ಬೇಲಿಯೇ ಹೊಲ ಮೇಯ್ದರೆ?

Update: 2022-03-31 03:55 GMT

ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ ಕೋಮುಗಲಭೆಗಳೇ ಸಂಭವಿಸಿಲ್ಲ ಎಂದು ಅದರ ನಾಯಕರು ಆಗಾಗ ಸಾರ್ವಜನಿಕ ಭಾಷಣದಲ್ಲಿ ಕೊಚ್ಚಿಕೊಳ್ಳುವುದಿದೆ. ಆದರೆ, 2016ರಿಂದ 2020ರವರೆಗೆ ಸುಮಾರು 3,400 ಕೋಮುಗಲಭೆಗಳು ನಡೆದಿವೆ ಎಂದು ಕೇಂದ್ರ ಸರಕಾರ ಒಪ್ಪಿಕೊಂಡಿದೆ. 2020ರಲ್ಲಿ 857 ಗಲಭೆಗಳು ನಡೆದಿದ್ದರೆ, 2019ರಲ್ಲಿ 438 ಹಿಂಸಾಚಾರಗಳು ನಡೆದಿವೆ ಎನ್ನುವುದನ್ನು ಅಂಕಿಅಂಶಗಳು ಹೇಳುತ್ತವೆ. ದೇಶ ಆರ್ಥಿಕವಾಗಿ ಹಿನ್ನಡೆಯತ್ತ ಸಾಗುತ್ತಿರುವಂತೆಯೇ ಗಲಭೆಗಳಲ್ಲಿ ಮುನ್ನಡೆ ಸಾಧಿಸುತ್ತಿರುವುದು ಅತ್ಯಂತ ಆತಂಕಕಾರಿ ಅಂಶವಾಗಿದೆ. ಇದೇ ಸಂದರ್ಭದಲ್ಲಿ ದೇಶದಲ್ಲಿ ಗುಂಪುಗಳಿಂದ ಥಳಿಸಿ ವ್ಯಕ್ತಿಯನ್ನು ಹತ್ಯೆಗೈಯುವ ಪ್ರಕರಣಗಳೂ ಹೆಚ್ಚುತ್ತಿವೆ. ಜನಾಂಗೀಯ ಹಿನ್ನೆಲೆಯಲ್ಲಿ ನಡೆಯುವ ಈ ಗುಂಪು ಹತ್ಯೆಯ ವಿರುದ್ಧ ಅಮೆರಿಕ ಈಗಾಗಲೇ ಬಲವಾದ ಕಾನೂನನ್ನು ಜಾರಿಗೆ ತಂದಿದೆ ಮತ್ತು ಅದನ್ನು ಸ್ಪಷ್ಟವಾದ ಭಯೋತ್ಪಾದಕ ಕೃತ್ಯ ಎಂದು ಕರೆದಿದೆ. ಈ ಕೃತ್ಯದಲ್ಲಿ ಭಾಗಿಯಾದವರಿಗೆ 30 ವರ್ಷದವರೆಗೆ ಕಠಿಣ ಜೈಲು ಶಿಕ್ಷೆ ವಿಧಿಸುವುದಕ್ಕೆ ನೂತನ ಕಾಯ್ದೆಯಿಂದ ಸಾಧ್ಯವಿದೆ. ಭಾರತದಲ್ಲಿ ಗುಂಪು ಹತ್ಯೆಯನ್ನು ಸಾರ್ವಜನಿಕರ ಆಕ್ರೋಶ ಎನ್ನುವ ಮೃದು ಭಾಷೆಯಲ್ಲಿ ಕರೆಯಲಾಗುತ್ತದೆ.

