ಶೆಹ್ಲಾ ರಶೀದ್‌ ವಿರುದ್ಧ ಝೀನ್ಯೂಸ್‌ ಪ್ರಸಾರ ಮಾಡಿದ್ದ ಕಾರ್ಯಕ್ರಮದ ವಿಡಿಯೋ ತೆಗೆದು ಹಾಕುವಂತೆ ಎನ್‌ಬಿಡಿಎಸ್‌ಎ ಸೂಚನೆ

Update: 2022-04-05 17:12 GMT

ಹೊಸದಿಲ್ಲಿ: 2020 ರ ನವೆಂಬರ್‌ 30 ರಂದು ಹೋರಾಟಗಾರ್ತಿ ಶೆಹ್ಲಾ ರಶೀದ್‌ ವಿರುದ್ಧ ಝೀ ನ್ಯೂಸ್‌ ಪ್ರಸಾರ ಮಾಡಿದ ಕಾರ್ಯಕ್ರಮ ಏಕಮುಖವಾಗಿದೆ, ವಸ್ತುನಿಷ್ಠತೆ, ನಿಷ್ಪಕ್ಷಪಾತದ ಕೊರತೆಯನ್ನು ಹೊಂದಿದೆ ಎಂದು ಸ್ವತಂತ್ರ ಸುದ್ದಿ ಮತ್ತು ಡಿಜಿಟಲ್ ಮೇಲ್ವಿಚಾರಣಾ ಸಂಸ್ಥೆ (NBDSA) ಹೇಳಿದೆ. ಕಾರ್ಯಕ್ರಮದಲ್ಲಿ ಕೇವಲ ಒಂದು ಬದಿಯ ವಿಷಯವನ್ನು ಮಾತ್ರ ತೋರಿಸಲಾಗಿದೆ ಎಂದು NBDSA ಅಭಿಪ್ರಾಯಪಟ್ಟಿದೆ.

 ಆ ಕಾರ್ಯಕ್ರಮದ ವಿಡಿಯೋ ಲಿಂಕನ್ನು ತಮ್ಮ ವೆಬ್‌ಸೈಟ್‌, ಯೂಟ್ಯೂಬ್‌ ಹಾಗೂ ಎಲ್ಲಾ ಕಡೆಗಳಿಂದ ತೆಗೆದು ಹಾಕುವಂತೆ NBDSA ಝೀ ನ್ಯೂಸ್‌ ಗೆ ಸೂಚನೆ ನೀಡಿದೆ ಎಂದು livelaw.com ವರದಿ ಮಾಡಿದೆ.

2020 ರ ನವೆಂಬರ್‌ 30 ರಂದು ಝೀ ಟಿವಿ ಪ್ರಸಾರ ಮಾಡಿದ ಕಾರ್ಯಕ್ರಮದ ವಿರುದ್ಧ ಶೆಹ್ಲಾ ರಶೀದ್‌, NBDSA ಯಲ್ಲಿ ದೂರು ದಾಖಲಿಸಿದ್ದರು. ಅದು ಶೆಹ್ಲಾ ಹಾಗೂ ಆಕೆಯ ಸಹೋದರಿ ಮತ್ತು ತಾಯಿಯ ವಿರುದ್ಧ ಆಧಾರ ರಹಿತ ಆರೋಪಗಳನ್ನು ಮಾಡಿದ ಶೆಹ್ಲಾರ ತಂದೆಯ ಸಂದರ್ಶನವನ್ನು ಒಳಗೊಂಡ ಕಾರ್ಯಕ್ರಮವಾಗಿತ್ತು.  ಭಯೋತ್ಪಾದನೆಗೆ ಶೆಹ್ಲಾ ಫಂಡ್‌ ಮಾಡುತ್ತಿದ್ದಾರೆಂದೂ ಕಾರ್ಯಕ್ರಮದಲ್ಲಿ ಆರೋಪ ಹೊರಿಸಲಾಗಿತ್ತು. ಶೆಹ್ಲಾ ಭಯೋತ್ಪಾದನೆಗೆ ನಿಧಿ ನೀಡುವಂತಹ ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಸ್ವತಃ ನಿರೂಪಕ ಕಾರ್ಯಕ್ರಮದಲ್ಲಿ ಪ್ರತಿಪಾದಿಸಿದ್ದಾರೆ ಎಂದು ಆರೋಪಿಸಲಾಗಿತ್ತು.

ಮಾರ್ಚ್‌ 31 ರಂದು NBDSA ನೀಡಿದ ಆದೇಶದಲ್ಲಿ, ಶೆಹ್ಲಾ ವಿರುದ್ಧ ಆರೋಪ ಮಾಡಲು ಆಕೆಯ ತಂದೆಗೆ ಅವಕಾಶ ಮಾಡಿಕೊಟ್ಟು ಚಾನೆಲ್ ಕಥೆಯ ಒಂದು ಭಾಗವನ್ನು ಮಾತ್ರ ಪ್ರಸ್ತುತಪಡಿಸಿದೆ ಎಂದು ಅಭಿಪ್ರಾಯಪಟ್ಟಿದೆ.

 NBDSA ಅಧ್ಯಕ್ಷ (ನಿವೃತ್ತ) ನ್ಯಾಯಮೂರ್ತಿ ಎ.ಕೆ ಸಿಕ್ರಿ ಅವರು ಶೆಹ್ಲಾರ ತಂದೆ ಮಾಡಿದ ಆರೋಪಗಳಿಗೆ ಜೆಎನ್‌ಯುಗೆ ಸಂಬಂಧಿಸಿದ ಪ್ರಸಾರದಲ್ಲಿ ತೋರಿಸಿರುವ ದೃಶ್ಯಗಳೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ಗಮನಿಸಿದ್ದಾರೆ. ದೂರುದಾರರು ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಭಾವನೆ ಮೂಡಿಸುವಂತೆ ಕಾರ್ಯಕ್ರಮ ತೋರಿದೆ ಎಂದು ಹೇಳಲಾಗಿದೆ.

ಈ ಕುರಿತು ಝೀ ನ್ಯೂಸ್‌ ಗೆ NBDSA ಎಚ್ಚರಿಕೆ ನೀಡಿದ್ದು, ಭವಿಷ್ಯದಲ್ಲಿ ಇಂತಹ ಕಾರ್ಯಕ್ರಮವನ್ನು ಪುನರಾವರ್ತಿಸದಂತೆ ಎಚ್ಚರಿಸಿದೆ.

“ಇಂತಹ ಸಾಮಾನ್ಯೀಕರಿಸಿದ ಹೇಳಿಕೆಗಳು ನೀತಿ ಸಂಹಿತೆ, ಪ್ರಸಾರದ ಮಾನದಂಡಗಳು, ವರದಿಯಲ್ಲಿ ನಿಷ್ಪಕ್ಷಪಾತ ಮತ್ತು ವಸ್ತುನಿಷ್ಠತೆಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತವೆ ಎಂದು ಪ್ರಾಧಿಕಾರವು ಗಮನಿಸಿದೆ. ಪ್ರಸಾರಕರು (ಝೀ ನ್ಯೂಸ್) ಭವಿಷ್ಯದಲ್ಲಿ ಅದರ ಯಾವುದೇ ಪ್ರಸಾರಗಳಲ್ಲಿ ಸಾಮಾನ್ಯ ಆರೋಪದ ಹೇಳಿಕೆಗಳನ್ನು ಮಾಡುವಾಗ ಜಾಗರೂಕರಾಗಿರಬೇಕು.” ಎಂದು NBDSA ತಾಕೀತು ಮಾಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News