×
Ad

ಕೊಂಕಣ ರೈಲ್ವೆ: ಮುಂಬೈ-ಮಂಗಳೂರು ಮಾರ್ಗದ ವಿದ್ಯುದ್ದೀಕರಣ ಪೂರ್ಣ

Update: 2022-03-30 19:31 IST

ಉಡುಪಿ : ಕರಾವಳಿ ಕರ್ನಾಟಕದ ಪ್ರಮುಖ ರೈಲ್ವೆ ಯೋಜನೆಯಾದ ಕೊಂಕಣ ರೈಲು ಮಾರ್ಗ ಇದೀಗ ಶೇ.100ರಷ್ಟು ವಿದ್ಯುದ್ದೀಕರಣಗೊಂಡಿದ್ದು, ಶೀಘ್ರವೇ ಈ ಮಾರ್ಗದಲ್ಲಿ ಮುಂಬೈ (ರೋಹಾ) ಮತ್ತು ಮಂಗಳೂರು (ತೋಕೂರು) ನಡುವೆ ನಿಗಮದ ರೈಲು ಗಳು ವಿದ್ಯುಚ್ಛಕ್ತಿ ಮೂಲಕವೇ ಸಂಚರಿಸಲು ತೊಡಗಲಿವೆ.

ಈ ಮೂಲಕ ಪರಿಸರ ಸ್ನೇಹಿಯಾದ ಇಡೀ ಬ್ರಾಡ್‌ಗೇಜ್ ಮಾರ್ಗವನ್ನು ವಿದ್ಯುದ್ದೀಕರಣಗೊಳಿಸುವ ತಮ್ಮ ಮಿಷನ್‌ನ್ನು ಭಾರತೀಯ ರೈಲ್ವೆ ಸಾಕಾರಗೊಳಿಸಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.

ರೈಲುಗಳನ್ನು ವಿದ್ಯುಚ್ಛಕ್ತಿಯಲ್ಲಿ ನಡೆಸುವ ಮೂಲಕ ಶೂನ್ಯ ಇಂಗಾಲದ ಹೊರಸೂಸುವಿಕೆಯೊಂದಿಗೆ ಓಡಿಸುವ ತಮ್ಮ ಗುರಿಯನ್ನೂ ಸಾಧಿಸಿದಂತಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಮುಂಬೈ ಸಮೀಪದ ರೋಹಾದಿಂದ ಮಂಗಳೂರು ಸಮೀಪದ ತೋಕೂರುವರೆಗಿನ 741ಕಿ.ಮೀ. ಉದ್ದದ ಕೊಂಕಣ ರೈಲ್ವೆ ಮಾರ್ಗವನ್ನು ವಿದ್ಯುದ್ದೀಕರಣಗೊಳಿಸುವ ಕಾಮಗಾರಿಗೆ 2015ರ ನವೆಂಬರ್ ತಿಂಗಳಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಈ ಕಾಮಗಾರಿಯನ್ನು ಇದೀಗ 1287 ಕೋಟಿ ರೂ.ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದೆ.

ಇಡೀ ಕೊಂಕಣ ರೈಲ್ವೆ ಮಾರ್ಗದ ಸಿಆರ್‌ಎಸ್ ಪರಿಶೀಲನೆಯನ್ನು 2020ರ ಮಾರ್ಚ್ ತಿಂಗಳಿನಿಂದ ಒಟ್ಟು ಆರು ಹಂತಗಳಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ. ಕೊನೆಯ ಹಂತದ ಪರೀಕ್ಷೆಯನ್ನು ಮಹಾರಾಷ್ಟ್ರದ ರತ್ನಗಿರಿ ಮತ್ತು ಗೋವಾದ ಥೀವಿಮ್ ವಿಭಾಗದ ನಡುವೆ ಕಳೆದ ಮಾ.24ರಂದು ನಡೆಸಲಾಗಿದ್ದು, ಇದಕ್ಕೆ ಮಾ.28ರಂದು ಅಧಿಕಾರ ಪತ್ರವನ್ನು ಪಡೆಯಲಾಗಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ವಿವರಿಸಲಾಗಿದೆ.

