×
Ad

ಟಿಪ್ಪುಸುಲ್ತಾನ್‌ ಕಾಲದ ಭವ್ಯ ಕಲಾಕೃತಿಗೆ ಕೋಟ್ಯಂತರ ರೂ. ಮೌಲ್ಯವಿರಲು ಕಾರಣವೇನು?

Update: 2022-03-30 18:20 IST

ಹೊಸದಿಲ್ಲಿ,ಮಾ.30: ಕಲೆಯ ಪೋಷಕ ಎಂದೇ ಖ್ಯಾತರಾಗಿರುವ ಟಿಪ್ಪು ಸುಲ್ತಾನರು ಹಲವಾರು ಮಹತ್ವದ ವರ್ಣ ಕಲಾಕೃತಿಗಳ ರಚನೆಯನ್ನು ಉತ್ತೇಜಿಸಿದ್ದರು. ಈ ಪೈಕಿ ಹಲವಾರು ಕಲಾಕೃತಿಗಳು ಇತ್ತೀಚಿನ ವರ್ಷಗಳಲ್ಲಿ ಬೆಳಕಿಗೆ ಬಂದಿದ್ದು,ಹರಾಜುಗಳಲ್ಲಿ ಭಾರೀ ಮೊತ್ತಕ್ಕೆ ಮಾರಾಟವಾಗುತ್ತಿವೆ. ಅವರ ಖಜಾನೆಯಲ್ಲಿಯ ಇನ್ನೊಂದು ಕಲಾಕೃತಿಯನ್ನು ಲಂಡನ್ ನ ಸೋದ್ಬಿಯ ‘ಆರ್ಟ್ ಆಫ್ ಇಸ್ಲಾಮಿಕ್ ವರ್ಲ್ಡ್ ಆ್ಯಂಡ್ ಇಂಡಿಯಾ’ ಹರಾಜಿನಲ್ಲಿ ಮಾರಾಟಕ್ಕಿಡಲಾಗಿದೆ. ‘ಪೊಲ್ಲಿಲುರ್ ಯುದ್ಧ’ಎಂಬ ಶೀರ್ಷಿಕೆಯ ಈ ಕಲಾಕೃತಿಯನ್ನು ಇತಿಹಾಸಕಾರ ವಿಲಿಯಂ ಡಾಲ್ರಿಂಪಲ್ ಅವರು ಟಿಪ್ಪು ಯುಗದ ಶ್ರೇಷ್ಠ ಮೇರುಕೃತಿಗಳಲ್ಲಿ ಒಂದಾಗಿದೆ ಎಂದು ಬಣ್ಣಿಸಿದ್ದು,ಐದು ಲಕ್ಷ ಮತ್ತು ಎಂಟು ಲಕ್ಷ ಪೌಂಡ್ ನಡುವಿನ ಮೌಲ್ಯಕ್ಕೆ ಮಾರಾಟವಾಗುವ ನಿರೀಕ್ಷೆಯಿದೆ.

                 
ಕಲಾಕೃತಿಯು ಏನನ್ನು ಅಭಿವ್ಯಕ್ತಿಸುತ್ತಿದೆ?

ಸುಮಾರು 32 ಅಡಿ ಉದ್ದದ ಸ್ಮಾರಕ ಕಲಾಕೃತಿಯು 1780 ಸೆಪ್ಟಂಬರ್ನಲ್ಲಿ ನಡೆದಿದ್ದ ಪೊಲ್ಲಿಲುರ್ ಯುದ್ಧದಲ್ಲಿ ಬ್ರಿಟಿಷರ ವಿರುದ್ಧ ಮೈಸೂರಿನ ಆಡಳಿತಗಾರ ಹೈದರ್ ಅಲಿ ಮತ್ತು ಅವರ ಪುತ್ರ ಟಿಪ್ಪು ನೇತೃತ್ವದ ಸೇನೆಯ ವಿಜಯವನ್ನು ಪ್ರತಿನಿಧಿಸುತ್ತಿದೆ.
 
