ವರ್ಗಾಯಿಸಬೇಕು ಹಾಗೂ ಗ್ರಾಮಸ್ಥರಿಂದ ಭೂಮಿಯನ್ನು ಖರೀದಿಸಬೇಕಾಗುತ್ತದೆ ಎಂದು ಅಫ್ಘಾನಿಸ್ತಾನದ ಗಣಿ ಸಚಿವರು ಹೇಳಿದ್ದಾರೆ.
ಚೀನಿಯರಿಗೆ ಈ ಮೊದಲು ಎರಡು ಯೋಜನೆಗಳನ್ನು ನೀಡಲಾಗಿದೆ. ಆದರೆ ಅವೆರಡು ಯೋಜನೆಗಳ ಪ್ರಗತಿಯನ್ನು ಕಾಣುವವರೆಗೆ ಅವರಿಗೆ ಮೂರನೇ ಯೋಜನೆಯನ್ನು ನೀಡುವುದಿಲ್ಲವೆಂದು ತಾಲಿಬಾನ್ ಆಡಳಿತ ಹೇಳಿದೆ.
ಚೀನಾದ ಸರಕಾರಿ ಸ್ವಾಮ್ಯದ ಗಣಿಗಾರಿಕೆ ಕಂಪೆನಿಯಾದ ‘ಮೆಟಾಲರ್ಜಿಕಲ್ ಕಾರ್ಪೊರೇಶನ್ ಆಫ್ ಚೀನಾ’ ಆಗ ಅಫ್ಘಾನಿಸ್ತಾನದಲ್ಲಿ ಅಧಿಕಾರದಲ್ಲಿದ್ದ ಅಮೆರಿಕ ಬೆಂಬಲಿತ ಸರಕಾರವು ಗುತ್ತಿಗೆಯನ್ನು ನೀಡಿತ್ತು. ಆದರೆ ಅಲ್ಲಿ ಅಪಾರ ಪ್ರಮಾಣದಲ್ಲಿ ಪ್ರಾಚೀನ ವಸ್ತುಗಳು, ಕಟ್ಟಡ ಅವಶೇಷಗಳ ಪತ್ತೆ, ಯುದ್ಧ ಹಾಗೂ ಅಫ್ಘಾನ್ ಸರಕಾರ ಜೊತೆಗಿನ ಒಪ್ಪಂದ ಬಗ್ಗೆ ಸಹಮತ ಮೂಡದೇ ಇದ್ದುದರಿಂದ ಕಾಮಗಾರಿಯನ್ನು ಆರಂಭಿಸಲು ಸಾಧ್ಯವಾಗಲಿಲ್ಲ. ಈ ಮೊದಲು ಒಪ್ಪಿಕೊಂಡಿದ್ದ ಬಾಧ್ಯತೆಗಳಿಂದ ಎಂಸಿಸಿಯು ಹಿಂದೆ ಸರಿಯಲು ಯತ್ನಿಸಿತ್ತೆಂದು ವರದಿಯಾಗಿದ್ದವು.
ತಾಲಿಬಾನ್ ಪಾಲಿಗೆ ಗಣಿಗಾರಿಕೆಯು ಅತ್ಯುತ್ತಮವಾದ ಬೆಟ್ (ಬಾಜಿ) ಎನ್ನಬಹುದಾಗಿದೆ. ತಾಲಿಬಾನ್ ಅಧಿಕಾರ ವಶಪಡಿಸಿಕೊಂಡ ಬೆನ್ನಲ್ಲೇ ಅಫ್ಘಾನ್ ವಿರುದ್ಧ ಅಂತರ್‌ರಾಷ್ಟ್ರೀಯ ನಿರ್ಬಂಧಗಳನ್ನು ಹೇರಲಾಗಿದೆ. ಪರದೇಶಗಳಲ್ಲಿರುವ ದೇಶದ ಸಂಪತ್ತನ್ನು ಸ್ತಂಭನಗೊಳಿಸಲಾಗಿದೆ ಹಾಗೂ ಉದ್ಯಮ ಚಟುವಟಿಕೆಗಳು ಕುಂಠಿತಗೊಂಡಿದ್ದರಿಂದಾಗಿ ಆರ್ಥಿಕತೆಯು ನೆಲಕಚ್ಚಿದೆ. ಹೀಗಾಗಿ ವರಮಾನವನ್ನು ತ್ವರಿತವಾಗಿ ಸಂಗ್ರಹಿಸಲು ಗಣಿಗಾರಿಕೆಯು ಅವರಿಗೆ ಅತ್ಯುತ್ತಮವಾದ ಆಯ್ಕೆಯಾಗಿದೆ. ಆದರೆ ಅದಕ್ಕಾಗಿ ತಮ್ಮ ಪಾಲುದಾರರ ಆಯ್ಕೆಯಲ್ಲಿ ಅತ್ಯಂತ ಜಾಗರೂಕತೆ ಯಿಂದ ವರ್ತಿಸಬೇಕಾಗಿದೆ, ಜೊತೆಗೆ ದೇಶದ ಪುರಾತತ್ವ ನಿಧಿಗಳನ್ನು ಕೂಡಾ ಸಂರಕ್ಷಿಸಲು ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.
* ಲೇಖಕ ಅಸದ್ ಮಿರ್ಝಾ ಅವರು ದಿಲ್ಲಿ ನಿವಾಸಿಯಾಗಿದ್ದು, ರಾಜಕೀಯ ವಿಷಯಗಳ ವಿಶ್ಲೇಷಕರಾಗಿದ್ದಾರೆ.
ಕೃಪೆ: bhaskarlive.in