ಉತ್ತರಪ್ರದೇಶ:‌ ನಾಪತ್ತೆಯಾಗಿದ್ದ ಬಾಲಕಿಯ ಶವ ಆಸಾರಾಮ್ ಬಾಪು ಆಶ್ರಮದಲ್ಲಿ ಪತ್ತೆ

Update: 2022-04-08 18:03 GMT
PHOTO COURTESY:TWITTER

ಗೊಂಡಾ (ಉ.ಪ್ರ),ಎ.8: ನಾಪತ್ತೆಯಾಗಿದ್ದ 13ರ ಹರೆಯದ ಬಾಲಕಿಯ ಶವವು ಸ್ವಘೋಷಿತ ದೇವಮಾನವ ಆಸಾರಾಮ ಬಾಪು ಶಿಷ್ಯರು ಇಲ್ಲಿ ನಿರ್ಮಿಸಿರುವ ಆಶ್ರಮದ ಹೊರಗೆ ನಿಲ್ಲಿಸಲಾಗಿದ್ದ ಕಾರಿನಲ್ಲಿ ಶುಕ್ರವಾರ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಿವೌರ್ ಗ್ರಾಮದ ನಿವಾಸಿಯಾಗಿದ್ದ ಬಾಲಕಿ ಗುರುವಾರದಿಂದ ಕಾಣೆಯಾಗಿದ್ದಳು. ಬಾಲಕಿಯ ಕುಟುಂಬವು ದೂರನ್ನು ಸಲ್ಲಿಸಿದ ಬಳಿಕ ತನಿಖೆಗಾಗಿ ತಂಡವೊಂದನ್ನು ನಿಯೋಜಿಸಲಾಗಿತ್ತು ಎಂದು ತಿಳಿಸಿದ ಹೆಚ್ಚುವರಿ ಎಸ್ಪಿ ಶಿವರಾಜ ಪ್ರಜಾಪತಿ,ಬಳಿಕ ಬಹರೈಚ್ ರಸ್ತೆಯಲ್ಲಿರುವ ಆಶ್ರಮದ ಹೊರಗೆ ನಿಲ್ಲಿಸಲಾಗಿದ್ದ ಕಾರಿನಲ್ಲಿ ಬಾಲಕಿಯ ಮೃತದೇಹವು ಪತ್ತೆಯಾಗಿದೆ. ಆಸಾರಾಮ ಬಾಪು ಬೆಂಬಲಿಗರು ಈ ಆಶ್ರಮವನ್ನು ನಿರ್ಮಿಸಿದ್ದಾರೆ ಎಂದು ಹೇಳಿದರು. ಮೃತ ಬಾಲಕಿಯ ತಂದೆ ಮೂರು ವರ್ಷಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದು,ಈವರೆಗೆ ಆತನ ಇರುವಿಕೆಯ ಬಗ್ಗೆ ಮಾಹಿತಿಗಳು ಲಭ್ಯವಾಗಿಲ್ಲ ಎಂದು ಸ್ಥಳೀಯ ಪೊಲೀಸರು ತಿಳಿಸಿದರು.
ಮೃತ ಬಾಲಕಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಆಶ್ರಮದ ಕೆಲವರನ್ನು ವಶಕ್ಕೆ ತೆಗೆದುಕೊಂಡು ಪ್ರಶ್ನಿಸಲಾಗುತ್ತಿದೆ ಎಂದು ಪ್ರಜಾಪತಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News