ಸುರತ್ಕಲ್ ಮಾರಿ ಪೂಜೆ : ಧರ್ಮ ನೋಡದೇ ವ್ಯಾಪಾರ ಮಾಡಿದ ಗ್ರಾಹಕರು
ಮಂಗಳೂರು : ಮುಸ್ಲಿಮರ ಅಂಗಡಿಗಳಲ್ಲಿ ವ್ಯಾಪಾರ ವಹಿವಾಟು ನಿಲ್ಲಿಸುವ ಹಾಗೂ ಹಲಾಲ್ ಮಾಡುವ ಕೋಳಿ, ಕುರಿ ಮಾಂಸಗಳನ್ನು ನಿರ್ಬಂಧಿಸುವಂತೆ ಸಂಘಪರಿವಾರ ಅಭಿಯಾನ ನಡೆಸುತ್ತಿರುವ ಬೆನ್ನಲ್ಲೇ ಮಂಗಳೂರು ಹೊರ ವಲಯದ ಸುರತ್ಕಲ್ ನಲ್ಲಿ ಸಂಘಪರಿವಾರದ ಲೆಕ್ಕಾಚಾರವನ್ನು ಗ್ರಾಹಕರು ಮತ್ತು ವ್ಯಾಪಾರಿಗಳು ತಲೆಕೆಳಗಾಗಿಸಿರುವ ಘಟನೆ ವರದಿಯಾಗಿದೆ.
ಮಾರ್ಚ್ 29ರಂದು ಸುರತ್ಕಲ್ ಮಾರಿಗುಡಿಯ ಮಾರಿಪೂಜೆ ನಡೆದಿತ್ತು. ಬಳಿಕ ಮಾರಿ ಪೂಜೆಯ ಹಿನ್ನೆಲೆಯಲ್ಲಿ ಮನೆಗಳಲ್ಲಿ ಔತಣಕೂಟ ನಡೆದಿವೆ. ಜಾತ್ರೆ ಹಾಗೂ ಔತಣ ಕೂಟಕ್ಕೆ ಸುರತ್ಕಲ್ ಸುತ್ತಮುತ್ತಲ ನಾಗರಿಕರು ಧರ್ಮ ನೋಡದೆ ಎಲ್ಲರೊಂದಿಗೂ ಕುರಿ, ಕೋಳಿ ಮಾಂಸದ ವ್ಯಾಪಾರ ಮಾಡಿ ಸೌಹಾರ್ದತೆ ಮೆರೆದಿದ್ದಾರೆ.
ಮಾರಿಗುಡಿ ಜಾತ್ರೆ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಮುಸ್ಲಿಮರಿಗೆ ಅಂಗಡಿಗಳನ್ನು ಹಾಕಲು ನಿರ್ಬಂಧ ವಿಧಿಸಲಾಗಿತ್ತು. ಆದರೆ, ಗ್ರಾಮಸ್ಥರು ಕುರಿ, ಕೋಳಿ ಗಳನ್ನು ಸುರತ್ಕಲ್ ಮಾರುಕಟ್ಟೆಯ ಹಿಂದೂ- ಮುಸ್ಲಿಮ್ ಎಂಬ ಭೇದ-ಭಾವ ಮಾಡದೆ ಎಲ್ಲರೊಂದಿಗೂ ವ್ಯಾಪಾರ ವಹಿವಾಟು ನಡೆಸುವ ಮೂಲಕ ಸಂಘಪರಿವಾರದ ಷಡ್ಯಂತ್ರವನ್ನು ತಲೆಕೆಳಗಾಗಿಸಿದ್ದಾರೆ ಎಂದು ತಿಳಿದು ಬಂದಿದೆ.
