ಮತಾಂತರಗೊಂಡವರ ಎಸ್ಸಿ ಸೌಲಭ್ಯಗಳನ್ನು ಸ್ಥಗಿತಗೊಳಿಸಿ: ಛಲವಾದಿ ನಾರಾಯಣ ಸ್ವಾಮಿ

Update: 2022-04-10 13:54 GMT

ಉಡುಪಿ, ಎ.10: ರಾಜ್ಯದಲ್ಲಿ ಪರಿಶಿಷ್ಟ ಜಾತಿಯವರೇ ಮತಾಂತರಕ್ಕೆ ಗುರಿಯಾಗುತ್ತಿದ್ದು, ಆದುದರಿಂದ ರಾಜ್ಯ ಸರಕಾರ ಕೂಡಲೇ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೆ ತರಬೇಕು. ಅಲ್ಲದೆ ಮತಾಂತರಗೊಂಡವರಿಗೆ ಪರಿಶಿಷ್ಟ ಜಾತಿ ಕೋಟಾದಲ್ಲಿ ಲಭಿಸುವ ಸೌಲಭ್ಯಗಳನ್ನು ಸ್ಥಗಿತಗೊಳಿಸಬೇಕು ಎಂದು ಬಿಜೆಪಿ ಎಸ್‌ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣ ಸ್ವಾಮಿ ಒತ್ತಾಯಿಸಿದ್ದಾರೆ.

ಕಡಿಯಾಳಿಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡತನ ದುರುಪಯೋಗಿಸಿಕೊಂಡು ಮತಾಂತರ ಮಾಡುವುದು ಸರಿಯಲ್ಲ. ಮತಾಂತರಗೊಂಡವರು ದಲಿತ ಕ್ರಿಶ್ಚಿಯನ್ ಆಗಿ ಇರುತ್ತಾರೆ. ಅದರ ಬದಲು ಹಿಂದೂ ಧರ್ಮದಲ್ಲೇ ಪರಿವರ್ತನೆ ತರಲು ಪ್ರಯತ್ನಿಸಬೇಕು ಎಂದು ಹೇಳಿದರು.

ಪರಿಶಿಷ್ಟ ಜಾತಿಯವರಿಗೆ ಕೇಂದ್ರ ಸರಕಾರ 59 ಸಾವಿರ ಕೋಟಿ ರೂ. ಮೀಸಲಿಟ್ಟಿದೆ. ಉದ್ಯೋಗಕ್ಕೆ ಶೇ.4ರ ಬಡ್ಡಿದರದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತದೆ. ಅಂಬೇಡ್ಕರ್ ಅವರಿಗೆ ಸಂಬಂಧಪಟ್ಟ 5 ಕ್ಷೇತ್ರಗಳನ್ನು ಪಂಚತೀರ್ಥ ಕ್ಷೇತ್ರವಾಗಿ ಅಭಿವೃದ್ಧಿ ಮಾಡಲಾಗಿದೆ. ರಾಜ್ಯ ಸರಕಾರ ಅಂಬೇಡ್ಕರ್ ಭೇಟಿ ನೀಡಿದ 7 ಜಿಲ್ಲೆಗಳ 10 ಸ್ಥಳಗಳನ್ನು ರಾಷ್ಟ್ರೀಯ ಸ್ಮಾರಕವಾಗಿ ಅಭಿವೃದ್ಧಿಪಡಿಸಿದೆ ಎಂದರು.

ವಿಧಾನಸೌಧ ಮತ್ತು ವಿಕಾಸ ಸೌಧ ಮಧ್ಯಭಾಗದಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಎ.14ರಂದು ಶಿಲಾನ್ಯಾಸ ನೆರವೇರಿಸಲಾಗುವುದು. ಬಿಜೆಪಿ ದಲಿತರ ಬಗ್ಗೆ ನೈಜ ಕಾಳಜಿ ಹೊಂದಿದ್ದು, ತಳಸಮುದಾಯದ ರಕ್ತಪಿಪಾಸುಗಳಿಗೆ ಕಾಂಗ್ರೆಸ್ ಕುಮ್ಮಕ್ಕು ನೀಡುತ್ತಿದೆ ಎಂದು ಅವರು ದೂರಿದರು.ಸುದ್ದಿಗೋಷ್ಠಿಯಲ್ಲಿ ಎಸ್‌ಸಿ ಮೋರ್ಚಾ ರಾಷ್ಟ್ರೀಯ ಕಾರ್ಯದರ್ಶಿ ಎಸ್. ಕುಮಾರ್, ಪ್ರಭಾರಿ ಸಿದ್ದರಾಜು, ಉಪಾಧ್ಯಕ್ಷ ನಂಜುಂಡಸ್ವಾಮಿ, ಪ್ರಧಾನ ಕಾರ್ಯದರ್ಶಿ ಜಗದೀಶ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News