ಕೋವಿಡ್‌ ನಿಂದಾಗಿ ನೇಮಕಾತಿಗಳು ಸ್ಥಗಿತ: ಸೇನಾ ಕಾರ್ಯಾಚರಣೆಗಳಿಗೆ ತೊಡಕಾಗುವ ಸಾಧ್ಯತೆ

Update: 2022-04-05 10:37 GMT

ಭಾರತೀಯ ಸೇನೆ ಅಧಿಕಾರಿಗಳ ಕೊರತೆ ಎದುರಿಸುತ್ತಲೇ ಬಂದಿದ್ದರೂ ಕಳೆದ ಮೂರು ದಶಕಗಳಿಂದಲೂ ನಿರಂತರವಾಗಿ ಆ ಸಂಖ್ಯೆ 7,000ಕ್ಕಿಂತ ಕಡಿಮೆಯಾಗದಂತೆ ಖಾತರಿಪಡಿಸಿಕೊಂಡು ಬಂದಿದೆ.  ಆದರೆ ಈಗ ನೆರೆಯ ಪರಮಾಣುಶಕ್ತ ಶತ್ರುರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಚೀನಾಗಳಿಂದ ಹೆಚ್ಚುತ್ತಿರುವ ಭದ್ರತಾ ಬೆದರಿಕೆಗಳಿರುವಾಗ ಅದು ಯೋಧರ ತೀವ್ರ ಕೊರತೆಯನ್ನೂ ಎದುರಿಸುತ್ತಿದೆ.

ಹಿರಿಯ ಮಿಲಿಟರಿ ಅಧಿಕಾರಿಗಳು ಹೇಳುವಂತೆ 14 ಲಕ್ಷ ಸಂಖ್ಯಾಬಲವನ್ನು ಹೊಂದಿರುವ ಭಾರತೀಯ ಸೇನೆಯಿಂದ ಪ್ರತಿವರ್ಷವೂ ಸುಮಾರು 50,000 ಯೋಧರು ನಿವೃತ್ತಿಯಾಗುತ್ತಿರುತ್ತಾರೆ. ಹೀಗೆ ತೆರವಾಗುತ್ತಿರುವ ಹುದ್ದೆಗಳಿಗೆ ಹೊಸ ನೇಮಕಾತಿಗಳನ್ನು ಕೋವಿಡ್ ಸಾಂಕ್ರಾಮಿಕದಿಂದಾಗಿ 2020ರ ಆರಂಭದಿಂದಲೇ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಹಿಮಾಲಯದಲ್ಲಿನ ಭಾರತದ ವಿವಾದಿತ ಗಡಿಗಳಲ್ಲಿ ಯೋಧರ ನಿಯೋಜನೆಗೆ ಸಂಬಂಧಿಸಿದಂತೆ ಸೇನೆಯು ಸಂಭಾವ್ಯ ಕಾರ್ಯಾಚರಣೆ ಸವಾಲುಗಳನ್ನು ಎದುರಿಸುತ್ತಿದೆ.

 ಮೇ 2020ರಿಂದ ಪೂರ್ವ ಲಡಾಖ್ನಲ್ಲಿಯ ವಾಸ್ತವ ನಿಯಂತ್ರಣ ರೇಖೆ (ಎಲ್ಎಸಿ)ಯಲ್ಲಿ ಭಾರತ ಮತ್ತು ಚೀನಾ ಸೇನೆಗಳ ನಡುವೆ ಸೃಷ್ಟಿಯಾಗಿರುವ ಬಿಕ್ಕಟ್ಟು ಈಗಲೂ ಮುಂದುವರಿದಿದ್ದು,ಸದ್ಯಕ್ಕೆ ಶಮನಗೊಳ್ಳುವ ಲಕ್ಷಣಗಳು ಕಂಡುಬರುತ್ತಿಲ್ಲ. ಇನ್ನೊಂದೆಡೆ ಕಾಶ್ಮೀರ ಮತ್ತು ಸಮೀಪದ ಸಿಯಾಚಿನ್ಗಳಲ್ಲಿ ಪ್ರಕ್ಷುಬ್ಧ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನದೊಂದಿಗೆ ಉದ್ವಿಗ್ನತೆ ಮುಂದುವರಿದಿದೆ. ಇದನ್ನು ಮಿಲಿಟರಿ ತಜ್ಞರು ‘ಶಾಂತಿಯೂ ಅಲ್ಲದ ಯುದ್ಧವೂ ಅಲ್ಲದ ’ ಸ್ಥಿತಿ ಎಂದು ಬಣ್ಣಿಸಿದ್ದಾರೆ. ಇದಲ್ಲದೆ ಬೇಸಿಗೆಯು ಸನ್ನಿಹಿತವಾಗುತ್ತಿರುವ ಹಿನ್ನೆಲೆಯಲ್ಲಿ ಕಾಶ್ಮೀರ ಮತ್ತು ಈಶಾನ್ಯ ಪ್ರದೇಶಗಳಲ್ಲಿ ಬಂಡಾಯ ನಿಗ್ರಹ ಕಾರ್ಯಾಚರಣೆಗಾಗಿ ಹೆಚ್ಚಿನ ಪಡೆಗಳ ನಿಯೋಜನೆಯೂ ಅಗತ್ಯವಾಗಿದೆ.

