ಕಲ್ಲಡ್ಕ ಪ್ರಭಾಕರ ಭಟ್ ಗೆ ಆಹ್ವಾನ; ಮಂಗಳೂರು ವಿವಿ ಉಪಕುಲಪತಿ ವಿರುದ್ಧ ಕ್ರಮಕ್ಕೆ ಎಪಿಸಿಆರ್ ನಿಂದ ಯುಜಿಸಿಗೆ ಪತ್ರ
ಉಡುಪಿ: ಮಂಗಳೂರು ವಿಶ್ವವಿದ್ಯಾನಿಲಯದ ಕಾರ್ಯಕ್ರಮಕ್ಕೆ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅವರನ್ನು ಮುಖ್ಯ ಅತಿಥಿಯಾಗಿ ಕರೆದಿರುವುದನ್ನು ಆಕ್ಷೇಪಿಸಿ ಅಸೋಸಿಯೇಷನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ದೆಹಲಿಯ ಯುನಿವರ್ಸಿಟಿ ಗ್ರಾಂಟ್ ಕಮಿಶನ್ ಮುಖ್ಯಸ್ಥರಿಗೆ ಪತ್ರ ಬರೆದಿದೆ.
ಮಂಗಳೂರು ವಿಶ್ವವಿದ್ಯಾನಿಲಯ ಒಂದು ಪ್ರತಿಷ್ಟಿತ ವಿಶ್ವವಿದ್ಯಾಲಯ. ಇಲ್ಲಿ ಉತ್ತಮ ಗುಣಮಟ್ಟದ ವಿದ್ಯಾರ್ಜನೆಯ ವ್ಯವಸ್ಥೆ ಮಾಡಿಕೊಡಲಾಗುತ್ತಿದೆ. ಲಕ್ಷಗಟ್ಟಲೆ ವಿದ್ಯಾರ್ಥಿಗಳ ಕನಸನ್ನು ನನಸು ಮಾಡಿ ಸಮಾಜದ ಸತ್ಪ್ರಜೆಯನ್ನಾಗಿ ಮಾಡಿದ ಕೀರ್ತಿ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಸಲ್ಲುತ್ತದೆ. ಅದರಿಂದಾಗಿ ಮಂಗಳೂರು ವಿಶ್ವವಿದ್ಯಾನಿಲಯ ಎಂಬುದು ವಿಶ್ವ ಪ್ರಸಿದ್ಧವಾದ ವಿಶ್ವವಿದ್ಯಾನಿಲಯ.
ಮಾ.30 ರಂದು ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತೊಕೊತ್ತರ ವಿದ್ಯಾರ್ಥಿ ಪರಿಷತ್ತಿನ ಉದ್ಘಾಟನಾ ಕಾರ್ಯಕ್ರಮಕ್ಕೆ ನಿರಂತರ ದ್ವೇಷ ಭಾಷಣ ಮಾಡಿ ಸಮಾಜದಲ್ಲಿ ಜಾತಿ ಧರ್ಮದ ಆಧಾರದಲ್ಲಿ ಸಮಾಜದಲ್ಲಿ ಒಡಕು ಉಂಟು ಮಾಡಿ ಹಿಂಸೆಯನ್ನು ಹರಡುತ್ತಿರುವ ಕಲಡ್ಕ ಪ್ರಭಾಕರ್ ಭಟ್ ಅವರನ್ನು ಮುಖ್ಯ ಅತಿಥಿಯಾಗಿ ಕರೆದು ಕಾರ್ಯಕ್ರಮ ನಡೆಸಿರುತ್ತಾರೆ. ಈ ಕಾರ್ಯಕ್ರಮದ ಹೊಣೆಗಾರರಾಗಿರುವ ಎಡಿಪಡಿತ್ತಾಯ ಅವರು ಉಪಕುಲಪತಿಗಳಾಗಿದ್ದು, ಅದರಂತೆ ವಿದ್ಯಾರ್ಥಿಗಳ ಪರಿಷತ್ತಿನ ಉದ್ಘಾಟನಾ ಕಾರ್ಯಕ್ರಮಕ್ಕೆ ಇಂತಹ ಓರ್ವ ದ್ವೇಷ ಭಾಷಣ ಮಾಡುವ ವ್ಯಕ್ತಿಯನ್ನು ಕರೆದು ವಿಶ್ವವಿದ್ಯಾಲಯದ ಘನತೆಗೆ ದಕ್ಕೆ ತಂದಿರುತ್ತಾರೆ.
ಅಷ್ಟೇ ಅಲ್ಲದೇ ಪ್ರಭಾಕರ್ ಭಟ್ ಮಾಧ್ಯಮದ ಮುಂದೆ ದ್ವೇಷ ಭಾಷಣವನ್ನು ವಿಶ್ವವಿದ್ಯಾನಿಲಯದ ಆವರಣದಲ್ಲಿ ನಡೆಸುವಾಗ ಉಪಕುಲಪತಿಗಳು ಒಟ್ಟಗೆ ನಿಂತು ಸಾಥ್ ನೀಡಿದ್ದಾರೆ. ಆದ್ದರಿಂದ ಇಂತಹ ದ್ವೇಷ ತುಂಬಿದ ವ್ಯಕ್ತಿಗೆ ಆಹ್ವಾನಿಸಿ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಮಧ್ಯೆ ಒಡಕು ಉಂಟು ಮಾಡುವ ಪ್ರಯತ್ನ ಮಾಡಿರುತ್ತಾರೆ. ಆದ್ದರಿಂದ ಅಶಾಂತಿಗೆ ಕಾರಣವಾದ ವ್ಯಕ್ತಿಗೆ ವಿಶ್ವವಿದ್ಯಾನಿಲಯದಲ್ಲಿ ಕರೆದು ದ್ವೇಷ ಭಾಷಣ ಮಾಡಲು ಅವಕಾಶಕೊಟ್ಟಿರುವುದು ಅಕ್ಷಮ್ಯ ಅಪರಾಧವಗಿದೆ. ಆದ್ದರಿಂದ ಇದಕ್ಕೆ ಕಾರಣೀಭೂತರಾದ ಉಪಕುಲಪತಿಗಳಾದ ಎಡಿಪಿಡಿತ್ತಾಯ ಅವರನ್ನು ತಕ್ಷಣ ವಜಾಗೊಳಿಸಬೇಕು. ಹಾಗೂ ಮುಂದಿನ ದಿನಗಳಲ್ಲಿ ಇಂತಹ ದ್ವೇಷ ಭಾಷಿಗರು ಕಾರ್ಯಕ್ರಮಕ್ಕೆ ಬರದಂತೆ ಎಚ್ಚರ ವಹಿಸಬೇಕು ಎಂದು ಎಪಿಸಿಆರ್ ಉಡುಪಿ ಜಿಲ್ಲಾಧ್ಯಕ್ಷ ಹುಸೇನ್ ಕೋಡಿಬೇಂಗ್ರೆ ಪತ್ರದಲ್ಲಿ ಒತ್ತಾಯಿಸಿದ್ದಾರೆ.