×
Ad

ಅಪಾಯ ಆಹ್ವಾನಿಸುತ್ತಿರುವ ಹಳೆಯಂಗಡಿ ಪೇಟೆ: ನಾಗರಿಕರ ಆತಂಕ, ಸೂಕ್ತ ಕ್ರಮಕ್ಕೆ ಆಗ್ರಹ

Update: 2022-03-30 11:51 IST

ಹಳೆಯಂಗಡಿ, ಮಾ.29: ರಾಷ್ಟ್ರೀಯ ಹೆದ್ದಾರಿ 66 ಹಾದು ಹೋಗಿರುವ ಹಳೆಯಂಗಡಿ ಪೇಟೆ ಇತ್ತೀಚಿನ ದಿನಗಳಲ್ಲಿ ಅಪಘಾತಗಳನ್ನು ಆಹ್ವಾನಿಸುವ ಕೇಂದ್ರವಾಗಿ ಮಾರ್ಪಡುತ್ತಿದೆ.

ಇಲ್ಲಿ ರಾಷ್ಟ್ರೀಯ ಹೆದ್ದಾರಿ 66ರ ಒಂದು ಬದಿಯಿಂದ ಕಿನ್ನಿಗೋಳಿ-ಕಟೀಲು ಸೇರಿದಂತೆ ಮೂಡುಬಿದಿರೆ ಕಡೆಗೆ ಹೋಗುವ ಕಡಿದಾದ ಮಾರ್ಗವಿದ್ದು, ಇನ್ನೊಂದು ಬದಿಯಿಂದ ಹಳೆಯಂಗಡಿ ಪೇಟೆಗೆ ಸಂಚರಿಸುವ ಮಾರ್ಗವಿದೆ.

ರಾಷ್ಟ್ರೀಯ ಹೆದ್ದಾರಿಯ ವಾಹನ ದಟ್ಟಣೆಯಿಂದಾಗಿ ಕಟೀಲು, ಕಿನ್ನಿಗೋಳಿ ಕಡೆ ಮತ್ತು ಹಳೆಯಂಗಡಿ ಪೇಟೆಗೆ ತೆರಳುವ ವಾಹನ ಸವಾರರು ಮತ್ತು ಸಾರ್ವಜನಿಕರು ರಾಷ್ಟ್ರೀಯ ಹೆದ್ದಾರಿಯನ್ನು ದಾಟಲು ಹರಸಾಹಸವನ್ನೇ ಮಾಡಬೇಕಾಗಿದೆ ಎಂದು ಸವಾರರು ಅಸಹಾಯಕತೆ ವ್ಯಕ್ತಪಡಿಸುತ್ತಾರೆ.

ಅಲ್ಲದೆ ಈ ಭಾಗದಲ್ಲಿ ಪ್ರಾರ್ಥಮಿಕ, ಪದವಿ ಶಾಲೆಗಳಿದ್ದು, ವಿದ್ಯಾರ್ಥಿಗಳು ಹೆದರಿಕೊಂಡೇ ರಸ್ತೆ ದಾಟಬೇಕಾದ ಸ್ಥಿತಿಯಿದೆ ಎಂದು ವಿದ್ಯಾರ್ಥಿಗಳು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಪೇಟೆಯಲ್ಲಿ ಸಂಚರಿಸುವುದು ಅಸಾಧ್ಯವಾಗಿರುವ ಇಂತಹ ಪರಿಸ್ಥಿತಿಯಲ್ಲಿ ಪೊಲೀಸ್ ಇಲಾಖೆಯಾಗಲೀ, ಹಳೆಯಂಗಡಿ ಗ್ರಾಪಂ ಆಗಲಿ ಸಾರ್ವಜನಿಕರ ಸಂಕಷ್ಟಕ್ಕೆ ಸ್ಪಂದಿಸುವ ಕೆಲಸಕ್ಕೆ ಮುಂದಾಗುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

 ಪೊಲೀಸ್ ಇಲಾಖೆ ರಾಷ್ಟ್ರೀಯ ಹೆದ್ದಾರಿಗೆ ಬ್ಯಾರಿಕೇಡ್‌ಗಳನ್ನು ಹಾಕಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ವೇಗಕ್ಕೆ ಕಡಿವಾಣ ಹಾಕಿದೆಯಾದರೂ, ಕನಿಷ್ಠ ಓರ್ವ ಪೊಲೀಸ್ ಸಿಬ್ಬಂದಿಯನ್ನು ನೇಮಿಸಿ ಸಾರ್ವಜನಿಕರು ಸುಸೂತ್ರವಾಗಿ ರಸ್ತೆ ದಾಟುವಂತಾಗಲು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸಾರ್ವಜನಿಕರು ಪೊಲೀಸ್ ಇಲಾಖೆಯ ನಿರ್ಲಕ್ಷತನಕ್ಕೆ ಅಸಮಾಧಾನ ವ್ಯಕ್ತಡಿಸಿದ್ದಾರೆ.

