ಅರುಣಾಚಲ ಪ್ರದೇಶದ ಮೂರು ಜಿಲ್ಲೆಗಳಿಗೆ ವಿವಾದಾತ್ಮಕ ಅಫ್‌ಸ್ಪಾ ಕಾಯ್ದೆಯ ವಿಸ್ತರಣೆ

Update: 2022-04-01 19:03 GMT

ಹೊಸದಿಲ್ಲಿ,ಎ.1: ಕೇಂದ್ರ ಸರಕಾರವು ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ (ಅಫ್‌ಸ್ಪಾ)ಯನ್ನು ಈ ವರ್ಷದ ಎ.1ರಿಂದ ಸೆ.30ರವರೆಗೆ ತಿರಾಪ್,ಚಾಂಗ್ಲಾಂಗ್ ಮತ್ತು ಲಾಂಗ್ಡಿಂಗ್ ಸೇರಿದಂತೆ ಅರುಣಾಚಲ ಪ್ರದೇಶದ ಮೂರು ಜಿಲ್ಲೆಗಳಿಗೆ ವಿಸ್ತರಿಸಿದೆ. ಜೊತೆಗೆ ಅರುಣಾಚಲ ಪ್ರದೇಶದ ನಮ್ಸಾಲ್ ಮತ್ತು ಮಹದೇವಪುರ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿಯ ಪ್ರದೇಶಗಳಿಗೂ ಅಫ್‌ಸ್ಪಾವನ್ನು ವಿಸ್ತರಿಸಲಾಗಿದೆ.
ಕೇಂದ್ರವು ಈ ಪ್ರದೇಶಗಳನ್ನು ಅಫ್‌ಸ್ಪಾದ ಸಂಬಂಧಿತ ಕಲಮ್ಗಳಡಿ 'ಪ್ರಕ್ಷುಬ್ಧ ಪ್ರದೇಶಗಳು ' ಎಂದು ಘೋಷಿಸಿದೆ. 

 ಯಾವುದೇ ಪ್ರದೇಶದಲ್ಲಿ ಕಾರ್ಯಾಚರಣೆಗಳನ್ನು ನಡೆಸಲು ಮತ್ತು ಯಾವುದೇ ಪೂರ್ವ ವಾರಂಟ್ ಇಲ್ಲದೆ ಯಾರನ್ನೂ ಬಂಧಿಸಲು, ಮನೆಗಳನ್ನು ಪ್ರವೇಶಿಸಲು ಮತ್ತು ಶೋಧಗಳನ್ನು ಕೈಗೊಳ್ಳಲು ಅಫ್‌ಸ್ಪಾ ಭದ್ರತಾ ಪಡೆಗಳಿಗೆ ಅಧಿಕಾರ ನೀಡುತ್ತದೆ. ದಶಕಗಳ ಬಳಿಕ ನಾಗಾಲ್ಯಾಂಡ್,ಅಸ್ಸಾಂ ಮತ್ತು ಮಣಿಪುರಗಳಲ್ಲಿ ವಿವಾದಾತ್ಮಕ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ (ಅಫ್‌ಸ್ಪಾ) ಯಡಿಯ ಪ್ರದೇಶಗಳನ್ನು ಕಡಿಮೆಗೊಳಿಸಲಾಗಿದೆ ಎಂದು ಕೇಂದ್ರವು ಗುರುವಾರ ಪ್ರಕಟಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News