ಅಂತರಾಷ್ಟ್ರೀಯ ವಿಮಾನಯಾನ ನಿರ್ಬಂಧ ಸಡಿಲಿಸಿದ ಸಿಂಗಾಪುರ
ಸಿಂಗಾಪುರ, ಎ.1: ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಅಂತರಾಷ್ಟ್ರೀಯ ಪ್ರವಾಸಿಗರಿಗೆ ಮುಚ್ಚಲಾಗಿದ್ದ ಗಡಿಯನ್ನು ಸುಮಾರು 2 ವರ್ಷದ ಬಳಿಕ ಶುಕ್ರವಾರದಿಂದ ಮತ್ತೆ ತೆರೆಯಲಾಗಿದೆ ಎಂದು ಸಿಂಗಾಪುರ ಘೋಷಿಸಿದೆ.ಕೊರೋನ ವಿರುದ್ಧದ ಲಸಿಕೆ ಪಡೆದಿರುವ ಎಲ್ಲಾ ಅಂತಾರಾಷ್ಟ್ರೀಯ ಪ್ರಯಾಣಿಕರಿಗೂ ಸಿಂಗಾಪುರಕ್ಕೆ ಸ್ವಾಗತ ಎಂದು ಸರಕಾರ ಘೋಷಿಸಿದೆ. ಈ ಹಿಂದೆ ಕೆಲವು ನಿರ್ಧಿಷ್ಟ ಪ್ರದೇಶಗಳಿಂದ ಆಗಮಿಸುವ ಪ್ರಯಾಣಿಕರು ಮಾತ್ರ ಕ್ವಾರಂಟೈನ್ ನ ಅಗತ್ಯವಿಲ್ಲದೆ ದೇಶದೊಳಗೆ ಆಗಮಿಸಲು ಅವಕಾಶವಿತ್ತು. ಶುಕ್ರವಾರ(ಎಪ್ರಿಲ್ 1ರಿಂದ)ದಿಂದ ಲಸಿಕೆ ಪಡೆದ, ನೆಗೆಟಿವ್ ವರದಿ ಹೊಂದಿದ್ದವರು ದೇಶಕ್ಕೆ ಭೇಟಿ ನೀಡಲು ಅವಕಾಶವಿದೆ.
ಈ ಮಧ್ಯೆ, ಮಲೇಶ್ಯಾ ಕೂಡಾ ತನ್ನ ಗಡಿಭಾಗವನ್ನೂ ಪೂರ್ಣಪ್ರಮಾಣದಲ್ಲಿ ತೆರೆದಿದ್ದು , ವಿಶ್ವದ ಅತ್ಯಂತ ವಾಹನನಿಬಿಡ ಗಡಿರಸ್ತೆ ಎಂದು ಪರಿಗಣಿಸಲಾದ 1 ಕಿ.ಮೀ ಉದ್ದದ ಕಾಸ್ವೇಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾರು ಮತ್ತು ಮೋಟಾರ್ ಸೈಕಲ್ ಗಳ ಸಾಲು ಕಂಡುಬಂದಿದೆ ಎಂದು ವರದಿಯಾಗಿದೆ. ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಮುಚ್ಚಲಾಗಿದ್ದ ಕಾಸ್ವೇಯನ್ನು ಕಳೆದ ವರ್ಷ ಆಂಶಿಕವಾಗಿ ತೆರೆಯಲಾಗಿತ್ತು. ಮಲೇಶ್ಯಾ ಮತ್ತು ಸಿಂಗಾಪುರದ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಗಮನಾರ್ಹವಾಗಿ ಹೆಚ್ಚಿದೆ . ವಾರಾಂತ್ಯದ ದಿನದಲ್ಲಿ ವಿಮಾನ ಪ್ರಯಾಣಿಕರ ಸಂಖ್ಯೆ ಇನ್ನಷ್ಟು ಹೆಚ್ಚಬಹುದು ಎಂದು ಮಲೇಶ್ಯಾ ಮೂಲದ ವಿಮಾನಯಾನ ಸಂಸ್ಥೆ ಏರ್ಏಶ್ಯಾದ ಸಿಇಒ ಬೊ ಲಿಂಗಮ್ ಹೇಳಿದ್ದಾರೆ.