ಆದಿಉಡುಪಿ ಮಸೀದಿಗೆ ಕಲ್ಲೆಸೆತ ಪ್ರಕರಣ; ಆರೋಪಿ ಕುಂಪಲದ ಅಂಕಿತ್ ಪೂಜಾರಿಗೆ ಜೈಲುಶಿಕ್ಷೆ
ಉಡುಪಿ : ಆದಿಉಡುಪಿ ಮಸೀದಿಗೆ ಅಕ್ರಮ ಪ್ರವೇಶ ಮಾಡಿ, ಕಿಟಕಿಗೆ ಹಾನಿ ಮಾಡಿ, ಕೋಮು ಸಾಮರಸ್ಯಕ್ಕೆ ಹಾಗೂ ಸಾರ್ವಜನಿಕ ಶಾಂತಿಗೆ ಭಂಗ ಉಂಟು ಮಾಡಿದ ಪ್ರಕರಣದ ಆರೋಪಿಗೆ ನಗರದ ಒಂದನೇ ಹೆಚ್ಚುವರಿ ಸಿ.ಜೆ ಮತ್ತು ಜೆಎಂಎಫ್‌ಸಿ ನ್ಯಾಯಾಲಯವು ಜೈಲು ಶಿಕ್ಷೆ ಹಾಗೂ ದಂಡ ವಿಧಿಸಿದೆ.
ಮಂಗಳೂರು ಉಳ್ಳಾಲ ಸಮೀಪದ ಕುಂಪಲ ಮೂಲದ ಉಡುಪಿ ಪುತ್ತೂರು ಕೊಡಂಕೂರು ಗ್ರಾಮದ ನಿವಾಸಿ ಅಂಕಿತ್ ಪೂಜಾರಿ(31) ಶಿಕ್ಷೆಗೆ ಗುರಿಯಾಗಿರುವ ಆರೋಪಿ.
ಈತ 2017ರ ಜ.29ರಂದು ಅಂಬಲಪಾಡಿ ಗ್ರಾಮದ ಆದಿಉಡುಪಿಯ ಮಸ್ಜಿದ್ ಇ ನುರ್‌ವುಲ್ಲಾ ಇಸ್ಲಾಂ ಮಸೀದಿಗೆ ಅಕ್ರಮ ಪ್ರವೇಶ ಮಾಡಿ, ಮಸೀದಿಯ ಕಿಟಕಿಯ ಗಾಜನ್ನು ಪುಡಿ ಮಾಡಿ, ನಷ್ಟ ಉಂಟು ಮಾಡಿದ್ದನು. ಮಸೀದಿಗೆ ಕಲ್ಲು ಹೊಡೆದು ಕೋಮುಗಳ ಮಧ್ಯೆ ವೈಶಮ್ಯವನ್ನುಂಟು ಮಾಡಿ, ಕೋಮು ಸಾಮರಸ್ಯಕ್ಕೆ ಧಕ್ಕೆ ತರುವ ಹಾಗೂ ಸಾರ್ವಜನಿಕ ಶಾಂತಿಗೆ ಭಂಗ ವನ್ನುಂಟು ಮಾಡಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿ ವಿರುದ್ಧ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪತ್ರ ಸಲ್ಲಿಸಲಾಗಿತ್ತು.
ಪ್ರಕರಣದ ವಿಚಾರಣೆಯಲ್ಲಿ ಆರೋಪಿ ಮೇಲಿನ ಆರೋಪ ಸಾಬೀತಾದ ಹಿನ್ನೆಲೆ ಒಂದನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ಶ್ಯಾಮ್ ಪ್ರಕಾಶ್, ಆರೋಪಿ ಅಂಕಿತ್ ಕುಂಪಲಗೆ 3 ವರ್ಷದ ಕಾರಾಗೃಹ ವಾಸ ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ, ತೀರ್ಪು ನೀಡಿದ್ದಾರೆ.
ಸರಕಾರದ ಪರವಾಗಿ ಸಹಾಯಕ ಸರಕಾರಿ ಅಭಿಯೋಜಕಿ ಮೋಹಿನಿ ಕೆ. ವಾದ ಮಂಡಿಸಿದ್ದಾರೆ.
ಕೊಲೆ ಪ್ರಕರಣದ ಆರೋಪಿಯಾಗಿದ್ದನು!
ಈ ಕೃತ್ಯ ಎಸಗಿದ ದಿನದಂದೇ ಕರಾವಳಿ ಬೈಪಾಸ್‌ನಲ್ಲಿ ನಡೆದ ರಿಕ್ಷಾ ಚಾಲಕನ ಕೊಲೆ ಪ್ರಕರಣದಲ್ಲಿಯೂ ಅಂಕಿತ್ ಪೂಜಾರಿ ಆರೋಪಿಯಾಗಿದ್ದನು.
ಮಸೀದಿಗೆ ಕಲ್ಲೆಸೆದು ಬೈಕಿನೊಂದಿಗೆ ಪರಾರಿಯಾದ ಅಂಕಿತ್, ರಾಂಗ್ ಸೈಡ್‌ನಲ್ಲಿ ಬಂದ ವಿಚಾರದಲ್ಲಿ ರಿಕ್ಷಾ ಚಾಲಕ ಹನೀಫ್ ಎಂಬವರೊಂದಿಗೆ ಜಗಳಕ್ಕೆ ಇಳಿದಿದ್ದನು. ಈ ವೇಳೆ ಅಂಕಿತ್, ಹನೀಫ್ ಹಾಗೂ ಸಮಾಧಾನ ಪಡಿಸಲು ಬಂದ ಹನೀಫ್‌ರ ಭಾಮೈದ ಶಬ್ಬೀರ್ ಅವರ ಎದೆಗೆ ಚೂರಿಯಿಂದ ಇರಿದಿದ್ದನು. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಹನೀಫ್ ಮೃತಪಟ್ಟಿದ್ದರು. ಈ ಬಗ್ಗೆ ಅಂಕಿತ್ ವಿರುದ್ಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ಕೂಡ ದಾಖಲಾಗಿತ್ತು. ಈ ಪ್ರಕರಣದಲ್ಲಿ ಆತ ನ್ಯಾಯಾಲಯದಿಂದ ಖುಲಾಸೆಗೊಂಡಿದ್ದಾನೆ ಎಂದು ತಿಳಿದುಬಂದಿದೆ.