ಪೊಲೀಸರ ಸಮ್ಮುಖದಲ್ಲಿ ಗುಂಪು ಹತ್ಯೆಗಳು ನಡೆಯುತ್ತವೆ ಮತ್ತು ದನ ಕಳವು ಶಂಕೆ, ಮಾಟಗಾತಿ ಎನ್ನುವ ಶಂಕೆಯ ಆಧಾರದಲ್ಲಿ ಕೃತ್ಯದ ಭೀಕರತೆಯನ್ನು ಕಡಿಮೆಗೊಳಿಸಲಾಗುತ್ತದೆ. ವಿಪರ್ಯಾಸವೆಂದರೆ ಗುಂಪಿನಿಂದ ಥಳಿಸಿ ಹತ್ಯೆಯ ಬಗ್ಗೆ ಎನ್‌ಸಿಆರ್‌ಬಿ ಪ್ರತ್ಯೇಕ ದತ್ತಾಂಶವನ್ನೇ ನಿರ್ವಹಿಸಿಲ್ಲ. ಕೋಮುಗಲಭೆಗಳಲ್ಲಿ ಎಷ್ಟು ಆರೋಪಿಗಳಿಗೆ ಶಿಕ್ಷೆಯಾಗಿದೆ ಎನ್ನುವುದನ್ನು ಪರಿಶೀಲಿಸಿದರೆ ಇನ್ನಷ್ಟು ನಿರಾಶೆ ಕಾದಿದೆ. ಕೋಮುಗಲಭೆಗಳಲ್ಲಿ ಭಾಗವಹಿಸಿದವರ ರಕ್ಷಣೆಗೆ ಸರಕಾರವೇ ನಿಲ್ಲುವುದರಿಂದ, ಕೋಮು ಹಿಂಸೆಯ ಮೂಲಕ ಸಮಾಜದಲ್ಲಿ ಶಾಂತಿ ಎಬ್ಬಿಸುವುದು ದುಷ್ಕರ್ಮಿಗಳಿಗೆ ಸುಲಭವಾಗಿದೆ. ಒಂದು ಕೋಮುಗಲಭೆ ನಡೆಸಿದಾಗ ಅಶಾಂತಿಗೆ ಕಾರಣರಾದವರ ಮೇಲೆ ಕಠಿಣ ಕ್ರಮ ತೆಗೆದುಕೊಂಡರೆ ಮತ್ತೊಂದು ಗಲಭೆಯನ್ನು ತಪ್ಪಿಸಬಹುದು. ಯಾವಾಗ ಕೋಮುಗಲಭೆ ಆರೋಪಿಗಳಿಗೆ ಕಾನೂನು ಕುಣಿಕೆಯಿಂದ ಸುಲಭವಾಗಿ ಪಾರಾಗಬಹುದು ಎನ್ನುವುದು ಮನವರಿಕೆಯಾಗುತ್ತದೆಯೋ ಆಗ ಸಮಾಜ ಪದೇ ಪದೇ ಇಂತಹ ಅಶಾಂತಿಗಳಿಗೆ ಗುರಿಯಾಗಬೇಕಾಗುತ್ತದೆ.

ಕರ್ನಾಟಕವನ್ನೇ ತೆಗೆದುಕೊಂಡರೆ, ಕಳೆದ ಒಂದು ವರ್ಷದಲ್ಲಿ 330 ಅಪರಾಧ ಪ್ರಕರಣಗಳನ್ನು ಸರಕಾರ ಹಿಂದಕ್ಕೆ ತೆಗೆದುಕೊಂಡಿದೆ. ಅಂದರೆ ನ್ಯಾಯಾಲಯದಲ್ಲಿ ವಿಚಾರಣೆಯಾಗಿ ಆರೋಪಿಗಳಿಗೆ ಶಿಕ್ಷೆಯಾಗುವ ಮೊದಲೇ ಸರಕಾರವೇ ಪ್ರಕರಣವನ್ನು ಮುಗಿಸಿ ಆರೋಪಿಗಳಿಗೆ ಕ್ಲೀನ್ ಚಿಟ್ ನೀಡಿದೆ. ಹೀಗಿರುವಾಗ ಸಮಾಜದಲ್ಲಿ ಕೋಮುಉದ್ವಿಗ್ನ ವಾತಾವರಣ ಕಡಿಮೆಯಾಗುವುದು ಹೇಗೆ ಸಾಧ್ಯ? ವಿಪರ್ಯಾಸವೆಂದರೆ ರೈತರ ಬೇಡಿಕೆಗಳಿಗೆ ಸಂಬಂಧಿಸಿ ಪ್ರತಿಭಟನೆ ಮಾಡಿದ ಹೋರಾಟಗಾರರ ಮೇಲಿನ, ಜನಪರ ಬೇಡಿಕೆಗಾಗಿ ನಡೆಸಿದ ಪ್ರಗತಿಪರರ ಮೇಲಿನ ಪ್ರಕರಣಗಳನ್ನು ಹಿಂದೆಗೆಯುವ ಕುರಿತಂತೆ ಸರಕಾರ ಇಷ್ಟೊಂದು ಆಸಕ್ತಿಯನ್ನು .