 ಸೇನೆಯು 7,476 ಅಧಿಕಾರಿಗಳು ಮತ್ತು 97,177 ಯೋಧರು ಸೇರಿದಂತೆ 1,04,653 ಸಿಬ್ಬಂದಿಗಳ ಕೊರತೆಯನ್ನು ಎದುರಿಸುತ್ತಿದೆ ಎಂದು ಸಹಾಯಕ ರಕ್ಷಣಾ ಸಚಿವ ಅಜಯ್ ಭಟ್ ಅವರು ಕಳೆದ ಡಿಸೆಂಬರ್ನಲ್ಲಿ ಸಂಸತ್ತಿನಲ್ಲಿ ತಿಳಿಸಿದ್ದರು. ಇದರಲ್ಲಿ ಅಧಿಕಾರಿಗಳು ಮತ್ತು ಇತರ ದರ್ಜೆಗಳ ನಡುವೆ,ವಿಶೇಷವಾಗಿ ಕ್ಷೇತ್ರ ಕಾರ್ಯಾಚರಣೆಗಳಲ್ಲಿ, ಸೇತುವೆಯಾಗಿ ಪ್ರಮುಖ ಪಾತ್ರ ವಹಿಸುವ ಜ್ಯೂನಿಯರ್ ಕಮಿಷನ್ಡ್ ಅಧಿಕಾರಿ (ಜೆಸಿಒ)ಗಳೂ ಸೇರಿದ್ದಾರೆ. ಮೂರು ತಿಂಗಳ ಬಳಿಕ,ಈ ವರ್ಷದ ಮಾರ್ಚ್ ಅಂತ್ಯದ ವೇಳೆಗೆ ಭಟ್, ಸಾಂಕ್ರಾಮಿಕದಿಂದಾಗಿ ಎಲ್ಲ ಯೋಜಿತ ಸೇನಾ ನೇಮಕಾತಿಗಳನ್ನು ಅಮಾನತುಗೊಳಿಸಲಾಗಿದ್ದನ್ನು ಬಹಿರಂಗಗೊಳಿಸಿದ್ದರು. ಅಂದರೆ ಕಳೆದ ಎರಡು ವರ್ಷಗಳಿಂದ ಯೋಧರ ನೇಮಕಾತಿಗಳು ನಡೆದೇ ಇಲ್ಲ.

ಹೆಚ್ಚಿನವರು ಯೋಧರು ಸೇರಿದಂತೆ ಸೇನೆಯ ಮಾನವ ಶಕ್ತಿ ಕೊರತೆಯು ವರ್ಷಾಂತ್ಯದ ವೇಳೆಗೆ ಸುಮಾರು 2,00,000ಕ್ಕೆ ಹೆಚ್ಚಬಹುದು ಎಂದಿರುವ ಮಿಲಿಟರಿ ವಿಶ್ಲೇಷಕ ಲೆ.ಜ.(ನಿವೃತ್ತ) ಎಚ್.ಎಸ್.ಪನಾಗ್,ದೇಶಿಯ ಮಿಲಿಟರಿ ತರಬೇತಿ ಸಂಸ್ಥೆಗಳ ಸಾಮರ್ಥ್ಯ ಮತ್ತು ಅವುಗಳ ಬೋಧನಾ ಸಮಯಾವಧಿಗಳನ್ನು ಪರಿಗಣಿಸಿದರೆ ವರ್ಷಕ್ಕೆ ಶೇ.30ರಷ್ಟು ಹೆಚ್ಚಿನ ನೇಮಕಾತಿಗಳನ್ನು ಮಾಡಿಕೊಂಡರೂ ಈ ಹೆಚ್ಚುತ್ತಿರುವ ಸಿಬ್ಬಂದಿ ಕೊರತೆಯನ್ನು ತುಂಬಿಕೊಳ್ಳಲು ಆರರಿಂದ ಏಳು ವರ್ಷಗಳೇ ಬೇಕಾಗುತ್ತವೆ ಎಂದು ಪ್ರತಿಪಾದಿಸಿದ್ದಾರೆ.