ಸೋದ್ಬಿಯ ವೆಬ್ಸೈಟ್ನಲ್ಲಿ ಕಲಾಕೃತಿಯ ಕುರಿತು ಟಿಪ್ಪಣಿಯಲ್ಲಿ ಡಾಲ್ರಿಂಪಲ್ ಅವರು,ಕಲಾಕೃತಿಯು ಹತ್ತು ಬೃಹತ್ ಹಾಳೆಗಳಿಗೆ ವಿಸ್ತರಿಸಿದ್ದು,ಒಟ್ಟು ಸುಮಾರು 32 ಅಡಿ(978.5 ಸೆಂ.ಮೀ.) ಉದ್ದವಿದೆ. ಸಮಕಾಲೀನ ಮುಘಲ್ ಇತಿಹಾಸಕಾರ ಗುಲಾಂ ಹುಸೇನ್ ಖಾನ್ ಹೇಳಿರುವಂತೆ ಟಿಪ್ಪುವಿನ ಅಶ್ವಸೇನೆಯು ಇಕ್ಕೆಲಗಳಿಂದ ಪ್ರಕ್ಷುಬ್ಧ ಸಾಗರದಂತೆ ಮುಂದೊತ್ತಿ ಬರುತ್ತಿದ್ದಾಗ ಕಂಪನಿ ಸೇನೆಯ ಮದ್ದುಗುಂಡುಗಳು ತುಂಬಿದ್ದ ಬಂಡಿಯು ಸ್ಫೋಟಿಸಿದ ದೃಶ್ಯವನ್ನು ಕೇಂದ್ರೀಕರಿಸಿದೆ. ಮೈಸೂರು ಸೇನೆಯ ಅಶ್ವಾರೂಢ ಸೈನಿಕರು ಸಮೀಪಿಸುತ್ತಿದ್ದಂತೆ ಕೆಂಪು ಮೂತಿಯ ಬ್ರಿಟಿಷ್ ಸೈನಿಕರು ಜೀವಭಯದಿಂದ ವಿಹ್ವಲಗೊಂಡಿರುವುದನ್ನು ಕಲಾಕೃತಿಯು ತೋರಿಸುತ್ತಿದೆ.
                     
ಕಲಾಕೃತಿಯ ಮಹತ್ವವೇನು?

1784ರಲ್ಲಿ ಶೀರಂಗಪಟ್ಟಣದಲ್ಲಿ ಹೊಸದಾಗಿ ನಿರ್ಮಿಲಾದ ದರಿಯಾ ದೌಲತ್ ಬಾಗ್ಗಾಗಿ ಬೃಹತ್ ಭಿತ್ತಿಚಿತ್ರದ ಭಾಗವಾಗಿ ಈ ಕಲಾಕೃತಿಯ ರಚನೆಗೆ ಮೈಸೂರಿನ ಕೊನೆಯ ಆಡಳಿತಗಾರ ಟಿಪ್ಪು ಸುಲ್ತಾನ್ ಚಾಲನೆ ನೀಡಿದ್ದರು. ತಿಳಿದು ಬಂದಿರುವಂತೆ ಇಂತಹ ಮೂರು ಕಲಾಕೃತಿಗಳು ಮಾತ್ರ ಅಸ್ತಿತ್ವದಲ್ಲಿವೆ. ಇವುಗಳ ಪೈಕಿ ಒಂದು 2010ರಲ್ಲಿ ಸೋದ್ಬಿಯ ಹರಾಜಿನಲ್ಲಿ 7,69,250 ಪೌಂಡ್ಗಳಿಗೆ ಮಾರಾಟವಾಗಿದ್ದು,ಅದನ್ನು ಈಗ ಹರಾಜಿಗಿಡಲಾಗಿರುವ ಕಲಾಕೃತಿಗಿಂತ ಭಿನ್ನವಾಗಿ ಹೆಚ್ಚು ಪುನರುಜ್ಜೀವನಗೊಳಿಸಲಾಗಿತ್ತು ಎನ್ನಲಾಗಿದೆ.
 
ಈಗಿನ ಕಲಾಕೃತಿಯು ಬ್ರಿಟನ್ನಿನ ಖಾಸಗಿ ವ್ಯಕ್ತಿಯೋರ್ವರ ಸಂಗ್ರಹದಲ್ಲಿದ್ದು,1990ರಲ್ಲಿ ಲಂಡನ್ನಲ್ಲಿ ಮತ್ತು 1999ರಲ್ಲಿ ಎಡಿನ್ಬರೋದಲ್ಲಿ ಸೇರಿದಂತೆ ಹಲವಾರು ಪ್ರದರ್ಶನಗಳಲ್ಲಿ ಪ್ರದರ್ಶಿತಗೊಂಡಿತ್ತು.
    
