×
Ad

ಮಲ್ಪೆ: ಪ್ರವಾಸಕ್ಕೆ ಬಂದಿದ್ದ ಕೇರಳದ ಮೂವರು ವಿದ್ಯಾರ್ಥಿಗಳು ಸಮುದ್ರದಲ್ಲಿ ಮುಳುಗಿ ಮೃತ್ಯು

Update: 2022-04-07 15:49 IST

ಉಡುಪಿ : ಪ್ರವಾಸಕ್ಕೆಂದು ಬಂದಿದ್ದ ಕೇರಳದ ಇಂಜಿನಿಯರಿಂಗ್ ಕಾಲೇಜೊಂದರ ಮೂವರು ವಿದ್ಯಾರ್ಥಿಗಳು ಮಲ್ಪೆ ಸೈಂಟ್ ಮೇರಿಸ್ ದ್ವೀಪದಲ್ಲಿ ಭಾರೀ ಅಲೆಗೆ ಸಿಲುಕಿ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ದುರಂತ ಘಟನೆ ಇಂದು ಅಪರಾಹ್ನ ೧:೧೫ರ ಸುಮಾರಿಗೆ ನಡೆದಿದೆ. 

ಮೃತರನ್ನು ಕೊನೆಯ ವರ್ಷದ ಕಂಪ್ಯೂಟರ್ ಸಾಯನ್ಸ್ ವಿಭಾಗದ ವಿದ್ಯಾರ್ಥಿಗಳಾದ ಅಮಲ್ ಸಿ.ಅನಿಲ್ (೨೨), ಅಲೆನ್ ರೇಜಿ (೨೧) ಹಾಗೂ ಆ್ಯಂಟನಿ ಶಿನಾಯ್ (೨೧) ಎಂದು ಗುರುತಿಸಲಾಗಿದೆ. ಇವರಲ್ಲಿ ಅಮಲ್ ಹಾಗೂ ಅಲೆನ್ ಅವರ ಮೃತದೇಹ ಕೆಲವೇ ಹೊತ್ತಿನಲ್ಲಿ ಪತ್ತೆಯಾದರೆ, ಆ್ಯಂಟನಿ ಅವರ ಮೃತದೇಹ ಸಂಜೆ ವೇಳೆಗೆ ಸಿಕ್ಕಿದೆ ಎಂದು ಮಲ್ಪೆ ಪೊಲೀಸರು ತಿಳಿಸಿದ್ದಾರೆ.

ಕೇರಳದ ಕೊಟ್ಟಾಯಂನ ಮಂಗಳಂ ಇಂಜಿನಿಯರಿಂಗ್ ಕಾಲೇಜಿನ  ೭೭ ಮಂದಿ ಇಂಜಿನಿಯರಿಂಗ್ ವಿದ್ಯಾರ್ಥಿಗಳೊಂದಿಗೆ ನಾಲ್ವರು ಉಪನ್ಯಾಸಕರು ಉಡುಪಿ, ಮಡಿಕೇರಿ ಹಾಗೂ ವಯನಾಡು ಪ್ರವಾಸಕ್ಕೆಂದು ನಿನ್ನೆ ಕೊಟ್ಟಾಯಂನಿಂದ ಹೊರಟಿದ್ದರು. ಇವರೆಲ್ಲ ಇಂದು ಅಪರಾಹ್ನ ೧೨:೦೦ಗಂಟೆಗೆ ಮಲ್ಪೆ ಬೀಚ್‌ಗೆ ಆಗಮಿಸಿದ್ದು, ಬಳಿಕ ಅಲ್ಲಿಂದ ಸೈಂಟ್ ಮೇರೀಸ್ ದ್ವೀಪಕ್ಕೆ ತೆರಳಿದ್ದರು.

ಸೈಂಟ್ ಮೇರೀಸ್ ದ್ವೀಪದಲ್ಲಿ ಎಲ್ಲರೂ ನೀರಿನಲ್ಲಿ ಆಟವಾಡುತಿದ್ದಾಗ, ಪಕ್ಕದಲ್ಲೇ ಬಂಡೆಯೊಂದರ ಮೇಲೆ ನಿಂತಿದ್ದ ಮೂವರಿಗೆ ಹಠಾತ್ತನೇ ದೊಡ್ಡ ಅಲೆಯೊಂದು ಬಂದು ಬಡಿಯಿತೆನ್ನಲಾಗಿದೆ. ಅಲೆ ಹಠಾತ್ತನೇ ಅಪ್ಪಳಿಸಿದ್ದರಿಂದ ಆಯ ತಪ್ಪಿದ ಮೂವರು ಕಾಣಕಾಣುತಿದ್ದಂತೆ ಅಲೆಯೊಂದಿಗೆ ಕೊಚ್ಚಿಕೊಂಡು ಹೋಗಿದ್ದು, ಸಮುದ್ರದಲ್ಲಿ ಮುಳುಗಿ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

ಮೂವರು ವಿದ್ಯಾರ್ಥಿಗಳು ಸೆಲ್ಫಿ ತೆಗೆಯಲೆಂದು ಈ ಬಂಡೆಯನ್ನೇರಿದ್ದು, ಆಗ ಅಲೆ ಅಪ್ಪಳಿಸಿ ಒಬ್ಬ ವಿದ್ಯಾರ್ಥಿ ನೀರಿಗೆ ಬಿದ್ದಾಗ ಆತನನ್ನು ರಕ್ಷಿಸಲೆಂದು ಉಳಿದಿಬ್ಬರು ನೀರಿಗೆ ಹಾರಿದ್ದು ನೀರಿನ ರಭಸಕ್ಕೆ ಮೂವರೂ ಕೊಚ್ಚಿಕೊಂಡು ಹೋದರೆನ್ನಲಾಗಿದೆ. ಘಟನೆ ನಡೆದ ಪ್ರದೇಶದಲ್ಲಿ ಸಮುದ್ರ ಅತ್ಯಂತ ಅಪಾಯ ಕಾರಿಯಾಗಿದ್ದು, ಯಾರೂ ಅತ್ತ ತೆರಳದಂತೆ ಎಚ್ಚರಿಕೆ ನೋಟೀಸು ಹಾಕಲಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ಮೂವರು ಜೀವರಕ್ಷಕ ಪಡೆಯವರ ಕಣ್ಣು ತಪ್ಪಿಸಿ ಅತ್ತ ಕಡೆ ಹೋಗಿದ್ದರೆಂದು ಹೇಳಲಾಗಿದೆ.

ಇದೀಗ ಮೃತ ವಿದ್ಯಾರ್ಥಿಗಳ ಪೋಸ್ಟ್‌ಮಾರ್ಟಂಗಾಗಿ ಹೆತ್ತವರನ್ನು ಕಾಯಲಾ ಗುತ್ತಿದ್ದು, ಮಾಹಿತಿ ಪಡೆದ ಅವರು ಮಲ್ಪೆಯತ್ತ ಹೊರಟಿದ್ದಾರೆ ಎಂದು ತಿಳಿದುಬಂದಿದೆ. ಪ್ರವಾಸಕ್ಕೆ ಬಂದ ಬಹುಪಾಲು ವಿದ್ಯಾರ್ಥಿಗಳು ಇದೀಗ ಊರಿಗೆ ಮರಳಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News