×
Ad

ಶೀಘ್ರ ರಶ್ಯ-ಉಕ್ರೇನ್ ಮಧ್ಯೆ ಉನ್ನತ ಮಟ್ಟದ ಸಭೆ: ಟರ್ಕಿ

Update: 2022-03-31 22:53 IST

 ಇಸ್ತಾನ್ಬುಲ್, ಮಾ.31: ಮುಂದಿನ 2 ವಾರದೊಳಗೆ ರಶ್ಯ ಮತ್ತು ಉಕ್ರೇನ್ ಮಧ್ಯೆ ಉನ್ನತ ಮಟ್ಟದ ಸಭೆ ಟರ್ಕಿಯಲ್ಲಿ ನಡೆಯಲಿದೆ ಎಂದು ಟರ್ಕಿಯ ವಿದೇಶ ಸಚಿವರು ಗುರುವಾರ ಹೇಳಿದ್ದಾರೆ.

ಇದೊಂದು ಉನ್ನತ ಮಟ್ಟದ ಸಭೆಯಾಗಲಿದೆ. ಕನಿಷ್ಟ ಎರಡೂ ದೇಶಗಳ ವಿದೇಶ ಸಚಿವರು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ . ಕದನ ವಿರಾಮಕ್ಕೆ ಸಂಬಂಧಿಸಿದ ಮಾತುಕತೆ ಈಗ ವಿದೇಶ ವ್ಯವಹಾರ ಸಚಿವರ ಮಟ್ಟಕ್ಕೆ ಬಂದು ತಲುಪಿದೆ ಎಂಬುದು ಗಮನಾರ್ಹ ವಿಷಯವಾಗಿದೆ ಎಂದು ಟರ್ಕಿಯ ವಿದೇಶ ಸಚಿವ ಮೆವ್ಲತ್ ಕವುಸೊಗ್ಲು ಹೇಳಿದ್ದಾರೆ. ಮಂಗಳವಾರ ರಶ್ಯ-ಉಕ್ರೇನ್ ನಿಯೋಗದ ಮಧ್ಯೆ ಟರ್ಕಿಯ ಇಸ್ತಾನ್ಬುಲ್ನಲ್ಲಿ ನಡೆದಿದ್ದ ಸಭೆಯಲ್ಲಿ ಯುದ್ಧ ಸಮಾಪ್ತಿಗೊಳ್ಳುವ ನಿಟ್ಟಿನಲ್ಲಿ ಸ್ವಲ್ಪ ಮಟ್ಟಿನ ಪ್ರಗತಿಯಾಗಿದೆ ಎಂದು ಮೂಲಗಳು ಹೇಳಿದ್ದವು. ಆದರೆ ಯುದ್ಧರಂಗದಲ್ಲಿ ಸಂಘರ್ಷದ ಪ್ರಮಾಣ ಕಡಿಮೆಯಾಗುವ ಸೂಚನೆ ಕಂಡುಬಂದಿಲ್ಲ ಎಂದು ಮಾಧ್ಯಮಗಳು ವರದಿ ಮಾಡಿವೆ.

 ಎರಡೂ ದೇಶಗಳ ಮಿತ್ರವಾಗಿರುವ ಟರ್ಕಿ ನೇಟೊ ಸದಸ್ಯತ್ವ ಹೊಂದಿದೆ. ಉಭಯ ದೇಶಗಳ ಮಧ್ಯೆ ಸಂಧಾನ ಮಾತುಕತೆಯ ಪ್ರಕ್ರಿಯೆಯ ಮಧ್ಯಸ್ಥಿಕೆ ವಹಿಸಲು ಟರ್ಕಿ ಸ್ವಯಂ ಆಸಕ್ತಿ ತೋರಿತ್ತು. ಈ ಮಾತುಕತೆಯ ಫಲಿತಾಂಶದ ಬಗ್ಗೆ ಹಲವರು ಸಂದೇಹ ವ್ಯಕ್ತಪಡಿಸಿದ್ದರು. ಆದರೆ ಸಭೆಯಲ್ಲಿ ಗಮನಾರ್ಹ ಪ್ರಗತಿ ಸಾಧ್ಯವಾಗಿದೆ. ಎಲ್ಲಾ ಸಮಸ್ಯೆ ಕೊನೆಯಾಯಿತೇ ಎಂದು ಕೆಲವರು ಪ್ರಶ್ನಿಸಬಹುದು. ಇಲ್ಲ, ಆದರೆ ಉದ್ವಿಗ್ನತೆ ಕಡಿಮೆಗೊಳಿಸುವ ನಿಟ್ಟಿನಲ್ಲಿ ಕೆಲವೊಂದು ಕ್ರಮ ಕೈಗೊಳ್ಳಲಾಗಿದೆ ಎಂದು ಕವುಸೊಗ್ಲು ಹೇಳಿದ್ದಾರೆ. ಸಭೆಯ ಯಶಸ್ಸಿನಲ್ಲಿ ಚೆಲ್ಸೀ ಫುಟ್ಬಾಲ್ ಕ್ಲಬ್ ನ ಮಾಲಕ ರೊಮನ್ ಅಬ್ರಮೊವಿಚ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದವರು ಶ್ಲಾಘಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News