ಮಂಗಳೂರು: ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಮಹಿಳೆಗೆ ಕಾರು ಢಿಕ್ಕಿ
ಮಂಗಳೂರು : ಬಿಎಂಡಬ್ಲ್ಯು ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ಡಿವೈಡರ್ ದಾಟಿ ಸ್ಕೂಟರ್ ಮತ್ತು ಕಾರಿಗೆ ಡಿಕ್ಕಿ ಹೊಡೆದ ಘಟನೆ ಶನಿವಾರ ಮಧ್ಯಾಹ್ನ ನಗರದ ಎಂ.ಜಿ. ರಸ್ತೆಯ ಬಲ್ಲಾಳ್‌ಬಾಗ್ ಬಳಿ ನಡೆದಿದೆ.
ಈ ಅಪಘಾತದಿಂದ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಮಹಿಳೆ, ಕರಂಗಲ್ಪಾಡಿ ಅಪಾರ್ಟ್‌ಮೆಂಟ್ ನಿವಾಸಿ ಪ್ರೀತಿ ಮನೋಜ್ (೪೭) ಮತ್ತು ಕಾರಿನಲ್ಲಿದ್ದ ಬಾಲಕ ಅಮಯ್ ಜಯದೇವನ್ ಗಂಭೀರ ಗಾಯಗೊಂಡಿದ್ದು, ಇಬ್ಬರನ್ನೂ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿ ಕಾರು ಚಾಲಕ, ಮಣ್ಣಗುಡ್ಡ ನಿವಾಸಿ, ಇಂಟಿರಿಯರ್ ಡೆಕೋರೇಟರ್ ಶ್ರವಣ್ ಕುಮಾರ್ (30) ಎಂಬಾತನನ್ನು ಸಂಚಾರ ಪೊಲೀಸರು ಬಂಧಿಸಿದ್ದಾರೆ. ಅದಕ್ಕೂ ಮುನ್ನ ಆಕ್ರೋಶಗೊಂಡ ಸಾರ್ವಜನಿಕರು ಆರೋಪಿ ಶ್ರವಣ್ ಕುಮಾರ್‌ಗೆ ಹಲ್ಲೆಗೈದಿದ್ದಾರೆ.
ಘಟನೆಯ ವಿವರ: ಶನಿವಾರ ಮಧ್ಯಾಹ್ನ ಸುಮಾರು ೧:೨೦ಕ್ಕೆ ಅತೀ ವೇಗ ಅಜಾಗರೂಕತೆಯಿಂದ ಕೊಡಿಯಾಲ್‌ಬೈಲ್ ರಸ್ತೆಯಲ್ಲಿ (ಬೆಸೆಂಟ್ ಕಡೆಯಿಂದ) ಯೂಟರ್ನ್ ಹೊಡೆದು ಬಲ್ಲಾಳ್‌ಬಾಗ್‌ನತ್ತ ಶ್ರವಣ್ ಕುಮಾರ್ ಕಾರನ್ನು ಚಲಾಯಿಸಿಕೊಂಡು ಬಂದಿದ್ದಾನೆ. ಈ ಸಂದರ್ಭ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ದಾಟಿ ಮತ್ತೊಂದು ಮಗ್ಗುಲಲ್ಲಿ ಕರಂಗಲ್ಪಾಡಿಯ ತನ್ನ ಫ್ಲ್ಯಾಟ್‌ಗೆ ತೆರಳುತ್ತಿದ್ದ ಮಹಿಳೆಯ ದ್ವಿಚಕ್ರ ವಾಹನ ಮತ್ತು ಕಾರಿಗೆ ಢಿಕ್ಕಿ ಹೊಡೆದಿದೆ. ಕಾರಿನ ಹಿಂದೆಯೇ ಸ್ಕೂಟರೊಂದು ಬರುತ್ತಿದ್ದು, ಅದೂ ಕೂಡಾ ಕಾರಿಗೆ ಡಿಕ್ಕಿಯಾಗಿದೆ.
ಅಪಘಾತದ ರಭಸಕ್ಕೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಪ್ರೀತಿ ಮನೋಜ್ ಕಾರಿನಡಿಗೆ ಬಿದ್ದು ಗಂಭೀರ ಗಾಯಗೊಂಡಿದ್ದಾರೆ. ಕಾರಿನಲ್ಲಿದ್ದ ಅಮಯ್ ಎಂಬ ಬಾಲಕನಿಗೆ ಅಲ್ಪಸ್ವಲ್ಪ ಗಾಯವಾಗಿದೆ.
ಕೋಡಿಯಾಲ್‌ಬೈಲ್ ರಸ್ತೆಯಲ್ಲಿ ತೆರಳುತ್ತಿದ್ದ ಕಾರು ಎಂಜಿ ರಸ್ತೆಯಲ್ಲಿ ಬಲಭಾಗಕ್ಕೆ ತಿರುಗಿ ವೇಗವಾಗಿ ಬಲ್ಲಾಳ್‌ಬಾಗ್‌ನತ್ತ ಚಲಿಸಿದೆ. ಅತಿವೇಗವೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ಅಪಘಾತವನ್ನು ಕಣ್ಣಾರೆ ಕಂಡ ಸಾರ್ವಜನಿಕರು ಆಕ್ರೋಶಗೊಂಡು ಕಾರು ಚಾಲಕನನ್ನು ತರಾಟೆಗೆ ತೆಗೆದು ಹಲ್ಲೆ ನಡೆಸಿದ್ದಾರೆ.
ಅಪಘಾತ ಮತ್ತು ಸಾರ್ವಜನಿಕರು ಆಕ್ರೋಶಗೊಂಡು ಹಲ್ಲೆ ನಡೆಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಗರದ ಪಶ್ಚಿಮ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.