ಯೋಧರನ್ನು ಸಮರ್ಪಕವಾಗಿ ತರಬೇತುಗೊಳಿಸಲು ಎರಡರಿಂದ ಮೂರು ವರ್ಷಗಳು ಬೇಕಾಗುತ್ತವೆ ಹಾಗೂ ಅವರ ನೇಮಕಾತಿ ಮತ್ತು ನಿವೃತ್ತಿ ಚಕ್ರಗಳನ್ನು ಪರಿಣಾಮಕಾರಿಗಾಗಿ ನಿರ್ವಹಿಸದಿದ್ದರೆ ಸೇನೆಗೆ ತೀರ ಅಗತ್ಯವಿದ್ದಾಗ ಕಳವಳಕಾರಿ ಮಾನವ ಶಕ್ತಿ ಕೊರತೆಯು ಉಂಟಾಗಬಹುದು ಎಂದು ಇತರ ಸೇನಾಧಿಕಾರಿಗಳು ಎಚ್ಚರಿಸಿದ್ದಾರೆ.

ಸೇನಯು ತಕ್ಷಣಕ್ಕೆ ಇಂತಹ ಸಿಬ್ಬಂದಿ ಕೊರತೆಯನ್ನು ಎದುರಿಸದಿದ್ದರೂ ಯೋಧರ ನೇಮಕಾತಿ ಮತ್ತು 17 ವರ್ಷಗಳ ಸೇವೆಯ ಬಳಿಕ ಅಥವಾ 35ರಿಂದ 37 ವರ್ಷ ವಯೋಮಾನದ ನಡುವೆ ಅವರ ನಿವೃತ್ತಿಯ ನಡುವಿನ ಈ ಸೂಕ್ಷ್ಮವಾದ ಸಮತೋಲನವನ್ನು ವಿವೇಕದಿಂದ ಕಾಯ್ದುಕೊಳ್ಳುವ ಅಗತ್ಯವಿದೆ ಎಂದೂ ಅವರು ಹೇಳಿದ್ದಾರೆ.

ಎಲ್ಒಸಿ ಮತ್ತು ಎಲ್ಎಸಿ ನಿಯೋಜನೆಗಳು ಹಾಗೂ ಬೆಂಬಲ ದಾಳಿ ವ್ಯವಸ್ಥೆ ರಚನೆಗಳು ವರ್ಷಪೂರ್ತಿ ಅಗಾಧ ಸಂಖ್ಯೆಯಲ್ಲಿ ಯೋಧರ ಲಭ್ಯತೆಯನ್ನು ಅಗತ್ಯವಾಗಿಸಿವೆ ಎನ್ನುತ್ತಾರೆ ಮೇ.ಜ.(ನಿವೃತ್ತ) ಎ.ಪಿ.ಸಿಂಗ್.

 ಪ್ರತಿ 90 ದಿನಗಳಿಗೆ ಎತ್ತರದ ಪ್ರದೇಶಗಳಲ್ಲಿ ಪದಾತಿ ದಳಗಳ ನಿಯೋಜನೆ ಆವರ್ತನೆಯು ಕಡ್ಡಾಯವಾಗಿದೆ ಮತ್ತು ಇದಕ್ಕಾಗಿ ಸಾಕಷ್ಟು ಮೀಸಲು ಯೋಧರು ಅಗತ್ಯವಾಗುತ್ತಾರೆ ಮತ್ತು ಇದರಿಂದಾಗಿ ಹೊಸ ನೇಮಕಾತಿಗಳನ್ನು ಮಾಡಿಕೊಳ್ಳಲೇಬೇಕಿದೆ. ಹೀಗಾಗಿ ಕಳೆದೆರಡು ವರ್ಷಗಳಲ್ಲಿ ಗಣನೀಯವಾಗಿ ಹೆಚ್ಚಾಗಿರುವ ಯೋಧರ ಕೊರತೆಯು ಮಧ್ಯಮ ಮತ್ತು ದೀರ್ಘಾವಧಿಗಳಲ್ಲಿ ಸೇನೆಯ ಕಾರ್ಯಾಚರಣೆಗಳಿಗೆ ತೊಂದರೆಗಳನ್ನುಂಟು ಮಾಡಬಹುದು ಎಂದು ಸಿಂಗ್ ಹೇಳಿದರು.

ಸೇನೆಯಲ್ಲಿ ಯೋಧರ ಸಂಖ್ಯೆಯನ್ನು ತಗ್ಗಿಸುವ ಜೊತೆಗೆ ಎರಡು ವರ್ಷಗಳ ನೇಮಕಾತಿ ವಿರಾಮವು ಯುವಜನರ ಮೇಲೆ,ವಿಶೇಷವಾಗಿ ಸೇನೆಗೆ ಸೇರುವುದು ಸುದೀರ್ಘ ಕಾಲದಿಂದಲೂ ಹೆಮ್ಮೆಯ,ನೆಚ್ಚಿನ ಉದ್ಯೋಗವಾಗಿರುವ ಗ್ರಾಮೀಣ ಪ್ರದೇಶಗಳಲ್ಲಿ,ಪ್ರತಿಕೂಲ ಪರಿಣಾಮವನ್ನುಂಟು ಮಾಡಿದೆ.

