ಅಮೆರಿಕ ಸುಪ್ರೀಂಕೋರ್ಟ್ ಗೆ ಪ್ರಥಮ ಕಪ್ಪು ವರ್ಣೀಯ ಮಹಿಳಾ ನ್ಯಾಯಾಧೀಶರ ನೇಮಕ
ವಾಷಿಂಗ್ಟನ್, ಎ.8: ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ಕೆತಾಂಜಿ ಬ್ರೌನ್ ಜಾಕ್ಸನ್ ಅವರನ್ನು ನಾಮನಿರ್ದೇಶನಗೊಳಿಸುವ ಪ್ರಸ್ತಾವನೆಗೆ ಅಮೆರಿಕದ ಸೆನೆಟ್ ಗುರುವಾರ ಅನುಮೋದನೆ ನೀಡಿದ್ದು, ಜಾಕ್ಸನ್ ಅವರು ಅಮೆರಿಕದ ಸುಪ್ರೀಂಕೋರ್ಟ್ ನ್ಯಾಯಾಧೀಶ ಹುದ್ದೆಗೇರಿದ ಪ್ರಪ್ರಥಮ ಕಪ್ಪು ವರ್ಣೀಯ ಮಹಿಳೆಯಾಗಲಿದ್ದಾರೆ ಎಂದು ರಾಯ್ಟರ್ಸ್ ವರದಿ ಮಾಡಿದೆ.
ಸೆನೆಟ್ನ 53 ಸದಸ್ಯರು ಜಾಕ್ಸನ್ ಪರ ಮತ್ತು 47 ಸದಸ್ಯರು ವಿರೋಧವಾಗಿ ಮತ ಚಲಾಯಿಸಿದರು. 100 ಸದಸ್ಯಬಲದ ಸೆನೆಟ್ನಲ್ಲಿ ಆಡಳಿತ ಮತ್ತು ಪ್ರತಿಪಕ್ಷ ತಲಾ 50 ಸದಸ್ಯರನ್ನು ಹೊಂದಿವೆ. ಗುರುವಾರದ ಮತದಾನದ ಸಂದರ್ಭ ರಿಪಬ್ಲಿಕನ್ ಪಕ್ಷದ 3 ಸದಸ್ಯರು ಪಕ್ಷದ ಸೂಚನೆಯನ್ನು ಮೀರಿ ಜಾಕ್ಸನ್ ಪರ ಮತ ಚಲಾಯಿಸಿದರು. ಜೂನ್ನಲ್ಲಿ ನಿವೃತ್ತರಾಗಲಿರುವ ಸ್ಟೀಫನ್ ಬ್ರೆಯರ್ ಅವರ ಸ್ಥಾನವನ್ನು ಜಾಕ್ಸನ್ ತುಂಬಲಿದ್ದಾರೆ.
ಜಾಕ್ಸನ್ ಅವರ ಹೆಸರನ್ನು ನಾಮನಿರ್ದೇಶನ ಮಾಡಿದ್ದ ಅಧ್ಯಕ್ಷ ಜೋ ಬೈಡನ್, ಇದು ಅಮೆರಿಕಕ್ಕೆ ಐತಿಹಾಸಿಕ ಕ್ಷಣವಾಗಿದೆ . ನಮ್ಮ ಉಚ್ಛ ನ್ಯಾಯಾಲಯವು ಅಮೆರಿಕದ ವಿಭಿನ್ನತೆಯನ್ನು ಪ್ರತಿಬಿಂಬಿಸುವತ್ತ ಮತ್ತೊಂದು ಹೆಜ್ಜೆ ಇಟ್ಟಿದ್ದೇವೆ ಎಂದರು. ಅಧ್ಯಕ್ಷೀಯ ಹುದ್ದೆಯ ಚುನಾವಣೆಯ ಪ್ರಚಾರದ ಸಂದರ್ಭ ಕಪ್ಪು ವರ್ಣೀಯ ಮಹಿಳೆಯನ್ನು ಸುಪ್ರೀಂಕೋರ್ಟ್ ನ್ಯಾಯಾಧೀಶೆಯಾಗಿ ನೇಮಿಸುವ ಆಶ್ವಾಸನೆಯನ್ನು ಬೈಡನ್ ನೀಡಿದ್ದರು. ಆದರೆ ರಿಪಬ್ಲಿಕನ್ ಮುಖಂಡರು ಜಾಕ್ಸನ್ ಅವರ ನ್ಯಾಯಾಂಗ ದಾಖಲೆಯನ್ನು ಪ್ರಶ್ನಿಸಿದ್ದಾರೆ. ಮಕ್ಕಳನ್ನು ಬಳಸಿಕೊಂಡ ಅಶ್ಲೀಲ ಪ್ರಕರಣಗಳಲ್ಲಿ ಜಾಕ್ಸನ್ ನೀಡಿದ ತೀರ್ಪು ಅತ್ಯಂತ ಮೃದುವಾಗಿದೆ ಎಂದು ರಿಪಬ್ಲಿಕನ್ ಸಂಸದ ಮಿಚ್ ಮೆಕನೆಲ್ ಹೇಳಿದ್ದಾರೆ.