×
Ad

ಮಲ್ಲಿಗೆ ಕೃಷಿಕರಿಗೆ ವೈಜ್ಞಾನಿಕ ಪದ್ದತಿ ಬಗ್ಗೆ ತರಬೇತಿ: ರಾಮಕೃಷ್ಣ ಶರ್ಮಾ

Update: 2022-03-29 19:04 IST

ಶಿರ್ವ : ಮಲ್ಲಿಗೆ ಕೃಷಿಯಲ್ಲಿ ವೈಜ್ಞಾನಿಕ ಕೃಷಿಪದ್ಧತಿ ಅಳವಡಿಕೆಯಿಂದ ಅಧಿಕ ಇಳುವರಿ ಪಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ಒಂದು ಸಾವಿರ ಮಲ್ಲಿಗೆ ಕೃಷಿಕರಿಗೆ ವೈಜ್ಞಾನಿಕ ಕೃಷಿಪದ್ದತಿಯ ಬಗ್ಗೆ ತರಬೇತಿ ನೀಡಲಾಗುವುದು ಎಂದು ಪ್ರಗತಿಪರ ಮಲ್ಲಿಗೆ ಕೃಷಿಕ ಹಾಗೂ ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮಾ ಹೇಳಿದ್ದಾರೆ.

ಶಂಕರಪುರ ಸಂತ ಜೋನರ ದೇವಾಲಯದ ಶತಮಾನೋತ್ಸವ ಸಂಭ್ರಮದ ಪ್ರಯುಕ್ತ ರವಿವಾರ ಏರ್ಪಡಿಸಲಾದ ಮಲ್ಲಿಗೆ ಕೃಷಿ ವಿಚಾರ ಸಂಕಿರಣ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು.

ಮಲ್ಲಿಗೆ ಬೆಳೆಗಾರರು ಇನ್ನೂ ಹಳೆಯ ಕಾಲದ ಕೃಷಿಪದ್ಧತಿ ಯನ್ನೇ ಅನುಸರಿಸುತ್ತಿದ್ದಾರೆ. ಅಲ್ಲದೆ ರಾಸಾಯನಿಕಗಳ ಬಳಕೆಯಿಂದ ಮಣ್ಣಿನ ಫಲವತ್ತತೆ ಕುಂಠಿತಗೊಂಡಿದ್ದು, ಗಿಡಗಳ ಬೆಳವಣಿಗೆ, ಮಲ್ಲಿಗೆ ಹೂವಿನ ಇಳು ವರಿ ಕಡಿಮೆಯಾಗಿದೆ. ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲ ಎಂದರು.

ಎಪ್ರಿಲ್ ತಿಂಗಳು ಮಲ್ಲಿಗೆ ಗಿಡಗಳಿಗೆ ಗೊಬ್ಬರ ಹಾಕಲು ಉತ್ತಮ ಕಾಲ ವಾಗಿದ್ದು, ಸಾವಯವ ಗೊಬ್ಬರ, ಭೂಮಿಯ ಮೇಲ್ಮಣ್ಣು, ದ್ರವರೂಪದ ಗೊಬ್ಬರಗಳ ಬಳಕೆ, ಕಾಲಕಾಲಕ್ಕೆ ನೀರುಣಿಸುವ ಕ್ರಮ, ವೈಜ್ಞಾನಿಕ ಮಾದರಿಯ ಅಳವಡಿಕೆಯ ಬಗ್ಗೆ ಸವಿಸ್ತಾರ ಮಾಹಿತಿ ನೀಡಿ, ರೈತ ಕೇಂದ್ರಗಳಲ್ಲಿ ದೊರೆಯುವ ಗೊಬ್ಬರಗಳನ್ನು ಬಳಸಬೇಕು ಎಂದು ಅವರು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಶಂಕರಪುರ ಧರ್ಮಕೇಂದ್ರದ ಪ್ರಧಾನ ಧರ್ಮಗುರು ರೆ.ಫಾ.ಪರ್ಡಿನಾಂಡ್ ಗೊನ್ಸಾಲ್ವಿಸ್ ಮಾತನಾಡಿ ಶಂಕರಪುರ ಮಲ್ಲಿಗೆಗೆ ಸ್ವಾತಂತ್ರ್ಯ ಪೂರ್ವದ ಇತಿಹಾಸವಿದ್ದು, ಬಡತನ, ಕಷ್ಟದ ಕಾಲದಲ್ಲಿ ಜೀವನಕ್ಕಾಗಿ ಮಲ್ಲಿಗೆಯನ್ನೇ ಅವಲಂಬಿಸಿದ ಕೃಷಿಕರಿಗೆ ಅಂದಿನ ಧರ್ಮಗುರು ಗಳಾದ ದಿ. ಬಾಝಿಲ್ ಪೇರಿಸ್ ಮಲ್ಲಿಗೆ ಕೃಷಿಕರಿಗೆ ಮಾರುಕಟ್ಟೆ ವ್ಯವಸ್ಥೆಯನ್ನು ಪರಿಚಯಿಸಿದ್ದರು ಎಂದರು.