ಕೆಲ ದಿನಗಳ ಹಿಂದೆ ಉಡುಪಿ ಜಿಲ್ಲೆಯ ಕಾಪು ಮಾರಿಗುಡಿಯ ಜಾತ್ರೆಯ ಸಂದರ್ಭ ಸಂಘಪರಿವಾರ ಆರಂಭಿಸಿದ "ಮುಸ್ಲಿಮ್ ವ್ಯಾಪಾರಿಗಳ ವ್ಯಾಪಾರ ಬಹಿಷ್ಕಾರ"ದ ಕೃತ್ಯ ರಾಜ್ಯದ ಹಲವೆಡೆ ವ್ಯಾಪಿಸಿ ಅಭಿಯಾನ ಬಹಿಷ್ಕಾರ ದಂತಹ ಕೆಲಸಗಳು ನಡೆಯುತ್ತಿರುವ ಬೆನ್ನಲ್ಲೇ ಸುರತ್ಕಲ್ ಮಾರಿ ಪೂಜೆಯ ಸಂದರ್ಭ ಗ್ರಾಹಕರು ಮತ್ತು ವ್ಯಾಪಾರಿಗಳ ಮಾಡಿದ ಸೌಹಾರ್ದಯುತ ವ್ಯಾಪಾರ-ವಹಿವಾಟು ರಾಜ್ಯಾದ್ಯಂತ ಪ್ರಶಂಸೆಗೆ ಪಾತ್ರವಾಗಿದೆ.
ʼವ್ಯಾಪಾರಕ್ಕೆ ಜಾತಿ-ಬೇಧ ಇಲ್ಲʼ
ವ್ಯಾಪಾರಿಗಳು ನಾವೆಲ್ಲರೂ ಒಂದೇ. ವ್ಯಾಪಾರಕ್ಕೆ ಜಾತಿ- ಧರ್ಮವಿಲ್ಲ ಹಾಗೆಯೇ ನಮ್ಮಲ್ಲೂ ಯಾವುದೇ ಜಾತಿ ಧರ್ಮ ಇಲ್ಲ. ನಾವೆಲ್ಲರೂ ವ್ಯಾಪಾರ ಮಾಡುವ ಗುರಿ ಹೊಂದಿದ್ದೇವೆ ಅಷ್ಟೇ. ಜಾತ್ರೆಯ ವ್ಯಾಪಾರ ಎಂದಿನಂತೆ ಈ ವರ್ಷವೂ ಎಲ್ಲಾ ಅಂಗಡಿಗಳಿಗೂ ಉತ್ತಮ ವ್ಯಾಪಾರ ಆಗಿದೆ. ಗ್ರಾಹಕರು ಜಾತಿ-ಧರ್ಮವನ್ನು ಗಮನಿಸಿ ವ್ಯಾಪಾರ ಮಾಡಿಲ್ಲ ಎಂದು ಕಳೆದ 35 ವರ್ಷಗಳಿಂದ ಸುರತ್ಕಲ್ ಕೋಳಿ ಮಾರುಕಟ್ಟೆಯಲ್ಲಿ ಕೋಳಿ ವ್ಯಾಪಾರ ಮಾಡುತ್ತಿರುವ ವ್ಯಾಪಾರಿಯೊಬ್ಬರು ತಿಳಿಸಿದ್ದಾರೆ.
ʼʼನಮ್ಮ ಗ್ರಾಹಕರು ಪ್ರತಿವರ್ಷದಂತೆ ನಮ್ಮಲ್ಲಿಯೇ ಬಂದು ಜೀವಂತ ಕೋಳಿ ಮತ್ತು ಮಾಂಸ ಮಾಡಿದ ಕೋಳಿಯನ್ನು ಪಡೆದಿದ್ದಾರೆ. ಯಾರು ಜಾತಿ-ಧರ್ಮವನ್ನು ನೋಡಿಕೊಂಡು ವ್ಯಾಪಾರ ಮಾಡಿಲ್ಲʼʼ.
-ಸಫ್ವಾನ್, ಕೋಳಿ ವ್ಯಾಪಾರಿ,
ಮುಡಾ ಮಾರುಕಟ್ಟೆ ಸುರತ್ಕಲ್