ಬಿಹಾರದಲ್ಲಿ 60 ಅಡಿ ಉದ್ದದ ಕಬ್ಬಿಣದ ಸೇತುವೆಯನ್ನೇ ಕದ್ದ ಕಳ್ಳರು !

Update: 2022-04-10 16:56 GMT
photo:twitter

ಪಾಟ್ನಾ,ಎ.೧೦: ಬಿಹಾರದಲ್ಲಿ ೬೦ ಅಡಿ ಉದ್ದದ ಕಬ್ಬಿಣದ ಸೇತುವೆಯನ್ನು ಬಿಚ್ಚಿದ್ದ ಮತ್ತು ಅದರ ಭಾಗಗಳನ್ನು ಗುಜರಿ ಲೋಹವನ್ನಾಗಿ ಮಾರಾಟ ಮಾಡಿರಬಹುದಾದ ಗ್ಯಾಂಗಿನ ಸದಸ್ಯರ ಬಂಧನಕ್ಕಾಗಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ರವಿವಾರ ತಿಳಿಸಿದರು. ಪಾಟ್ನಾದಿಂದ ಸುಮಾರು 150 ಕಿ.ಮೀ.ದೂರದಲ್ಲಿರುವ ಅಮಿಯಾವರ್ ಗ್ರಾಮಕ್ಕೆ ನೀರಾವರಿ ಇಲಾಖೆಯ ಅಧಿಕಾರಿಗಳ ಸೋಗಿನಲ್ಲಿ ಬಂದಿದ್ದ ಖದೀಮರು ಬಳಕೆಯಲ್ಲಿರದಿದ್ದ ಸೇತುವೆಯನ್ನು ಕಳಚಲು ಗ್ಯಾಸ್ ಕಟರ್ಗಳು ಮತ್ತು ಅರ್ಥ್ ಮೂವಿಂಗ್ ಯಂತ್ರಗಳನ್ನು ಬಳಸಿದ್ದರು.

ಲೋಹದ ಗುಜರಿಗಳ ಮಾರಾಟ ಭಾರತದಲ್ಲಿ ಲಾಭದಾಯಕ ದಂಧೆಯಾಗಿದೆ. ಸಾರ್ವಜನಿಕ ಆಸ್ತಿಗಳಿಂದ ಲೋಹದ ಭಾಗಗಳನ್ನು ಕದ್ದು ತ್ವರಿತ ದುಡ್ಡಿಗಾಗಿ ಅಸಂಘಟಿತ ಗುಜರಿ ಯಾರ್ಡ್‌ಗಳಿಗೆ ಮಾರಾಟ ಮಾಡುವ ಪ್ರಕರಣಗಳು ಇಲ್ಲಿ ಸಾಮಾನ್ಯವಾಗಿವೆ.ಮೂರು ದಶಕಗಳ ಹಿಂದೆ ನೀರಾವರಿ ಕಾಲುವೆಯೊಂದರ ಮೇಲೆ ನಿರ್ಮಿಸಲಾಗಿದ್ದ ಹಳೆಯ ಸೇತುವೆಯು ಬಳಕೆಯಲ್ಲಿರಲಿಲ್ಲ,ಹೀಗಾಗಿ ಅದನ್ನು ಕಳಚಲು ಸರಕಾರಿ ಅಧಿಕಾರಿಗಳು ನಿರ್ಧರಿಸಿದ್ದಾರೆ ಎಂದು ಅಮಿಯಾವರ್ ನಿವಾಸಿಗಳು ಭಾವಿಸಿದ್ದರು ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.
ಸೇತುವೆಯನ್ನು ಕಳಚುವಂತೆ ಗ್ರಾಮಸ್ಥರು ಈ ಮೊದಲು ನೀರಾವರಿ ಇಲಾಖೆಗೆ ಅರ್ಜಿಯನ್ನು ಸಲ್ಲಿಸಿದ್ದರು ಎಂದು ನಿವಾಸಿಯೋರ್ವರು ತಿಳಿಸಿದರು.

ಭಾರೀ ಯಂತ್ರಗಳು ಮತ್ತು ಗ್ಯಾಸ್ ಕಟರ್‌ಗಳೊಂದಿಗೆ ಬಂದಿದ್ದ ಜನರು ಸೇತುವೆಯನ್ನು ಕಳಚಲು ಎರಡು ಹಗಲು ಶ್ರಮಿಸಿದ್ದರು ಎಂದು ಗ್ರಾಮಸ್ಥ ಗಾಂಧಿ ಚೌಧರಿ ಹೇಳಿದರು. ಕೆಲಸಗಾರರ ಗುರುತಿನ ಕುರಿತು ಸ್ಥಳೀಯರು ವಿಚಾರಿಸಿದ್ದರು ಮತ್ತು ತಮ್ಮನ್ನು ಸೇತುವೆಯನ್ನು ಕಳಚಲು ನೀರಾವರಿ ಇಲಾಖೆಯು ನಿಯೋಜಿಸಿದೆ ಎಂದು ಅವರಿಗೆ ತಿಳಿಸಲಾಗಿತ್ತು.
ಈ ವಾರದ ಪೂರ್ವಾರ್ಧದಲ್ಲಿ ಗುಜರಿ ಬಿಡಿಭಾಗಗಳನ್ನು ವಾಹನದಲ್ಲಿ ಸಾಗಿಸಿ ಸ್ಥಳವನ್ನು ತೆರವುಗೊಳಿಸಲಾಗಿತ್ತು.
‘ಗ್ಯಾಂಗಿನ ಕೆಲವು ಸದಸ್ಯರನ್ನು ನಾವು ಗುರುತಿಸಿದ್ದೇವೆ ಮತ್ತು ಕೆಲವರನ್ನು ಇನ್ನಷ್ಟೇ ಪತ್ತೆ ಹಚ್ಚಬೇಕಿದೆ. ಅವರು ಸಾರ್ವಜನಿಕ ಆಸ್ತಿಯನ್ನು ನಾಶಗೊಳಿಸಿದ್ದಾರೆ ಮತ್ತು ಸೇತುವೆಯನ್ನು ಕಳವು ಮಾಡಿದ್ದಾರೆ ’ ಎಂದು ಪ್ರಕರಣದ ತನಿಖೆಯನ್ನು ನಡೆಸುತ್ತಿರುವ ಪೊಲೀಸ ಅಧಿಕಾರಿ ಸುಭಾಷ ಕುಮಾರ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News