ವಿದ್ಯುದ್ದೀಕರಣ ಕಾಮಗಾರಿಯನ್ನು 2021ರ ಡಿಸೆಂಬರ್ ತಿಂಗಳಲ್ಲಿ ಮುಗಿಸಬೇಕಿತ್ತು. ಆದರೆ ಮಾರ್ಗ ಸಾಗುವ ಪಶ್ಚಿಮ ಘಟ್ಟದ ದುರ್ಗಮ ಪರಿಸರ, ಕೋವಿಡ್ ಸಾಂಕ್ರಾಮಿಕ ರೋಗ, ಬಿಡದೇ ಸುರಿಯುವ ಮಳೆ ಹಾಗೂ ಪ್ರವಾಹ ದಂಥ ಕಾರಣಗಳಿಂದ ವಿಳಂಬವಾಗಿತ್ತು. ಕೆಲವು ಸಂದರ್ಭದಲ್ಲಿ ಕಾಮಗಾರಿಯನ್ನು ನಡೆಸಲು ವಿಶೇಷ ವ್ಯವಸ್ಥೆಗಳನ್ನು ಮಾಡಬೇಕಾಗಿತ್ತು.

ಈ ಎಲ್ಲಾ ಸವಾಲುಗಳನ್ನು ಎದುರಿಸಿ ಯಶಸ್ವಿಯಾಗಿ ಪೂರ್ಣಗೊಳಿಸಿರುವ ಈ ಕಾಮಗಾರಿಯಿಂದ ನಿಗಮಕ್ಕೆ ಹಲವು ರೂಪದಲ್ಲಿ ಭಾರೀ ಲಾಭವಿದೆ. ಮೊದಲನೇಯದಾಗಿ ಇಂಧನದಿಂದಾಗಿಯೇ 150 ಕೋಟಿ ರೂ.ಗಳಿಗೂ ಅಧಿಕ ಉಳಿತಾಯ ವಾಗಲಿದೆ. ಪಶ್ಚಿಮ ಘಟ್ಟ ಪರಿಸರದ ಮಟ್ಟಿಗೆ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದು, ವಿದ್ಯುದ್ದೀಕರಣದಿಂದಾಗಿ ಇಲ್ಲಿ ಮಾಲಿನ್ಯ ರಹಿತ ಸಂಚಾರ ಸಾಧ್ಯವಾಗಲಿದೆ. ಅಲ್ಲದೇ ಎಚ್‌ಎಸ್‌ಡಿ ತೈಲದ ಮೇಲಿನ ಅವಲಂಬನೆಯೂ ಇಳಿಯಲಿದೆ.

ತೋಕೂರಿನಿಂದ ಉಡುಪಿ ಜಿಲ್ಲೆಯ ಬಿಜೂರುವರೆಗಿನ 105 ಕಿ.ಮೀ. ಮಾರ್ಗದ ವಿದ್ಯುದ್ದೀಕರಣ ಕಾಮಗಾರಿ 2021ರ ಮಾರ್ಚ್‌ನಲ್ಲಿ ಪೂರ್ಣಗೊಂಡಿತ್ತು. ಕೊನೆಯದಾಗಿ ರತ್ನಗಿರಿಯಿಂದ ಗೋವಾದ ಥಿವಿಮ್ ನಡುವಿನ 194ಕಿ.ಮೀ. ಮಾರ್ಗದ ವಿದ್ಯುದ್ದೀಕರಣ ಮಾ.24ಕ್ಕೆ ಮುಕ್ತಾಯಗೊಂಡು ಮಾ.28ರಂದು ಸಂಚಾರಕ್ಕೆಹಸಿರುನಿಶಾನೆ ದೊರಕಿತ್ತು.

ಕಾರವಾರದಿಂದ ಮಂಗಳೂರು ನಡುವೆ ಸಂಚರಿಸುವ ರೈಲು ಇದೀಗ ವಿದ್ಯುಚ್ಛಕ್ತಿ ಸಹಾಯದಿಂದಲೇ ಸಂಚರಿಸುತ್ತಿದೆ. ಈ ಮಾರ್ಗದಲ್ಲಿ ರೈಲುಗಳು ಗಂಟೆಗೆ 120ಕಿ.ಮೀ. ವೇಗದಲ್ಲಿ ಸಂಚರಿಸಲಿವೆ. ವಿದ್ಯುದ್ದೀಕರಣದಿಂದಾಗಿ ಶೀಘ್ರವೇ ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳಿಂದ ಇನ್ನು ಚುಕುಬುಕು ಸದ್ದು ಕೇಳಿಬರಲಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News