×
Ad

ಪದ್ಮಶ್ರೀ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕರಿಗೆ ದ.ಕ.ಜಿಲ್ಲಾಡಳಿತದಿಂದ ಸನ್ಮಾನ

Update: 2022-03-31 17:31 IST

ಮಂಗಳೂರು : ದೇಶದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಲಭಿಸಿರುವುದು ಖುಷಿ ತಂದಿದೆ. ನಾನು ಪ್ರಶಸ್ತಿಗಾಗಿ ಕೆಲಸ ಮಾಡಲಿಲ್ಲ. ಈ ಪ್ರಶಸ್ತಿ ನಮ್ಮ ರಾಜ್ಯಕ್ಕೆ ಸಂದ ಗೌರವ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ ಅಭಿಪ್ರಾಯಿಸಿದ್ದಾರೆ.

ಅವರು ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ  ದ.ಕ.ಜಿಲ್ಲಾಡಳಿತದಿಂದ ಗೌರವ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಜಿಲ್ಲಾಧಿಕಾರಿ ಡಾ.ರಾಜೇಂದ್ರ ಅವರು ಪೇಟೆ ತೊಡಿಸಿ, ಹಾರ ಹಾಕಿ, ಸ್ಮರಣಿಕೆ ನೀಡಿ ಗೌರವಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮಹಾಲಿಂಗ ನಾಯ್ಕ, ಮುಟ್ಟಾಳೆ ಧರಿಸಿ ಕತ್ತಿ ಹಿಡಿದುಕೊಂಡು ತೋಟಕ್ಕೆ ಕೆಲಸಕ್ಕೆ ಹೋಗುವುದು ಕೃಷಿಕರ ಹೆಗ್ಗುರುತು. ಹಾಗಾಗಿ ನಾನು ಮುಟ್ಟಾಳೆ ಧರಿಸಿಕೊಂಡು ದೆಹಲಿ ರಾಷ್ಟ್ರಪತಿ ಭವನದಲ್ಲಿ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದೆ. ಈ ವೇಳೆ ರಾಷ್ಟ್ರಪತಿ ಹಾಗೂ ಪ್ರಧಾನಿಗೆ ನಮಸ್ಕರಿಸಿದೆ ಎಂದರು.

ಪ್ರಶಸ್ತಿ ಪ್ರದಾನಕ್ಕೆ ಮುನ್ನ ನಮಗೆ ರಿಹರ್ಸಲ್ ಇತ್ತು. ಆ ದಿನ ಮುಟ್ಟಾಳೆ ರೂಮಿನಲ್ಲೇ ಬಾಕಿಯಾಗಿತ್ತು. ಮರುದಿನ ಮುಟ್ಟಾಳೆ ತೆಗೆದುಕೊಂಡು ಬಂದಾಗ ರಾಷ್ಟ್ರಪತಿ ಭವನದ ಭದ್ರತಾ ಸಿಬ್ಬಂದಿ ತಡೆದರು. ಮನವರಿಕೆ ಮಾಡಿದ ಬಳಿಕ ಮುಟ್ಟಾಳೆ ಧರಿಸಿಕೊಂಡು ಸಮಾರಂಭಕ್ಕೆ ಹಾಜರಾಗಲು ಅನುಮತಿಸಿದರು ಎಂದರು.

ಮನೆಯಿಂದ ಮಂಗಳೂರು ವಿಮಾನಕ್ಕೆ, ಅಲ್ಲಿಂದ ದೆಹಲಿಗೆ ಹಾಗೂ ದೆಹಲಿಯಿಂದ ವಾಪಸ್ ಮಂಗಳೂರಿಗೆ ಬರುವ ಎಲ್ಲ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿತ್ತು. ಇದೇ ಮೊದಲ ಬಾರಿಗೆ ದೆಹಲಿಗೆ ಹೋಗಿದ್ದು, ಬಹಳ ಸಂತಸವಾಗಿದೆ ಎಂದರು.

ಪದ್ಮಶ್ರೀ ಪುರಸ್ಕೃತ ಮಹಾಲಿಂಗ ನಾಯ್ಕರವನ್ನು ಜಿಲ್ಲಾಡಳಿತದಿಂದ ಗೌರವಿಸಲಾಗಿದೆ. ಪ್ರಸಕ್ತ ಅಧಿವೇಶನ ನಡೆಯುತ್ತಿರುವುದರಿಂದ ಜನಪ್ರತಿನಿಧಿಗಳು ಸೇರಿಕೊಂಡ ದೊಡ್ಡ ರೀತಿಯಲ್ಲಿ ಇನ್ನೊಂದು ಸನ್ಮಾನ ಸಮಾರಂಭ ನಡೆಯಲಿದೆ. ಈಗಾಗಲೇ ಹರೇಕಳ ಹಾಜಬ್ಬರಿಗೆ ಪದ್ಮಶ್ರೀ ಗೌರವ ಲಭಿಸಿದ್ದು, ಈಗ ಮಹಾಲಿಂಗ ನಾಯ್ಕರಿಗೆ ಲಭಿಸಿರುವುದು ಅತ್ಯಂತ ಸಂತಸ ತಂದಿದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕೃಷ್ಣಮೂರ್ತಿ ಹಾಗು ಇತರರು ಈ ಸಂದರ್ಭ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News