×
Ad

ಸಾಮಾಜಿಕ ಸಮಸ್ಯೆಗಳಿಗೆ ವಕೀಲರ ಸ್ಪಂದನ ಅಗತ್ಯ: ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣ ಭಟ್

Update: 2022-04-09 15:01 IST

ಮಂಗಳೂರು, ಎ.9: ದೇಶದ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದ ವಕೀಲರ ಪಾತ್ರ ಹಿರಿದಾಗಿದ್ದು, ಪ್ರಸಕ್ತ ಸಮಾಜದಲ್ಲಿನ ಸಮಸ್ಯೆಗಳಿಗೂ ವಕೀಲರು ಸ್ಪಂದಿಸುವ ಮೂಲಕ ತಮ್ಮ ಕರ್ತವ್ಯ ನಿರ್ವಹಿಸಬೇಕು ಎಂದು ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಪಿ.ಕೃಷ್ಣ ಭಟ್ ಕರೆ ನೀಡಿದ್ದಾರೆ.

ನಗರದ ಎಸ್‌ಡಿಎಂ ಕಾನೂನು ಕಾಲೇಜಿನ ಸಭಾಂಗಣದಲ್ಲಿ ಇಂದು ಅಧಿವಕ್ತಾ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ವಿಭಾಗ, ಎಸ್‌ಡಿಎಂ ಕಾನೂನು ಕಾಲೇಜಿನ ಕಾನೂನು ಸೇವಾ ಘಟಕದ ಆಶ್ರಯದಲ್ಲಿ ಹಮ್ಮಿಕೊಳ್ಳಲಾದ ಕಾನೂನು ಕಾರ್ಯಾಗಾರವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಸ್ವಾತಂತ್ರ್ಯ ಹೋರಾಟದಲ್ಲಿ ವಕೀಲರಾಗಿದ್ದ ಮಹಾತ್ಮ ಗಾಂಧೀಜಿ, ಸರ್ದಾರ್ ವಲ್ಲಭ ಬಾಯಿ, ಮೋತಿಲಾಲ್ ನೆಹರೂ, ಜವಾಹರ ಲಾಲ್ ನೆಹರೂ ಸೇರಿದಂತೆ ಅನೇಕ ವಕೀಲರು ಮುಂಚೂಣಿಯಲ್ಲಿದ್ದರು. ಅಂತಹ ಘನತೆಯ ವೃತ್ತಿಯನ್ನು ಮಾಡುತ್ತಿರುವ ಇಂದಿನ ಯುವ ವಕೀಲರು ಕೂಡಾ ಸಮಾಜದಲ್ಲಿನ ಎಲ್ಲಾ ರೀತಿಯ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳುವತ್ತ ಗಮನಹರಿಸಬೇಕು ಎಂದರು.

ವಕೀಲನಾಗಿ, ನ್ಯಾಯಾಧೀಶನಾಗಿ ತಾವು ನೋಡಿದ, ಸ್ಪಂದಿಸಿದ ಹಲವು ಸಾಮಾಜಿಕ ಕಳಕಳಿಯ ವಿಚಾರಗಳನ್ನು ಪ್ರಸ್ತಾಪಿಸಿ ಮಾತನಾಡಿದ ಅವರು, ಆಧುನಿಕ ವೈದ್ಯಕೀಯ ತಂತ್ರಜ್ಞಾನ ಬಳಕೆಯಲ್ಲಿನ ಅಪಾಯಗಳಿಂದ ಹಿಡಿದು ವೈವಾಹಿಕ ಸಂಬಂಧಗಳ ಪ್ರಕರಣಗಳನ್ನು ಇತ್ಯರ್ಥಪಡಿಸುವಲ್ಲಿಯೂ ಹೊಸ ವಿಧಾನಗಳನ್ನು ಅಳವಡಿಸಿಕೊಂಡು ಪರಿಹಾರ ಕಂಡುಕೊಳ್ಳಬೇಕು ಎಂದು ವಕೀಲರಿಗೆ ಸಲಹೆ ನೀಡಿದರು.

ಕಾನೂನುಗಳು ಎಷ್ಟಿದ್ದರೂ ಜನರ ಮನಸ್ಥಿತಿಯಲ್ಲಿ ಪರಿವರ್ತನೆ ಅತೀ ಅಗತ್ಯವಾಗಿದ್ದು, ಈ ಕುರಿತಂತೆ ವಕೀಲರು ಹೆಚ್ಚಿನ ಆಸಕ್ತಿ ವಹಿಸಿದಾಗ ಜಟಿಲವಾದ ಸಮಸ್ಯೆಗಳನ್ನು ಕೂಡಾ ಅತ್ಯಂತ ಸರಳವಾಗಿ ಬಗೆಹರಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ದ.ಕ. ಜಿಲ್ಲೆಯ ವಕೀಲರು ಇತರ ಜಿಲ್ಲೆಗಳಿಗೆ ದಾರಿದೀಪವಾಗಲಿ ಎಂದು ಅವರು ಹೇಳಿದರು.

ಅಧಿವಕ್ತಾ ಪರಿಷತ್‌ನ ರಾಜ್ಯ ಅಧ್ಯಕ್ಷ ರವೀಂದ್ರನಾಥ ಪಿ.ಎಸ್., ಮಂಗಳೂರು ಬಾರ್ ಅಸೋಸಿಯೇಶನ್ ಅಧ್ಯಕ್ಷ ನರಸಿಂಹ ಹೆಗ್ಡೆ, ಹಿರಿಯ ವಕೀಲರಾದ ಪುಷ್ಪಲತಾ, ಎಸ್‌ಡಿಎಂ ಕಾನೂನು ಕಾಲೇಜಿನ ಪ್ರಾಂಶುಪಾಲ ತಾರನಾಥ ಗಟ್ಟಿ ಉಪಸ್ಥಿತರಿದ್ದರು.

ಅಧಿವಕ್ತಾ ಪರಿಷತ್‌ನ ವಲಯ ಕಾರ್ಯದರ್ಶಿ ಎಲ್.ಎನ್. ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವಕೀಲ  ಗುರುಪ್ರಸಾದ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News