ತೋರಿಸಿಲ್ಲ. ಸಮಾಜದ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವುದು ಸರಕಾರದ ಹೊಣೆ. ಧರ್ಮದ ಹೆಸರಿನಲ್ಲಿ ದುಷ್ಕರ್ಮಿಗಳು ಸಮಾಜದಲ್ಲಿ ಶಾಂತಿಕೆಡಿಸುತ್ತಿರುವಾಗ, ‘ಕಾನೂನು ಕೈಗೆತ್ತಿಕೊಂಡರೆ ಕಠಿಣಕ್ರಮ’ ಎಂದು ಸರಕಾರ ಎಚ್ಚರಿಕೆ ನೀಡುತ್ತದೆ. ಆದರೆ ಕೋಮುಗಲಭೆ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳಿಗೆ ಸರಕಾರವೇ ಕ್ಲೀನ್ ಚಿಟ್ ನೀಡುತ್ತದೆ. ಈ ಮೂಲಕ, ಇನ್ನೊಂದು ಕೋಮುಗಲಭೆಗೆ ಸರಕಾರವೇ ಅನುಮತಿ ಕೊಡುತ್ತದೆ.

ಕೋಮುಗಲಭೆಗಳಲ್ಲಿ ಭಾಗವಹಿಸಿದ ಆರೋಪಿಗಳನ್ನು ಗಮನಿಸಿದರೆ ಅವರ ಮೇಲೆ ಸಾಲು ಸಾಲು ಕ್ರಿಮಿನಲ್ ಪ್ರಕರಣಗಳಿರುತ್ತವೆ. ಯಾವುದೇ ಸಾಮಾಜಿಕ ಬದ್ಧತೆ ಅವರಲ್ಲಿಲ್ಲ. ಹೀಗಿರುವಾಗ ಕಾನೂನಿನ ಸಲಹೆಯನ್ನು ಉಲ್ಲಂಘಿಸಿ ಇವರನ್ನು ರಕ್ಷಿಸುವ ಉದ್ದೇಶವಾದರೂ ಏನು? ಇದೇ ಸಂದರ್ಭದಲ್ಲಿ ಕೃಷಿ ವಿರೋಧಿ ನೀತಿಗಳನ್ನು ವಿರೋಧಿಸಿ ಬೀದಿಗಿಳಿದ, ಸಿಎಎಯಂತಹ ಜನವಿರೋಧಿ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟಿಸಿದ ಜನಸಾಮಾನ್ಯರನ್ನು ಅತ್ಯಂತ ಕ್ರೂರವಾಗಿ ದಮನಿಸಲಾಗಿದೆ. ಇಂದಿಗೂ ನೂರಾರು ಕಾರ್ಯಕರ್ತರು, ವಿದ್ಯಾರ್ಥಿಗಳು, ಮಹಿಳೆಯರು ಜೈಲಿನಲ್ಲಿದ್ದಾರೆ. ಜೊತೆಗೆ ಕೋರೆಗಾಂವ್‌ನಲ್ಲಿ ದಲಿತರನ್ನು ಸಂಘಟಿಸಿದ ಹಲವು ಚಿಂತಕರು ಬಂಧಿಸಲ್ಪಟ್ಟಿದ್ದಾರೆ. ಇವರು ಯಾರೂ ಕ್ರಿಮಿನಲ್ ಹಿನ್ನೆಲೆಯವರು ಅಲ್ಲ. ಇವರ ಮೇಲಿನ ಪ್ರಕರಣಗಳನ್ನು ಹಿಂದೆಗೆಯದ ಸರಕಾರ, ಕ್ರಿಮಿನಲ್ ಹಿನ್ನೆಲೆಯಿರುವ, ಕೋಮುಗಲಭೆಗಳಲ್ಲಿ ಭಾಗವಹಿಸಿದ ಗೂಂಡಾಗಳನ್ನು ಜೈಲಿನಿಂದ ಹೊರತರುತ್ತದೆ. ನಮ್ಮ ಸರಕಾರ ಎಂತಹ ದೇಶವನ್ನು ಕಟ್ಟಲು ಹೊರಟಿದೆ ಎನ್ನುವುದನ್ನು ಈ ಮೂಲಕ ನಾವು ಅರ್ಥಮಾಡಿಕೊಳ್ಳಬೇಕಾಗಿದೆ.

