ಮೂಡುಬಿದಿರೆ: ಉದ್ಯಮಿ ಮುಹಮ್ಮದ್ ಹನೀಫ್ ನಿಧನ
Update: 2022-04-06 16:07 IST
ಮಂಗಳೂರು: ಮೂಡುಬಿದಿರೆ ಸಮೀಪದ ಸಚ್ಚರಿಪೇಟೆ ನಿವಾಸಿ, ಉದ್ಯಮಿ ಮುಹಮ್ಮದ್ ಹನೀಫ್ (54) ಬುಧವಾರ ಮಧ್ಯಾಹ್ನ ನಗರದ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು.
ಮೃತರು ಲೇಖಕಿ, ಶಿಕ್ಷಕಿಯೂ ಆಗಿರುವ ಪತ್ನಿ ರೈಹಾನಾ ವಿ.ಕೆ. ಸಚ್ಚರಿಪೇಟೆ ಮತ್ತು ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿ ಮತ್ತು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಜಮಾಅತೆ ಇಸ್ಲಾಮೀ ಹಿಂದ್‌ನ ಮೂಡುಬಿದಿರೆ ಮುತ್ತಫಿಕ್ ವರ್ತುಲದ ಕಾರ್ಯದರ್ಶಿಯಾಗಿದ್ದ ಇವರು ಸಮಾಜ ಸೇವಕರಾಗಿಯೂ ಗುರುತಿಸಿಕೊಂಡಿದ್ದರು. ಹಲವು ವರ್ಷಗಳ ಕಾಲ ಗಲ್ಫ್ ರಾಷ್ಟ್ರದಲ್ಲಿ ದುಡಿದು ಬಳಿಕ ಊರಲ್ಲಿ ಉದ್ಯಮಿಯಾಗಿದ್ದರು. ಪರೋಪಕಾರಿ ಸ್ವಭಾವದ, ಸರಳ ಸಜ್ಜನ ವ್ಯಕ್ತಿತ್ವದವರಾಗಿದ್ದರು.
ನಗರದ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ರಾತ್ರಿಯಷ್ಟೇ ಬೆನ್ನುಮೂಳೆ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಬುಧವಾರ ಮಧ್ಯಾಹ್ನ ಹೃದಯಾಘಾತದಿಂದ ಕೊನೆಯುಸಿರೆಳೆದರು.
ಮೃತರ ಅಂತ್ಯಕ್ರಿಯೆಯು ಸಚ್ಚರಿಪೇಟೆಯಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.