ಆನ್‍ಲೈನ್ ಮೂಲಕ ಸಾಹಿತಿ, ಕಲಾವಿದರ ದತ್ತಾಂಶ ಸಂಗ್ರಹಣೆ

Update: 2022-04-07 17:33 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ. 7: ಕನ್ನಡ ಮತ್ತು ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಕಲಾವಿದರ ದತ್ತಾಂಶ ಸಂಗ್ರಹವನ್ನು ಆನ್‍ಲೈನ್ ಮೂಲಕ ನೋಂದಾಯಿಸುವ ಯೋಜನೆಯನ್ನು ಲೋಕಾರ್ಪಣೆ ಮಾಡಲಾಗಿದ್ದು, ಜಿಲ್ಲಾ ವ್ಯಾಪ್ತಿಯ ಸಾಹಿತಿಗಳು ಕಲಾವಿದರುಗಳು ‘ಸೇವಾಸಿಂಧು' ಪೋರ್ಟಲ್ http://svasindhu.karnataka.gov.in ರ ಮೂಲಕ ತಮ್ಮ ಮಾಹಿತಿಗಳನ್ನು ನೋಂದಾಯಿಸಿಕೊಳ್ಳಬೇಕು ಎಂದು ಕೋರಲಾಗಿದೆ.

ಕಲಾವಿದರು ನೋಂದಣಿಗಾಗಿ ಸೇವಾಸಿಂದು ಮೂಲಕ ನಿಗದಿತ ಅರ್ಜಿಯನ್ನು ಆನ್‍ಲೈನ್ ಮೂಲಕ ಭರ್ತಿ ಮಾಡುವುದು. ಕನಿಷ್ಠ ವಯೋಮಿತಿ 8 ವರ್ಷಗಳಿದ್ದು, ಕಲಾಕ್ಷೇತ್ರದಲ್ಲಿ 5 ವರ್ಷಗಳ ಕಲಾ ಸೇವೆ ಸಲ್ಲಿಸಿರಬೇಕು. ಸಾಹಿತಿಗಳು ಕನಿಷ್ಠ ಒಂದು ಪುಸ್ತಕ ಪ್ರಕಟಿಸಿರಬೇಕು. ಚಿತ್ರ/ಶಿಲ್ಪ ಕಲಾವಿದರು ಕನಿಷ್ಠ 5 ಕಲಾಕೃತಿ ರಚಿಸಿರಬೇಕು.

ಅರ್ಜಿದಾರರು ತಾವು ಇರುವ ಸ್ಥಳದಲ್ಲೇ ಮೊಬೈಲ್, ಟ್ಯಾಬ್, ಗಣಕಯಂತ್ರ ಅಥವಾ ಲ್ಯಾಪ್‍ಟಾಪ್ ಮುಖಾಂತರ ನೋಂದಣಿ ಮಾಡಿಕೊಳ್ಳತಕ್ಕದ್ದು. ಗ್ರಾಮೀಣ ಪ್ರದೇಶದವರು ನಾಗರಿಕ ಸೇವಾ ಕೇಂದ್ರದ ಮೂಲಕ ನೋಂದಣಿ ಮಾಡಿಕೊಳ್ಳತಕ್ಕದ್ದು. ಅರ್ಜಿ ತುಂಬುವ ಪ್ರಕ್ರಿಯೆಯು ಸರಳವಾಗಿದ್ದು, ಕೆಲವು ಅಂಶಗಳನ್ನು ಹೊರತುಪಡಿಸಿ ಉಳಿದ ಅಂಶಗಳು ಬಹು ಆಯ್ಕೆ ಮೂಲಕ ತುಂಬಬಹುದಾಗಿದೆ. ಅರ್ಜಿಯಲ್ಲಿ ತಮ್ಮ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಆಧಾರ್ ಕಾರ್ಡ್ ಸಂಖ್ಯೆ, ಬ್ಯಾಂಕ್ ವಿವರಗಳನ್ನು ಸ್ಪಷ್ಟವಾಗಿ ನಮೂದಿಸಬೇಕು.

ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಮಾಸಾಶನ ಪಡೆಯುತ್ತಿರುವವರೂ ಸೇರಿದಂತೆ ಎಲ್ಲಾ ಕಲಾವಿದರೂ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಅರ್ಜಿ ತುಂಬುವಾಗ ಕೇಳಲಾದ ದಾಖಲೆಗಳನ್ನು ಹಾಗೂ ಪ್ರಮಾಣ ಪತ್ರಗಳು, ಫೋಟೋಗಳು ಸೇರಿದಂತೆ ಕಡಿಮೆ ಮೆಗಾಬೈಟ್(200MB) ಇರುವಂತೆ ನೋಡಿಕೊಳ್ಳಬೇಕಾಗುತ್ತದೆ. ಇದು ಅಪ್‍ಲೋಡ್ ಮಾಡಲು ಅನುಕೂಲವಾಗುತ್ತದೆ. ಕಲಾವಿದರು ಇತ್ತೀಚೆಗೆ ಪ್ರದರ್ಶಿಸಿದ ಕಾರ್ಯಕ್ರಮ, ಚಿತ್ರೀಕರಿಸಿದ ವಿಡಿಯೋ ಲಿಂಕ್ ನಮೂದಿಸಬೇಕಾಗುತ್ತದೆ(ಯೂಟ್ಯೂಬ್, ಗೂಗಲ್ ಡ್ರೈವ್ ಇತ್ಯಾದಿ). ಸ್ಪೀಕೃತಗೊಂಡ ಅರ್ಜಿ ಪರಿಶೀಲಿಸಿ ಸಮಿತಿಯ ಮುಂದೆ ಬಂದಾಗ ಹೆಚ್ಚಿನ ದಾಖಲೆಗಳು/ಮಾಹಿತಿಗಳು/ ಪುರಾವೆಗಳ ಅವಶ್ಯಕತೆ ಕಂಡುಬಂದಲ್ಲಿ ಕಲಾವಿದರನ್ನು ಸಂದರ್ಶಿಸಬೇಕಾಗಿರುವುದರಿಂದ ಆಧಾರ್ ಕಾರ್ಡ್‍ನಲ್ಲಿ ನಮೂದಾಗಿರುವ ಮೊಬೈಲ್ ಸಂಖ್ಯೆಯನ್ನೇ ನೀಡುವುದು. ಅರ್ಜಿಯ ಪರಿಶೀಲನೆಗೆ ಓಟಿಪಿ ತಾವು ನೀಡಿರುವ ಮೊಬೈಲ್ ದೂರವಾಣಿಗೆ ಬರುವುದರಿಂದ ಅದನ್ನು ಅಧಿಕೃತ ಮೊಬೈಲ್‍ಫೋನ್ ಸಂಖ್ಯೆ ಎಂದು ಪರಿಗಣಿಸಲಾಗುವುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News