×
Ad

ಎ.5ರಿಂದ ಶಾಂತಿಮೊಗರು ಸುಬ್ರಹ್ಮಣ್ಯೇಶ್ವರ ದೇವಳದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ

Update: 2022-03-31 20:27 IST

ಪುತ್ತೂರು : ಕುದ್ಮಾರು ಗ್ರಾಮದ ಶಾಂತಿಮೊಗರು ಸುಬ್ರಹ್ಮಣ್ಯೇಶ್ವರ ದೇವಳದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ಕ್ಷೇತ್ರದ ತಂತ್ರಿ ಗಳಾದ ಬ್ರಹ್ಮಶ್ರೀ ನಾಗೇಶ ತಂತ್ರಿ ಅವರ ನೇತೃತ್ವದಲ್ಲಿ ಎ.5ರಿಂದ 10ರ ತನಕ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ಅವರು ತಿಳಿಸಿದರು.

ಪುತ್ತೂರಿನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎ.5ರಂದು ಸಂಜೆ ಹೊರೆಕಾಣಿಕೆ ಸಮರ್ಪಣೆ, ಉಗ್ರಾಣ ಮುಹೂರ್ತ ಕಾರ್ಯಕ್ರಮಗಳೊಂದಿಗೆ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ಆರಂಭವಾಗುವುದು. ಸಂಜೆ ಭಜನಾ ಕಾರ್ಯಕ್ರಮ ನಡೆಯುವುದು. ಸಂಜೆ 6 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಶಾಸಕ ಸಂಜೀವ ಮಠಂದೂರು ಮತ್ತಿತರರು ಭಾಗವಹಿಸುವರು. ರಾತ್ರಿ `ಗಿರಿಗಿಟ್ ಗಿರಿಧರೆ' ತುಳು ನಾಟಕ ಪ್ರದರ್ಶನಗೊಳ್ಳುವುದು ಎಂದು ಅವರು ತಿಳಿಸಿದರು.

ಎ.6ರಂದು ಬೆಳಗ್ಗೆ ಉಷಃ ಪೂಜೆ, ಮಹಾಗಣಪತಿ ಹೋಮದೊಂದಿಗೆ ವೈದಿಕ ಕಾರ್ಯಕ್ರಮಗಳು ಆರಂಭಗೊಳ್ಳುವುದು. ಸಂಜೆ ನಡೆಯುವ ಧಾರ್ಮಿಕ ಸಭೆಯಲ್ಲಿ ರಾಜ್ಯ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಮತ್ತಿತರರು ಭಾಗವಹಿಸುವರು. ರಾತ್ರಿ `ಪಂಡುನ ಅಲಕ್ಕಪೋಂಡು' ತುಳು ನಾಟಕ ಪ್ರದರ್ಶನಗೊಳ್ಳಲಿದೆ. ಎ.7ರಂದು ಬೆಳಗ್ಗಿನಿಂದ ವಿವಿಧ ವೈದಿಕ ಕಾರ್ಯಕ್ರಮಗಳು, ಯಕ್ಷಗಾನ ತಾಳಮದ್ದಳೆ, ಸಂಜೆ ಭಜನಾ ಕಾರ್ಯಕ್ರಮ ನಡೆಯುವುದು, ಸಂಜೆ ನಡೆಯುವ ಧಾರ್ಮಿಕ ಸಭೆಯಲ್ಲಿ ಒಡಿಯೂರು ಕ್ಷೇತ್ರದ ಗುರುದೇವಾನಂದ ಸ್ವಾಮೀಜಿ, ಸಂಸದ ನಳಿನ್‍ಕುಮಾರ್ ಕಟೀಲು,ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಮತ್ತಿತರರು ಭಾಗವಹಿಸುವರು. ರಾತ್ರಿ ಕುದ್ರೋಳಿ ಗಣೇಶ್ ಬಳಗದಿಂದ ಜಾದು ಪ್ರದರ್ಶನ ನಡೆಯುವುದು ಎಂದರು. 