ಪ್ರಗತಿಪರ ಕೃಷಿಕ ಜೋನ್ ಪಿ.ಮೆಂಡೋನ್ಸಾ ಶಂಕರಪುರ ಮಲ್ಲಿಗೆ ಬೆಳೆಯ ಮೂಲ, ಹುಟ್ಟು ಮತ್ತು ಬೆಳವಣಿಗೆಯ ಬಗ್ಗೆ ಮಾಹಿತಿ ನೀಡಿದರು. ಮಲ್ಲಿಗೆ ಕೃಷಿಕರೊಂದಿಗೆ ಸಂವಾದ ಏರ್ಪಡಿಸಿ ಸಮಸ್ಯೆಗಳಿಗೆ ಪರಿಹಾರ ಸೂಚಿಸ ಲಾಯಿತು. ಈ ಸಂದರ್ಭದಲ್ಲಿ ಮಲ್ಲಿಗೆ ಮಾರುಕಟ್ಟೆ ಪ್ರಮುಖರಾದ ಇಗ್ನೇಷಿಯಸ್ ಡಿಸೋಜ, ವಿನ್ಸೆಂಟ್ ರೊಡ್ರಿಗಸ್, ಲೆತ್ತಿಜಾ ಕಸ್ತಲಿನೊ, ಮ್ಯಾನುವೆಲ್ ಡಿಮೆಲ್ಲೊ, ಪೌಲ್‌ವಾಝ್ ಅವರನ್ನು ಸನ್ಮಾನಿಸಲಾಯಿತು.‌

ಕಾರ್ಯಕ್ರಮ ಸಂಯೋಜಕ ಜೋಸೆಪ್ ಲೋಬೊ ಸ್ವಾಗತಿಸಿದರು. ಜೆರೋಮ್ ರೊಡ್ರಿಗಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಹಾಯಕ ಧರ್ಮಗುರು ರೆ.ಫಾ.ಅನಿಲ್ ಪಿಂಟೊ, ಪಾಲನಾ ಮಂಡಳಿ ಉಪಾಧ್ಯಕ್ಷ  ಜೋನ್ ರೊಡ್ರಿಗಸ್, ಕಾರ್ಯದರ್ಶಿ ಅನಿತಾ ಡಿಸೋಜ, ಚರ್ಚ್‌ನ ೨೦ ಅಯೋಗಗಳ ಸಂಚಾಲಕಿ ಸೀಮಾ ಮಾರ್ಗರೇಟ್ ಡಿಸೋಜ ಉಪಸ್ಥಿತರಿದ್ದರು.

ನಿವೃತ್ತ ಶಿಕ್ಷಕ ಡಿ.ಆರ್.ನೊರೋನ್ಹಾ ಕಾರ್ಯಕ್ರಮ ನಿರೂಪಿಸಿದರು. ಐರಿನ್ ನೊರೋನ್ಹಾ ವಂದಿಸಿದರು. 300ಕ್ಕೂ ಅಧಿಕ ಮಲ್ಲಿಗೆ ಬೆಳೆಗಾರರು ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News