ರಿಸರ್ವ್‌ ಬ್ಯಾಂಕ್‌ ಸ್ಥಾಪನೆಯಲ್ಲಿ ಡಾ. ಬಿ.ಆರ್.‌ ಅಂಬೇಡ್ಕರ್‌ ಪಾತ್ರ: ಇಲ್ಲಿದೆ ಸಂಪೂರ್ಣ ಮಾಹಿತಿ

Update: 2022-04-01 11:32 GMT

ಸ್ವತಂತ್ರೋತ್ತರ ಭಾರತದ ನವನಿರ್ಮಾಣಕ್ಕೆ ಅಂಬೇಡ್ಕರ್‌ ಕೊಡುಗೆ ಸಾಮಾನ್ಯದಲ್ಲ. ʼಸಂವಿಧಾನ ಶಿಲ್ಪಿ ಅಂಬೇಡ್ಕರ್‌ʼ ಎಂಬ ಒಂದು ವಾಕ್ಯದ ವಿವರಣೆಗಿಂತ ಹೆಚ್ಚಾಗಿ ಅಂಬೇಡ್ಕರ್‌ ಬಗ್ಗೆ ಬಹುತೇಕರಿಗೆ ಹೆಚ್ಚಿನದ್ದೇನು ಗೊತ್ತಿರಲಿಕ್ಕಿಲ್ಲ. ಬ್ರಿಟೀಷರ ಕಾಲದಲ್ಲಿ ಆರಂಭಗೊಂಡ ಭಾರತೀಯ ರಿಸರ್ವ್‌ ಬ್ಯಾಂಕ್‌ ಅಥವಾ ಆರ್‌ಬಿಐ ಜೊತೆಗೆ ಡಾ. ಬಿ.ಆರ್‌ ಅಂಬೇಡ್ಕರ್‌ ಗೆ ಇರುವ ಸಂಬಂಧ ಹೆಚ್ಚಿನವರಿಗೆ ತಿಳಿದೇ ಇಲ್ಲ. ಇದು ಆಶ್ಚರ್ಯವೆನಿಸಿದರೂ ಹೌದು. 

ಎಪ್ರಿಲ್‌ 1, 1935 ರಲ್ಲಿ ಆರಂಭಗೊಂಡ ಆರ್‌ಬಿಐ ಅಂಬೇಡ್ಕರ್‌ ಅವರ ಆರ್ಥಿಕ ಪರಿಕಲ್ಪನೆಯಿಂದ ರೂಪುಗೊಂಡಿದೆ. ಅಂದರೆ ಭಾರತಕ್ಕೆ ಸ್ವಾತಂತ್ರ್ಯ ಬರುವ 12 ವರ್ಷಗಳ ಹಿಂದೆಯೇ ಅಂಬೇಡ್ಕರ್‌ ಅವರ ದೃಷ್ಟಿಕೋನವನ್ನು ಆಧರಿಸಿ ಆರ್‌ಬಿಐ ಯನ್ನು ʼಬ್ರಿಟೀಷ್‌ ರಾಜ್‌ʼ ಸ್ಥಾಪಿಸಿತ್ತು. 

ವಿದೇಶದಲ್ಲಿ ಅರ್ಥಶಾಸ್ತ್ರ ಡಾಕ್ಟರೇಟ್ ಪದವಿಯನ್ನು ಪಡೆದ ಮೊದಲ ಭಾರತೀಯರಾದ ಅಂಬೇಡ್ಕರ್‌ ಆಧುನಿಕ ಜಗತ್ತಿನ ಮಹತ್ವದ ಅರ್ಥಶಾಸ್ತ್ರಜ್ಞರಲ್ಲೊಬ್ಬರು. 1923ರಲ್ಲಿ ‘ದಿ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ʼ ನಲ್ಲಿ “ದಿ ಪ್ರಾಬ್ಲಂ ಆಫ್ ರುಪೀ: ಇಟ್ಸ್ ಒರಿಜನ್ ಆಂಡ್ ಸೆಲ್ಯೂಷನ್” (The Problem of Rupee: Its Origin and Solution) ಎಂಬ ಪ್ರೌಢ ಪ್ರಬಂಧವನ್ನು ಅಂಬೇಡ್ಕರ್‌ ಮಂಡಿಸುತ್ತಾರೆ. ಜಗತ್ತಿನಲ್ಲೇ ‘ರೂಪಾಯಿ ಸಮಸ್ಯೆ ಮತ್ತು ಪರಿಹಾರ’ಗಳ ಬಗ್ಗೆ ಮಾತನಾಡಿದ ಮೊಟ್ಟ ಮೊದಲ ವ್ಯಕ್ತಿ ಅಂಬೇಡ್ಕರ್ ಎಂದು ಹೇಳಲಾಗಿದೆ. ಹೀಗಾಗಿಯೇ ಭಾರತದ ಹಣ ವ್ಯವಸ್ಥೆಯ ಪರಿಶೀಲನೆಗಾಗಿ ಮತ್ತು ಹಣ ಚಲಾವಣೆಯ ಸುಧಾರಣೋಪಾಯಗಳನ್ನು ಸೂಚಿಸಲು ಭಾರತಕ್ಕೆ ಬಂದ ʼಹಿಲ್ಟನ್ ಯಂಗ್ ಕಮಿಷನ್‌ʼ (Hilton Young Commission) ಅಥವಾ ʼದಿ ರಾಯಲ್ ಕಮಿಷನ್ ಆನ್ ಇಂಡಿಯನ್ ಕರೆನ್ಸಿ ಅಂಡ್ ಫೈನಾನ್ಸ್’ (The Royal Commission on Indian currency and Finance) ಆಯೋಗವು ಅಂಬೇಡ್ಕರ್‌ ಕೆಲಸಗಳ ಮೊರೆ ಹೋಗುತ್ತದೆ. 