ಎ.8ರಂದು ಬೆಳಿಗ್ಗೆ ವಿವಿಧ ವೈದಿಕ ಕಾರ್ಯಕ್ರಮಗಳು,ಸಂಜೆ ಭಜನಾ ಕಾರ್ಯಕ್ರಮ,ಸಂಜೆ ನಡೆಯುವ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಪ್ರವಚನಕಾರ ವಿದ್ವಾನ್ ವೇದಮೂರ್ತಿ ಕೇಶವ ಭಟ್ ಕೇಕಣಾಜೆ, ಸಚಿವ ಎಸ್.ಅಂಗಾರ, ಮಾಜಿ ಸಚಿವ ಬಿ.ರಮಾನಾಥ ರೈ, ಕರ್ನಾಟಕ ಲೋಕಸೇವಾ ಅಯೋಗದ ಮಾಜಿ ಅಧ್ಯಕ್ಷ ಟಿ.ಶ್ಯಾಮ್ ಭಟ್ ಮತ್ತಿತರರು ಅತಿಥಿಗಳಾಗಿ ಭಾಗವಹಿಸುವರು. ರಾತ್ರಿ `ಅಧ್ಯಕ್ಷೆರ್' ಸಾಂಸಾರಿಕ ನಾಟಕ ಪ್ರದರ್ಶನಗೊಳ್ಳುವುದು ಎಂದು ಅವರು ತಿಳಿಸಿದರು.

ಎ.9ರಂದು ಬೆಳಿಗ್ಗಿನಿಂದ ವೈದಿಕ ಕಾರ್ಯಕ್ರಮಗಳು, ಸಂಜೆ ಭಜನಾ ಕಾರ್ಯಕ್ರಮ ನಡೆಯುವುದು, ಸಂಜೆ ನಡೆಯುವ ಧಾರ್ಮಿಕ ಸಭೆಯಲ್ಲಿ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಧರ್ಮಪಾಲನಾಥ ಸ್ವಾಮೀಜಿ, ರಾಜ್ಯ ಸಚಿವ ಸುನಿಲ್‍ಕುಮಾರ್ ವಿ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ವಿನಯಕುಮಾರ್ ಸೊರಕೆ ಮತ್ತಿತರರು ಅತಿಥಿಗಳಾಗಿ ಭಾಗವಹಿಸುವರು. ರಾತ್ರಿ ರಸಮಂಜರಿ ಕಾರ್ಯಕ್ರಮ ನಡೆಯುವುದು ಎಂದು ಅವರು ಮಾಹಿತಿ ನೀಡಿದರು.

ಎ.10ರಂದು ಬೆಳಿಗ್ಗೆ 108 ತೆಂಗಿನಕಾಯಿ ಅಷ್ಟದ್ರವ್ಯ ಮಹಾಗಣಪತಿ ಹೋಮ, ಬೆಳಿಗ್ಗೆ ಗಂಟೆ 9.18ರಿಂದ 10.27 ರವರೆಗಿನ ವೃಷಭ ಲಗ್ನ ಶುಭಮುಹೂರ್ತದಲ್ಲಿ ಸುಬ್ರಹ್ಮಣ್ಯ ದೇವರಿಗೆ ಅಷ್ಟಬಂಧಕ್ರಿಯೆ,ಬ್ರಹ್ಮಕಲಶಾಭಿಷೇಕ , ರಾತ್ರಿ ದೇವರ ಬಲಿ ಹೊರಟು ಶ್ರೀಭೂತ ಬಲಿ, ದರ್ಶನ ಬಲಿ,ಬಟ್ಟಲುಕಾಣಿಕೆ, ಪ್ರಸಾದ ವಿತರಣೆ ಕಾರ್ಯಕ್ರಮಗಳು ನಡೆಯುವುದು ಎಂದು ಕೆ.ಸೀತಾರಾಮ ರೈ ಅವರು ತಿಳಿಸಿದರು.

ದೇವಳದ ಆಡಳಿತ ಸಮಿತಿಯ ಅಧ್ಯಕ್ಷ ಸತೀಶ್‍ಕುಮಾರ್ ಕೆಡೆಂಜಿ,ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯದರ್ಶಿ ವೆಂಕಟೇಶ್ ಭಟ್ ಕೊಯಕ್ಕುಡೆ,ಉಪಾಧ್ಯಕ್ಷ ನಾಗೇಶ್ ಕೆ.ಕೆಡೆಂಜಿ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News