ಮಂಗಳೂರು ವಿವಿ ವಿದ್ಯಾರ್ಥಿ ಪರಿಷತ್ ಉದ್ಘಾಟನೆ; ಕಲ್ಲಡ್ಕ ಪ್ರಭಾಕರ ಭಟ್ ಆಹ್ವಾನಿಸಿದನ್ನು ವಿರೋಧಿಸಿ ಪ್ರತಿಭಟನೆ
ಮಂಗಳೂರು : ವಿಶ್ವ ವಿದ್ಯಾಲಯಗಳಲ್ಲಿ ಜನಾಂಗ ದ್ವೇಷಿಗಳಿಗೆ ಪ್ರವೇಶವಿಲ್ಲ ಎಂಬ ಘೋಷ ವಾಕ್ಯದೊಂದಿಗೆ ಭಾರತ ವಿದ್ಯಾರ್ಥಿ ಫೆಡರೇಶನ್ (ಎಸ್‌ಎಫ್‌ಐ) ದ.ಕ. ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನೆ ನಡೆಯಿತು.
ಮಂಗಳೂರು ವಿವಿ ವಿದ್ಯಾರ್ಥಿ ಪರಿಷತ್ ಉದ್ಘಾಟನೆಗೆ ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಆಹ್ವಾನಿಸಿದನ್ನು ವಿರೋಧಿಸಿ ವಿವಿ ಕುಲಪತಿ, ಆಡಳಿತ ಮಂಡಳಿ ವಿರುದ್ಧ ನಗರದ ಹಂಪನಕಟ್ಟೆ ಬಳಿಯ ವಿವಿ ಕಾಲೇಜು ಬಳಿ ಪ್ರತಿಭಟನೆ ನಡೆಯಿತು.
ಪ್ರತಿಭಟನಾಕಾರನ್ನುದ್ದೇಶಿಸಿ ಮಾತನಾಡಿದ ಎಸ್‌ಎಫ್‌ಐನ ಮಾಜಿ ಮುಖಂಡ ಮನೋಜ್ ವಾಮಂಜೂರು, ವಿಶ್ವವಿದ್ಯಾನಿಲಯದ ಕ್ಯಾಂಪಸ್‌ಗೆ ಜನಾಂಗ ದ್ವೇಷಿಗಳನ್ನು ಆಹ್ವಾನಿಸುವುದನ್ನು ಖಂಡಿಸುವುದಾಗಿ ಹೇಳಿದರು. ವಿಶ್ವವಿದ್ಯಾನಿಲಯ ಮಾನ್ಯತೆ ಹೊಂದಿರುವುವಂತದ್ದು. ಆದರೆ ದ್ವೇಷದ ಮಾತುಗಳನ್ನಾಡುವವರನ್ನು ಆಹ್ವಾನಿಸುವ ಮೂಲಕ ಅದರ ಪಾವಿತ್ರ್ಯತೆಗೆ ಧಕ್ಕೆ ತರಲಾಗಿದೆ ಎಂದರು.
ವಿಶ್ವವಿದ್ಯಾನಿಲಯ ಕೇವಲ ಒಂದು ಪ್ರದೇಶ, ರಾಜ್ಯ ರಾಷ್ಟ್ರಕ್ಕೆ ಸೀಮಿತವಾಗಿಲ್ಲ. ಅದು ವಿಶ್ವಮಾನ್ಯತೆ ಪಡೆದಿರುವಂತದ್ದು. ವಿಶ್ವದ ವಿವಿಧ ಕಡೆಗಳಿಂದ ಇಲ್ಲಿನ ಸಂಸ್ಕೃತಿ, ಭಾಷೆ ಕಲಿಕೆಗೂ ಬರುತ್ತಾರೆ. ಆದರೆ ವಿಶ್ವದ ನಂಬಿಕೆಗೆ ಅರ್ಹವಾದ ಮಾತುಗಳನ್ನಾಡದವರನ್ನು ವಿವಿಗೆ ಆಹ್ವಾನಿಸುವುದನ್ನು ಎಸ್‌ಎಫ್‌ಐ ಖಂಡಿಸುತ್ತದೆ ಎಂದರು.
ಪ್ರತಿಭಟನೆಯಲ್ಲಿ ಜಿಲ್ಲಾ ಮುಖಂಡರಾದ ಮಾಧುರಿ ಬೋಳಾರ, ಜಿಲ್ಲಾ ಸಂಚಾಲಕರಾದ ವಿನೀತ್ ದೇವಾಡಿಗ, ಸಹ ಸಂಚಾಲರಾದ ವಿನೂಷ ರಮಣ, ಹನುಮಂತ, ಬಾಷಿತ್, ಸಿನಾನ್, ಜೀವನ್, ಪೃಥ್ವಿ, ಪ್ರಥಮ್, ಮೊದಲಾದವರು ಭಾಗವಹಿಸಿದ್ದರು.