1924-25ರಲ್ಲಿ ಭಾರತಕ್ಕೆ ಭೇಟಿ ನೀಡಿದ ‘ದಿ ರಾಯಲ್ ಕಮಿಷನ್ ಆನ್ ಇಂಡಿಯನ್ ಕರೆನ್ಸಿ ಅಂಡ್ ಫೈನಾನ್ಸ್(The Royal Commission on Indian currency and Finance) ’ ಆಯೋಗದ ಸದಸ್ಯರು ಅಂಬೇಡ್ಕರ್‌ ಅವರು ಮಂಡಿಸಿದ ಮಹಾಪ್ರಬಂಧ ‘ದಿ ಪ್ರಾಬ್ಲಂ ಆಫ್ ರುಪೀ: ಇಟ್ಸ್ ಒರಿಜನ್ ಅಂಡ್ ಇಟ್ಸ್ ಸಲ್ಯೂಷನ್’ ಪುಸ್ತಕವನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದರ ಬಗ್ಗೆಯೂ ಹಲವು ಉಲ್ಲೇಖಗಳಿವೆ. ಅಂದರೆ, ಸಂವಿಧಾನ ಕರ್ತೃ ಅಂಬೇಡ್ಕರ್‌ ಅವರ ಆರ್ಥಿಕ ಚಿಂತನೆಗಳು 1920-30 ರ ದಶಕದಲ್ಲೇ ಪಾಶ್ಚಾತ್ಯ ದೇಶಗಳಲ್ಲೇ ಪ್ರಭಾವಶಾಲಿಯಾಗಿದ್ದವು ಎಂಬುದಕ್ಕೆ ಸಾಕ್ಷಿ ಇದು. 

ಹಿಲ್ಟನ್ ಯಂಗ್ ಆಯೋಗದ ಮುಂದೆ ಡಾ ಅಂಬೇಡ್ಕರ್ ಅವರು ಪ್ರಸ್ತುತಪಡಿಸಿದ ಮಾರ್ಗಸೂಚಿಗಳು, ಕಾರ್ಯಶೈಲಿ ಮತ್ತು ದೃಷ್ಟಿಕೋನದ ಪ್ರಕಾರ ಭಾರತೀಯ ರಿಸರ್ವ್ ಬ್ಯಾಂಕ್ (RBI) ಅನ್ನು ಪರಿಕಲ್ಪನೆ ಮಾಡಲಾಗಿದೆ. ಹಿಲ್ಟನ್ ಯಂಗ್ ಕಮಿಷನ್ 1926 ರಲ್ಲಿ ತನ್ನ ವರದಿಯನ್ನು ಸಲ್ಲಿಸಿತು ಮತ್ತು ವರದಿಯ ಶಿಫಾರಸುಗಳ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್  ಏಪ್ರಿಲ್ 1, 1935 ರಂದು ಅಸ್ತಿತ್ವಕ್ಕೆ ಬಂತು. ಒಟ್ಟಾರೆಯಾಗಿ ಅಂಬೇಡ್ಕರ್‌ ಅವರ ಆರ್ಥಿಕ ವಿಚಾರಗಳ ಮೇಲೆಯೇ ಆರ್‌ಬಿಐ ರೂಪಿತಗೊಂಡಿದೆ. 

ಕೆಲಸದ ಸಮಯವನ್ನು 12 ಗಂಟೆಗಳಿಂದ 8 ಗಂಟೆಗಳವರೆಗೆ ಬದಲಾಯಿಸುವುದು, ತುಟ್ಟಿಭತ್ಯೆ, ರಜೆ ಪ್ರಯೋಜನ, ಉದ್ಯೋಗಿ ವಿಮೆ, ವೈದ್ಯಕೀಯ ರಜೆ, ಸಮಾನ ವೇತನ - ಸಮಾನ ಕೆಲಸ, ಕನಿಷ್ಠ ವೇತನ ಮತ್ತು ವೇತನ ಶ್ರೇಣಿಯ ಸಮಯೋಚಿತ ಪರಿಷ್ಕರಣೆ ಮುಂತಾದ ಕ್ರಮಗಳನ್ನು ಪರಿಚಯಿಸಿದಂತಹ ಹಲವಾರು ಕಾರ್ಮಿಕ ಸುಧಾರಣೆಗಳನ್ನು ಅಂಬೇಡ್ಕರ್‌ ಪ್ರತಿಪಾದಿಸುತ್ತಾರೆ. ಅದಾಗ್ಯೂ, ಭಾರತೀಯ ರಿಸರ್ವ್‌ ಬ್ಯಾಂಕಿನ ನಿರ್ಮಾಣದಲ್ಲಿ ಡಾ. ಬಿ ಆರ್‌ ಅಂಬೇಡ್ಕರ್‌ ಅವರ ಕೊಡುಗೆ ಹಾಗೂ ಅಂಬೇಡ್ಕರ್‌ ಅವರ ಅರ್ಥಜ್ಞಾನ ಸಾಕಷ್ಟು ಪ್ರಚಲಿತವಾಗದಿರುವುದು ಹಾಗೂ ಜನಪ್ರಿಯಗೊಳ್ಳದಿರುವುದು ದುರದೃಷ್ಟಕರವೇ ಸರಿ. 

ಕೃಪೆ: Theroundtableindia, Moneycontrol, Vellivada

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News