ಆಸ್ಟ್ರೇಲಿಯಾ ತಂಡ ನೀಡಿದ್ದ‌ 349 ರನ್‌ ಗಳ ಬೃಹತ್‌ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಿದ ಪಾಕ್‌

Update: 2022-04-01 07:24 GMT

ಲಾಹೋರ್‌: ಪಾಕಿಸ್ತಾನ ಹಾಗೂ  ಆಸ್ಟ್ರೇಲಿಯಾದ ನಡುವೆ ಗುರುವಾರ ನಡೆದ ಎರಡನೇ ಏಕದಿನ ಪಂದ್ಯದ ವೇಳೆ ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ಪ್ರೇಕ್ಷಕರು ಎರಡೂ ಕಡೆಯ  ಅದ್ಭುತ ಬ್ಯಾಟಿಂಗ್ ಪ್ರದರ್ಶನಕ್ಕೆ ಸಾಕ್ಷಿಯಾದರು.

ರನ್ ಹೊಳೆಗೆ ಸಾಕ್ಷಿಯಾದ ಪಂದ್ಯದಲ್ಲಿ ಆಸ್ಟ್ರೇಲಿಯ ವಿರುದ್ಧ ಪಾಕಿಸ್ತಾನವು ಆರು ಎಸೆತ ಬಾಕಿ ಇರುವಾಗಲೇ 6 ವಿಕೆಟ್‌ಗಳಿಂದ ಗೆಲುವು ದಾಖಲಿಸಿದೆ.  ಬಾಬರ್ ಆಝಮ್ ನೇತೃತ್ವದ ಪಾಕ್ ತಂಡವು ಆಸ್ಟ್ರೇಲಿಯ ನೀಡಿದ್ದ 349 ರನ್‌ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿ ಬೃಹತ್ ದಾಖಲೆಯನ್ನು ಸಾಧಿಸಿತು. ಪಾಕ್ ತಂಡವು  ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ರನ್ ಚೇಸ್  ಮಾಡಿ ಹೊಸ ದಾಖಲೆ ನಿರ್ಮಿಸಿತು. ಪಾಕ್  2014 ರಲ್ಲಿ ಮಿರ್‌ಪುರದಲ್ಲಿ ಬಾಂಗ್ಲಾದೇಶದ ವಿರುದ್ಧ 329 ರನ್‌ಗಳನ್ನು ಯಶಸ್ವಿಯಾಗಿ ಚೇಸಿಂಗ್ ಮಾಡಿತ್ತು.

ಸರಣಿಯಲ್ಲಿ 0-1 ಹಿನ್ನಡೆಯೊಂದಿಗೆ ಎರಡನೇ ಏಕದಿನ ಪಂದ್ಯವನ್ನಾಡಿದ ಪಾಕಿಸ್ತಾನ ತಂಡವು ಕೆಲವು ಅಮೋಘ  ವೈಯಕ್ತಿಕ ಪ್ರದರ್ಶನಗಳ ಮೂಲಕ ಮೂರು ಪಂದ್ಯಗಳ ಸರಣಿಯನ್ನು 1-1 ರಿಂದ ಸಮಬಲಗೊಳಿಸಿತು.

ಬೆನ್ ಮೆಕ್‌ಡರ್ಮಾಟ್ ಅವರ ಸೊಗಸಾದ ಶತಕ ಹಾಗೂ  ಟ್ರಾವಿಸ್ ಹೆಡ್ (89) ಹಾಗೂ  ಮಾರ್ನಸ್ ಲಾಬುಶೇನ್ (59) ಅವರ ತಲಾ ಅರ್ಧಶತಕಗಳ ನೆರವಿನಿಂದ ಆಸ್ಟ್ರೇಲಿಯ  8 ವಿಕೆಟ್ ನಷ್ಟಕ್ಕೆ 348 ದಾಖಲಿಸಿತು.

ಗೆಲ್ಲಲು ಕಠಿಣ ಗುರಿ  ಪಡೆದ  ಪಾಕಿಸ್ತಾನವು ಇಮಾಮ್-ಉಲ್-ಹಕ್ (106 ರನ್), ಬಾಬರ್ ಆಝಮ್ (114 ರನ್) ಮತ್ತು ಫಾಖರ್ ಝಮಾನ್ (67 ರನ್ ) ಅವರ ತ್ವರಿತ ಅರ್ಧಶತಕದ ನೆರವಿನಿಂದ 49 ಓವರ್ ಗಳಲ್ಲಿ4 ವಿಕೆಟ್ ನಷ್ಟಕ್ಕೆ  349 ರನ್ ಗಳಿಸಿತು.

ಅಂತಿಮ ಏಕದಿನ ಎಪ್ರಿಲ್ 2 ರಂದು ಲಾಹೋರ್ ನಲ್ಲಿ  ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News