ಇತ್ತೀಚಿನ ವರ್ಷಗಳಲ್ಲಿ ಹರಾಜಾಗಿರುವ ಟಿಪ್ಪು ಸ್ಮರಣಿಕೆಗಳು

ನವಂಬರ್ 2021ರಲ್ಲಿ ಟಿಪ್ಪು ಸುಲ್ತಾನರ ಸಿಂಹಾಸನವನ್ನು ಅಲಂಕರಿಸಿದ್ದ ಎಂಟು ಹುಲಿ ತಲೆಗಳ ಪೈಕಿ ಒಂದು 15 ಲಕ್ಷ ಪೌಂಡ್ ಗಳಿಗೆ ಹರಾಜಿಗೆ ಬಂದಿತ್ತು. ಅದರ ರಫ್ತನ್ನು ತಾತ್ಕಾಲಿಕವಾಗಿ ತಡೆಹಿಡಿದಿರುವ ಬ್ರಿಟನ್ನ ಡಿಜಿಟಲ್,ಸಂಸ್ಕೃತಿ,ಮಾಧ್ಯಮ ಮತ್ತು ಕ್ರೀಡಾ ಇಲಾಖೆಯು ಸಿಂಹಾಸನದ ಶಿಖರಾಲಂಕಾರವು ಬ್ರಿಟಿಷ್ ಇತಿಹಾಸದೊಂದಿಗೆ ನಿಕಟ ಸಂಬಂಧವನ್ನು ಹೊಂದಿದೆ ಎಂದು ಹೇಳಿದೆ. ಈ ಹುಲಿಯ ತಲೆಗೆ ಬ್ರಿಟನ್ನಲ್ಲಿಯೇ ಖರೀದಿದಾರರು ಸಿಗಬಹುದು ಎಂಬ ಆಶಯವನ್ನು ಅದು ಹೊಂದಿದೆ.

2019,ಮಾರ್ಚ್ ನಲ್ಲಿ ಟಿಪ್ಪು ಸುಲ್ತಾನರ ಶಸ್ತ್ರಾಗಾರದಲ್ಲಿಯ ಕೆಲವು ವಸ್ತುಗಳನ್ನು ಸುಮಾರು 1,07,000 ಪೌಂಡ್ ಗಳಿಗೆ ಹರಾಜು ಮಾಡಲಾಗಿತ್ತು. 60,000 ಪೌಂಡ್ ಗಳಿಗೆ ಮಾರಾಟವಾಗಿದ್ದ ಬೆಳ್ಳಿಯನ್ನು ಅಳವಡಿಸಿದ್ದ 20-ಬೋರ್ ಫ್ಲಿಂಟ್ಲಾಕ್ ಗನ್ ಮತ್ತು ಬಯೊನೆಟ್ ಇದರಲ್ಲಿ ಒಳಗೊಂಡಿದ್ದವು. ಅದೇ ವರ್ಷದ ಜೂನ್ನಲ್ಲಿ ಕ್ರಿಸ್ತೀಸ್ ಹರಾಜು ಸಂಸ್ಥೆಯು ಟಿಪ್ಪು ಸುಲ್ತಾನರ ‘ಮ್ಯಾಜಿಕ್ ಬಾಕ್ಸ್ ’ಅನ್ನು 4,95,000 ಪೌಂಡ್ ಗಳಿಗೆ ಮಾರಾಟವಾಗಿತ್ತು.

2015ರಲ್ಲಿ ಟಿಪ್ಪುರ ಶಸ್ತ್ರಾಸ್ತ್ರಗಳು ಮತ್ತು ರಕ್ಷಾಕವಚಗಳ ಸಂಗ್ರಹವನ್ನು ಬಾನ್ಹಾಮ್ಸ್ ನ ‘ಇಸ್ಲಾಮಿಕ್ ಆ್ಯಂಡ್ ಇಂಡಿಯನ್ ಆರ್ಟ್ ಸೇಲ್ ’ನಲ್ಲಿ ಒಟ್ಟು 60 ಲಕ್ಷಕ್ಕೂ ಅಧಿಕ ಪೌಂಡ್ ಗಳಿಗೆ ಮಾರಾಟ ಮಾಡಲಾಗಿತ್ತು. ಹರಾಜಿನಲ್ಲಿಯ 30 ವಸ್ತುಗಳು ಏಕವ್ಯಕ್ತಿ ಸಂಗ್ರಹದಿಂದ ಬಂದಿದ್ದವು.

ಕೃಪೆ: Indianexpress.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News