ಖಾಸಗಿ ಬಸ್‌ಗಳಿಂದ ಸಂಚಾರಕ್ಕೆ ಅಡ್ಡಿ: ಮಂಗಳೂರಿನಿಂದ ಕಿನ್ನಿಗೋಳಿ ಕಟೀಲು ಭಾಗಕ್ಕೆ ಸಂಚರಿಸುವ ಬಸ್‌ಗಳಿಗಾಗಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಬೃಹತ್ ಬಸ್ ನಿಲ್ದಾಣವನ್ನು ನಿರ್ಮಾಣ ಮಾಡಿದ್ದರೂ ಬಸ್‌ಗಳು ಕಿನ್ನಿಗೋಳಿ ಕಟೀಲಿಗೆ ತಿರುವು ಪಡೆಯುವ ಕಡಿದಾದ ರಸ್ತೆಯಲ್ಲಿ ಹೆದ್ದಾರಿಗೆ ತಾಗಿಕೊಂಡಂತೆ ನಿಲ್ಲಿಸುತ್ತಿದ್ದು, ವಾಹನಗಳು ಮತ್ತು ಪಾದಚಾರಿಗಳಿಗೆ ಸಮಸ್ಯೆ ಉಂಟು ಮಾಡುತ್ತಿದೆ. ಈ ಬಗ್ಗೆ ಟ್ರಾಫಿಕ್ ಪೊಲೀಸರಿಗೆ ಮಾಹಿತಿ ನೀಡಿ ಸಮಸ್ಯೆ ಪರಿಹಾರಕ್ಕೆ ವಿನಂತಿಸಿಕೊಂಡರೆ, ಎರಡು ಮೂರು ದಿನ ಸಂಚಾರದಟ್ಟಣೆ ನಿಭಾಯಿಸಲು ಪೊಲೀಸರನ್ನು ನಿಯೋಜಿಸಲಾಗುತ್ತದೆ. ಆ ಬಳಿಕ ಪೊಲೀಸರು ನಾಪತ್ತೆಯಾಗುತ್ತಾರೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.

ಹಳೆಯಂಗಡಿಯ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಸುಸಜ್ಜಿತವಾದ ಬಸ್‌ಬೇ ಇದ್ದರೂ ಕೂಡ ಕಿನ್ನಿಗೋಳಿ ಕಡೆಗೆ ತೆರಳುವ ಬಸ್‌ಗಳು ಪಕ್ಷಿಕೆರೆ ತೆರಳುವ ಕಿರಿದಾದ ರಸ್ತೆಯಲ್ಲಿ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸುವುದರಿಂದ ಹಿಂದಿನಿಂದ ಬರುವ ವಾಹನಗಳು ಅನಿವಾರ್ಯವಾಗಿ ರಾಷ್ಟ್ರೀಯ ಹೆದ್ದಾರಿಯ ಮಧ್ಯದಲ್ಲಿ ನಿಲ್ಲಿಸಿ ಕೆಲಕಾಲ ಹೆದ್ದಾರಿ ವಾಹನ ಸಂಚಾರಕ್ಕೆ ತಡೆಯಾಗು ವುದರ ಜೊತೆಗೆ ಸಾರ್ವಜನಿಕರು ರಸ್ತೆ ದಾಟುವುದಕ್ಕೆ ಪರದಾಡಬೇಕಾಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ ಅದ್ದಿ ಬೊಳ್ಳೂರು ಆರೋಪಿಸಿದ್ದಾರೆ.

ಮುಂದಿನ ದಿನಗಳಲ್ಲಾದರೂ ಪೊಲೀಸ್ ಇಲಾಖೆ, ಹೆದ್ದಾರಿ ಪ್ರಾಧಿಕಾರ ಸುಗಮ ವಾಹನ ಸಂಚಾರಕ್ಕೆ ಮತ್ತು ಪಾದಚಾರಿಗಳು ರಸ್ತೆದಾಟಲು ಸಹಕಾರಿಯಾಗುವಂತೆ ಸೂಕ್ತಕ್ರಮ ಕೈಗೊಳ್ಳ ಬೇಕೆಂದು ನಾಗರಿಕರು ಒತ್ತಾಯಿಸಿದ್ದಾರೆ.

ಹಳೆಯಂಗಡಿ ಪೇಟೆಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ. ಸಧ್ಯ ರಾ.ಹೆ.ಗೆ ಬ್ಯಾರಿಕೇಟ್‌ಗಳನ್ನು ಅಳವಡಿಸಿ ವಾಹನಗಳ ವೇಗವನ್ನು ಕಡಿಮೆ ಮಾಡಿ ಕಳುಹಿಸುವ ಕೆಲಸ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆಯಲ್ಲಿ ಸಮಸ್ಯೆಯನ್ನು ಮನದಟ್ಟು ಮಾಡಿಸಿ ಸೂಕ್ತ ಕ್ರಮವಹಿಸಲಾಗುವುದು.

 ನಾಗರಾಜ್, ಎಸಿಪಿ ಟ್ರಾಫಿಕ್ ವಿಭಾಗ

ಈ ಬಗ್ಗೆ ಸಾರ್ವಜನಿಕರಿಂದ ಯಾವುದೇ ದೂರುಗಳು ಬಂದಿಲ್ಲ. ಗ್ರಾಪಂನ ಮುಂದಿನ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಪಂಚಾಯತ್ ವತಿಯಿಂದ ಕೈಗೊಳ್ಳಬಹುದಾದ ಎಲ್ಲಾ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವುದು.

 ಪೂರ್ಣಿಮಾ, ಹಳೆಯಂಗಡಿ ಗ್ರಾಪಂ ಅಧ್ಯಕ್ಷೆ

Writer - ರಹ್ಮಾನ್ ಹಳೆಯಂಗಡಿ

contributor

Editor - ರಹ್ಮಾನ್ ಹಳೆಯಂಗಡಿ

contributor

Similar News