ಇತ್ತೀಚಿಗೆ ಪಂಚರಾಜ್ಯ ಚುನಾವಣೆಗಳ ಸಂದರ್ಭದಲ್ಲಿ ಉತ್ತರ ಪ್ರದೇಶದ ಬನ್ಸಿ ಬಾಝಾರ್ನಲ್ಲಿ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರ ರ್ಯಾಲಿಯ ವೇಳೆ ಕೆಲವು ಅತೃಪ್ತ ಯುವಕರು ಸೇನಾ ನೇಮಕಾತಿಯನ್ನು ಸ್ಥಗಿತಗೊಳಿಸಿರುವುದನ್ನು ವಿರೋಧಿಸಿ ಪ್ರತಿಭಟನೆಯನ್ನೂ ನಡೆಸಿದ್ದರು. ಅಲ್ಲದೆ ಸೇನೆಯಲ್ಲಿ ನೇಮಕಾತಿಗಾಗಿ ಗರಿಷ್ಠ ವಯೋಮಿತಿಯನ್ನು ಎರಡು ವರ್ಷ ಹೆಚ್ಚಿಸುವಂತೆಯೂ ಅವರು ಆಗ್ರಹಿಸಿದ್ದಾರೆ.

 ಸಶಸ್ತ್ರ ಪಡೆಗಳಿಗೆ ನೇಮಕಾತಿಯು ಎಲ್ಲ ಪಕ್ಷಗಳಿಗೆ ‘ರಾಜಕೀಯ ಅನಿವಾರ್ಯತೆ ’ಆಗಿದೆ ಮತ್ತು ಚುನಾವಣೆಗಳಲ್ಲಿ ಅವು ಈ ವಿಷಯವನ್ನು ಬಳಸಿಕೊಳ್ಳಬಹುದು. ಹೀಗಾಗಿ 2024ರಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಗಳಿಗೆ ಮೊದಲು,ಅಂದರೆ 2023ರ ವರ್ಷಾಂತ್ಯದ ವೇಳೆಗೆ ನೇಮಕಾತಿಗಳು ಪುನರಾರಂಭಗೊಳ್ಳುವ ಸಾಧ್ಯತೆಯಿದೆ ಎನ್ನುತ್ತಾರೆ ಭದ್ರತಾ ವಿಶ್ಲೇಷಕರು.

ಸಿಬ್ಬಂದಿ ಕೊರತೆಯು ತುಂಬ ಕಾಲದಿಂದ ಚರ್ಚೆಯಾಗುತ್ತಿರುವ ಸುಧಾರಣೆಗಳನ್ನು ಜಾರಿಗೆ ತರಲು ಮತ್ತು ಸೇನೆಯ ಗಾತ್ರವನ್ನು ಕಡಿತಗೊಳಿಸಲು ಒಂದು ಅವಕಾಶವಾಗಬಹುದು. ಇದು ಕಾರ್ಯಾಚರಣೆಗಳಲ್ಲಿ ಹೆಚ್ಚು ದಕ್ಷತೆಯನ್ನು ಸಾಧಿಸಲು ಮತ್ತು ಅಂತಿಮವಾಗಿ ಪಿಂಚಣಿ ಪಾವತಿಗಳ ಮೂಲಕ ಹೆಚ್ಚಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಿಕೊಳ್ಳಲು ಸೇನೆಗೆ ನೆರವಾಗುತ್ತದೆ ಎನ್ನುತ್ತಾರೆ ಪನಾಗ್.

 ಸಿಬ್ಬಂದಿ ಕೊರತೆ ಸೇನೆಗೆ ಮಾತ್ರ ಸೀಮಿತವಾಗಿಲ್ಲ. ಭಾರತೀಯ ನೌಕಾಪಡೆಯು 1,265 ಅಧಿಕಾರಿಗಳು ಮತ್ತು 11,166 ನಾವಿಕರ ಕೊರತೆಯನ್ನು ಎದುರಿಸುತ್ತಿದ್ದರೆ,ಭಾರತೀಯ ವಾಯುಪಡೆಯೂ 621 ಅಧಿಕಾರಿಗಳು ಮತ್ತು 4,850 ಏರ್ mnf gL ಕೊರತೆಯನ್ನು ಅನುಭವಿಸುತ್ತಿದೆ.

ಕೃಪೆ:  Thewire.in

Writer - ರಾಹುಲ್‌ ಬೇಡಿ (Thewire.in)

contributor

Editor - ರಾಹುಲ್‌ ಬೇಡಿ (Thewire.in)

contributor

Similar News