 ದೇಶ ಆರ್ಥಿಕವಾಗಿ ಸಂಪೂರ್ಣ ಜರ್ಜರಿತವಾಗಿದೆ. ಪೆಟ್ರೋಲ್, ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಎಲ್ಲ ಸಾರ್ವಜನಿಕ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಲಾಗುತ್ತಿದೆ. ಆರೋಗ್ಯ ವ್ಯವಸ್ಥೆ ನೆಲಕಚ್ಚಿದೆ. ಉದ್ಯಮಗಳು ಒಂದೊಂದಾಗಿ ಮುಚ್ಚುತ್ತಿವೆ. ನಿರುದ್ಯೋಗಗಳು ಹೆಚ್ಚುತ್ತಿವೆ. ಇಂತಹ ಸಂದರ್ಭದಲ್ಲಿ ತನ್ನ ವೈಫಲ್ಯವನ್ನು ಮುಚ್ಚಿ ಹಾಕಲು ಸರಕಾರಕ್ಕೆ ಗೂಂಡಾಗಳು ಬೇಕಾಗಿದ್ದಾರೆ. ಇದೇ ಸಂದರ್ಭದಲ್ಲಿ ಸರಕಾರದ ಜನವಿರೋಧಿ ನೀತಿಗಳನ್ನು ಜನರಿಗೆ ಎತ್ತಿ ತೋರಿಸುವ ಜನಪರ ಚಿಂತಕರು ಬೇಕಾಗಿಲ್ಲ. ಆದುದರಿಂದಲೇ ಇವರು ಜೈಲೊಳಗಿದ್ದಾರೆ. ಗೂಂಡಾಗಳು ಬಿಡುಗಡೆಯಾಗುತ್ತಿದ್ದಾರೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕಾದ ಸರಕಾರವೇ ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸಲು ಆತುರದಲ್ಲಿರುವಾಗ ಜನರನ್ನು ಕಾಪಾಡುವವರು ಯಾರು? ಈ ಸಂದರ್ಭದಲ್ಲಿ ಸರಕಾರದ ವಂಚನೆಯನ್ನು ಜನರಿಗೆ ಅರ್ಥ ಮಾಡಿಕೊಡಲು ಜಾಗೃತ ಜನಸಮೂಹ ಮುಂದಾಗಬೇಕಾಗಿದೆ. ಕೋಮುಗಲಭೆಗಳು ದೇಶದ ಆರ್ಥಿಕತೆಯನ್ನು ಹಿಂದಕ್ಕೆ ಒಯ್ದಿದೆಯೇ ಹೊರತು, ಮುಂದಕ್ಕೊಯ್ದಿಲ್ಲ. ಇದೀಗ ನೋಟು ನಿಷೇಧ, ಕೊರೋನ, ಲಾಕ್‌ಡೌನ್‌ನಿಂದ ಕುಸಿದು ಕೂತಿರುವ ಭಾರತದ ಆರ್ಥಿಕತೆ ಕೋಮು ಉದ್ವಿಗ್ನತೆಗಳಿಂದ ಪಾತಾಳ ತಲುಪಲಿದೆ. ಜಾಗೃತ ಶ್ರೀಸಾಮಾನ್ಯ ಮಾತ್ರ ಈ ದೇಶವನ್ನು ಉಳಿಸಿ ಬೆಳೆಸಬಲ್ಲ. ಕ್ರಿಮಿನಲ್ ಹಿನ್ನೆಲೆಯ ಜನರು ಜನಸಾಮಾನ್ಯರ ಮನಸ್ಸಲ್ಲಿ ವಿಷ ತುಂಬಿ ಕೆಡಿಸಲು ಯತ್ನಿಸುತ್ತಿರುವಾಗ ಅವರ ಕೃತ್ಯಗಳನ್ನು ವಿಫಲಗೊಳಿಸಲು ಜಾಗೃತ ಶ್ರೀಸಾಮಾನ್ಯರು ಒಂದಾಗಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News