ಉತ್ತರ ಪ್ರದೇಶ: ಮುಸ್ಲಿಂ ಮಹಿಳೆಯರನ್ನು ಅಪಹರಿಸಿ, ಅತ್ಯಾಚಾರಗೈಯ್ಯುವ ಬೆದರಿಕೆಯೊಡ್ಡಿದ ಕೇಸರಿ ವಸ್ತ್ರಧಾರಿ!

Update: 2022-04-08 06:04 GMT
Photo: Twitter/@zoo_bear

ಲಕ್ನೋ: ಉತ್ತರ ಪ್ರದೇಶದ ಸೀತಾಪುರ್ ಜಿಲ್ಲೆಯ ಮಸೀದಿಯೊಂದರ ಹೊರಗೆ ಜನರನ್ನುದ್ದೇಶಿಸಿ ಮಾತನಾಡುವ ವೇಳೆ ಕೇಸರಿ ವಸ್ತ್ರಧಾರಿ ಮಹಂತ್ ಒಬ್ಬ ಮುಸ್ಲಿಂ ಮಹಿಳೆಯರಿಗೆ ಅಪಹರಣ ಮತ್ತು ಅತ್ಯಾಚಾರದ ಬೆದರಿಕೆಯೊಡ್ಡಿದ್ದಾನೆನ್ನಲಾಗಿದ್ದು ಈ ಕುರಿತಾದ ವೀಡಿಯೋವೊಂದನ್ನು ಉತ್ತರ ಪ್ರದೇಶ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವೀಡಿಯೋದಲ್ಲಿ ಖೈರಾಬಾದ್ ಪಟ್ಟಣದ ಮಹಂತ್ ಎನ್ನಲಾದ ಈ ವ್ಯಕ್ತಿ ಜೀಪಿನೊಳಗೆ ಕುಳಿತುಕೊಂಡು ಮೈಕ್ರೋಫೋನ್ ಬಳಸಿ ಮಾತನಾಡುತ್ತಿರುವುದು ಹಾಗೂ ಆತನ  ಹಿಂದೆ ಪೊಲೀಸ್ ಸಮವಸ್ತ್ರಧಾರಿಯೊಬ್ಬ ನಿಂತಿರುವುದು ಕಾಣಿಸುತ್ತದೆ. ಆತ ಪ್ರಚೋದನಾತ್ಮಕ ಭಾಷಣಗಳನ್ನು ಮಾಡುತ್ತಿರುವಂತೆಯೇ ನೆರೆದ ಜನರು 'ಜೈ ಶ್ರೀ ರಾಮ್' ಘೋಷಣೆಗಳನ್ನು ಕೂಗುವುದು ಕೇಳಿಸುತ್ತದೆ.

ತನ್ನ ಹತ್ಯೆಗೆ ಸಂಚು ನಡೆದಿದೆ ಎಂದು ಆರೋಪಿಸಿದ ಆತ ಅದಕ್ಕಾಗಿ ರೂ. 28 ಲಕ್ಷ ಸಂಗ್ರಹಿಸಲಾಗಿದೆ ಎಂದೂ ಹೇಳಿಕೊಳ್ಳುತ್ತಾನೆ. ಪ್ರದೇಶದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ಯಾವುದೇ ಹುಡುಗಿಗೆ ಕಿರುಕುಳ ನೀಡಿದರೆ ತಾನು ಮುಸ್ಲಿಂ ಮಹಿಳೆಯರನ್ನು ಅಪಹರಿಸಿ ಸಾರ್ವಜನಿಕವಾಗಿ ಅವರ ಮೇಲೆ ಅತ್ಯಾಚಾರಗೈಯ್ಯುವುದಾಗಿ ಆತ ಹೇಳಿದಾಗ ನೆರೆದಿದ್ದ ಜನರು ಜೋರಾಗಿ ಚಪ್ಪಾಳೆ ತಟ್ಟುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಈ ವೀಡಿಯೋವನ್ನು ಎಪ್ರಿಲ್ 2ರಂದು ಚಿತ್ರೀಕರಿಸಲಾಗಿದೆಯಾದರೂ ಐದು ದಿನಗಳಾದರೂ ಪೊಲೀಸರು ಕ್ರಮಕೈಗೊಂಡಿಲ್ಲ ಎಂದು ಆಲ್ಟ್ ನ್ಯೂಸ್ ಸಹಸ್ಥಾಪಕ ಮುಹಮ್ಮದ್ ಝುಬೈರ್ ವೀಡಿಯೋ ಶೇರ್ ಮಾಡಿ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಸೀತಾಪುರ ಪೊಲೀಸರು, ಪ್ರಕರಣದ ತನಿಖೆ ನಡೆಯುತ್ತಿದೆ ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದಿದ್ದಾರೆ.

ಈ ವೀಡಿಯೋದಲ್ಲಿ ಕಾಣಿಸುವ ಹಾಗೂ `ಬಜರಂಗ್ ಮುನಿ' ಎಂದು ಕರೆಯಲ್ಪಟ್ಟುವ ವ್ಯಕ್ತಿಯ ಮೇಲೆ ಕ್ರಮಕೈಗೊಳ್ಳಬೇಕೆಂಬ ವ್ಯಾಪಕ ಆಗ್ರಹ ಸಾಮಾಜಿಕ ಜಾಲತಾಣಿಗರಿಂದ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News