ಅಫ್ಘಾನಿಸ್ತಾನದಲ್ಲಿ ಮಾದಕವಸ್ತು ಉತ್ಪಾದನೆ, ಬಳಕೆಗೆ ನಿಷೇಧ
ಕಾಬೂಲ್, ಎ.3: ವಿಶ್ವದಲ್ಲಿ ಅತ್ಯಧಿಕ ಅಫೀಮು ಬೆಳೆಯುವ ದೇಶವಾಗಿರುವ ಅಫ್ಘಾನಿಸ್ತಾನದಲ್ಲಿ ಮಾದಕ ವಸ್ತುಗಳ ಉತ್ಪಾದನೆಯನ್ನು ನಿಷೇಧಿಸಲಾಗಿದೆ ಎಂದು ತಾಲಿಬಾನ್ ರವಿವಾರ ಘೋಷಿಸಿದೆ.
ಇಸ್ಲಾಮಿಕ್ ಎಮಿರೇಟ್ಸ್ ಆಫ್ ಅಫ್ಘಾನಿಸ್ತಾನದ ಪರಮೋಚ್ಛ ಮುಖಂಡ ಹೈಬತುಲ್ಲಾ ಅಖುಂದ್ಜಾಧರ ಆದೇಶದಂತೆ, ಇಂದಿನಿಂದ ಮಾದಕವಸ್ತು ಉತ್ಪಾದನೆಯನ್ನು ದೇಶದಾದ್ಯಂತ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಈ ಆದೇಶವನ್ನು ಉಲ್ಲಂಘಿಸಿದರೆ ತಕ್ಷಣ ಆ ಬೆಳೆಯನ್ನು ನಾಶಗೊಳಿಸಿ, ತಪ್ಪಿತಸ್ತರ ವಿರುದ್ಧ ಶರಿಯಾ ಕಾನೂನಿನಂತೆ ಕ್ರಮ ಕೈಗೊಳ್ಳಲಾಗುವುದು. ಎಲ್ಲಾ ಮಾದಕವಸ್ತುಗಳ ಉತ್ಪಾದನೆ, ಬಳಕೆ ಅಥವಾ ಸಾಗಾಟಕ್ಕೂ ಈ ಆದೇಶ ಅನ್ವಯಿಸುತ್ತದೆ ಎಂದು ಅಫ್ಘಾನಿಸ್ತಾನದ ಆಂತರಿಕ ಸಚಿವರು ಕಾಬೂಲ್‌ನಲ್ಲಿ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.
ಕಳೆದ ಆಗಸ್ಟ್‌ನಲ್ಲಿ ಅಫ್ಘಾನಿಸ್ತಾನದ ಮೇಲೆ ತಾಲಿಬಾನ್ ನಿಯಂತ್ರಣ ಸಾಧಿಸಿದ್ದರೂ ಅಲ್ಲಿನ ಸರಕಾರಕ್ಕೆ ಇನ್ನೂ ಅಂತರಾಷ್ಟ್ರೀಯ ಸಮುದಾಯದ ಮಾನ್ಯತೆ ದೊರಕಿಲ್ಲ. ತಾಲಿಬಾನ್‌ಗೆ ಅಂತರಾಷ್ಟ್ರೀಯ ಸಮುದಾಯ ವಿಧಿಸಿರುವ ಷರತ್ತುಗಳಲ್ಲಿ ಮಾದಕವಸ್ತು ಉತ್ಪಾದನೆಯನ್ನು ನಿಷೇಧಿಸುವುದೂ ಸೇರಿದೆ. ವಿಶ್ವದಲ್ಲಿ ಅತ್ಯಧಿಕ ಅಫೀಮು ಬೆಳೆಯುವ ದೇಶವೆಂದು ಅಪಖ್ಯಾತಿ ಪಡೆದಿರುವ ಅಫ್ಘಾನಿಸ್ತಾನದಲ್ಲಿ 2017ರಲ್ಲಿ 1.4 ಬಿಲಿಯನ್ ಡಾಲರ್ ಮೊತ್ತದ ಅಫೀಮು ಬೆಳೆಯಲಾಗಿದ್ದು ಇತ್ತೀಚಿನ ತಿಂಗಳಲ್ಲಿ ಈ ಪ್ರಮಾಣ ಇನ್ನಷ್ಟು ಹೆಚ್ಚಿದೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ.ಅತ್ಯಧಿಕ ಬೇಡಿಕೆ ಹಾಗೂ ಮೌಲ್ಯವಿರುವ ಮಾದಕವಸ್ತುಗಳ ಉತ್ಪಾದನೆಯಲ್ಲಿ ತೊಡಗಿರುವವರ ಸಂಖ್ಯೆ ಕ್ರಮೇಣ ಹೆಚ್ಚುತ್ತಿದೆ. ಮಾದಕ ವಸ್ತು ಉತ್ಪಾದನೆ ನಿಷೇಧಕ್ಕೆ ತಾಲಿಬಾನ್ ಸಂಘಟನೆಯ ಕೆಲವರಿಂದಲೂ ವಿರೋಧ ವ್ಯಕ್ತವಾಗಬಹುದು ಎಂದು ತಾಲಿಬಾನ್ ಮೂಲಗಳು ಹೇಳಿವೆ.