×
Ad

ಉಡುಪಿ: ದೇವರ ದಾಸಿಮಯ್ಯ ಜಯಂತಿ ಆಚರಣೆ

Update: 2022-04-06 20:26 IST

ಉಡುಪಿ, ಎ.೬: ‘ಮಠದೊಳಗಣ ಬೆಕ್ಕು ಇಲಿಯ ಕಂಡು ಪುಟನೆಗೆದಂತಾ ಯಿತು ಕಾಣಾ ರಾಮನಾಥ’ ಎಂಬ ಜೇಡರ ದಾಸಿಮಯ್ಯರ ವಚನದಂತೆ ಮಾನವನು ಅರಿಷಡ್ವರ್ಗಗಳ ಆಸೆಗೆ ಒಳಗಾದರೆ ಹೀನ ಸ್ಥಿತಿಗೆ ತಲುಪುತ್ತಾನೆ ಎಂದು ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್ ಹೇಳಿದ್ದಾರೆ. 

ಇಂದು ಮಣಿಪಾಲದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಜಂಟಿ ಆಶ್ರಯದಲ್ಲಿ ಆಯೋಜಿಸಿದ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ವಚನಕಾರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.

ದೇವರ ದಾಸಿಮಯ್ಯ ಪ್ರಪ್ರಥಮ ವಚನಕಾರರಾಗಿದ್ದು, ವಿಶ್ವ ಸಾಹಿತ್ಯಕ್ಕೆ ಅವರು ನೀಡಿದ ಕೊಡುಗೆ ಅಪಾರವಾದದ್ದು. ಡಂಭಾಚಾರದ ಭಕ್ತಿಯನ್ನು ಬಿಟ್ಟು, ಅರಿಷಡ್ವರ್ಗಗಳ ಆಸೆಗಳನ್ನು ತ್ಯಜಿಸಿ, ಸತ್ಯ ದಾರಿಯಲ್ಲಿ ನಡೆಯುವುದು ಮುಖ್ಯ ಎಂದು ಅವರು ತಿಳಿಸಿದ್ದಾ. ಅಂಧಕಾರದಿಂದ ಅಜ್ಞಾನದ ಕಡೆಗೆ ಅಂದಿನ ಶತಮಾನದಲ್ಲಿಯೇ ಹೋರಾಡಿದ ಹಿರಿಮೆ ದೇವರ ದಾಸಿಮಯ್ಯ ರದ್ದಾಗಿದೆ ಎಂದು ವೀಣಾ ಹೇಳಿದರು.

ಕಾರ್ಯಕ್ರಮದಲ್ಲಿ ಜೇಡರ ದಾಸಿಮಯ್ಯರ ಬಗ್ಗೆ ಗಿರೀಶ್ ಶೆಟ್ಟಿಗಾರ್ ಉಪನ್ಯಾಸ ನೀಡಿದರು. ನಗರಸಭಾ ಸದಸ್ಯ ಮಂಜುನಾಥ್ ಶೆಟ್ಟಿಗಾರ್ ಹಾಗೂ ಮಣಿಪಾಲದ ಜಯರಾಂ ಶೆಟ್ಟಿಗಾರ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಎಎಸ್ಪಿ ಸಿದ್ದಲಿಂಗಪ್ಪ, ಡಿವೈಎಸ್ಪಿ ಸುಧಾಕರ ನಾಯ್ಕ್, ಜಿಲ್ಲೆಯ ಎಲ್ಲಾ ಇಲಾಖೆಗಳ ಮುಖ್ಯಸ್ಥರು, ನೇಕಾರ ಸಮಾಜದ ಮುಖಂಡರು ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು. 

ಜಿಲ್ಲಾ ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News