ಉತ್ತರ ಭಾರತೀಯರು ಕನ್ನಡ ಕಲಿಯಲಿ

Update: 2022-04-11 14:17 GMT

‘ಭಾರತೀಯರು ಪರಸ್ಪರ ಸಂವಹನಕ್ಕೆ ಇಂಗ್ಲಿಷ್ ಬದಲು ಹಿಂದಿಯನ್ನು ಬಳಸಿ’ ಎನ್ನುವ ಉಚಿತ ಸಲಹೆಯೊಂದನ್ನು ಮಾನ್ಯ ಗೃಹ ಸಚಿವ ಅಮಿತ್ ಶಾ ಅವರು ದೇಶವಾಸಿಗಳಿಗೆ ನೀಡಿದ್ದಾರೆ. ಅವರ ಪ್ರಕಾರ ಇಂದು ದೇಶದಲ್ಲಿ ಬೆಲೆಯೇರಿಕೆಯಾಗುತ್ತಿರುವುದು ಈ ಸಂವಹನದ ಕೊರತೆಯಿಂದ ಎಂದೇ ಯಾರಾದರೂ ಭಾವಿಸಬೇಕು. ಮೇಲಿನ ಸಲಹೆಯನ್ನು ಅವರು ಮುಖ್ಯವಾಗಿ ದಕ್ಷಿಣ ಭಾರತೀಯರಿಗೆ ನೀಡಿದ್ದಾರೆ. ಹಿಂದಿಯ ಮೂಲಕ ದೇಶವನ್ನು ಒಂದು ಮಾಡುವುದು ಅವರ ಉದ್ದೇಶವಂತೆ. ಧರ್ಮ, ಜಾತಿ ಸೇರಿದಂತೆ ಬೇರೆ ಬೇರೆ ಉದ್ವಿಗ್ನಕಾರಿ ವಿಷಯಗಳನ್ನಿಟ್ಟು ದೇಶವನ್ನು ವಿಭಜಿಸುತ್ತಾ ಬಂದ ಈ ನಾಯಕರು ಇದೀಗ ಹಿಂದಿಯ ಮೂಲಕ ದೇಶವನ್ನು ಒಂದು ಮಾಡುತ್ತೇನೆ ಎಂದು ಹೊರಟಿದ್ದಾರೆ. ದಕ್ಷಿಣ ಭಾರತೀಯರು ಹಿಂದಿ ಭಾಷೆಯನ್ನಾಗಲಿ, ಹಿಂದಿ ಭಾಷಿಗರ ಸಂಸ್ಕೃತಿಯನ್ನಾಗಲಿ ದೈನಂದಿನ ಬದುಕಿನಲ್ಲಿ ಅಳವಡಿಸಿಕೊಂಡವರಲ್ಲ. ಆದರೂ ಹಿಂದಿ ಸಿನೆಮಾ ಮತ್ತು ಧಾರಾವಾಹಿಗಳ ಮೂಲಕ ಇಲ್ಲಿನ ಪ್ರಾದೇಶಿಕ ಸಂಸ್ಕೃತಿಯ ಮೇಲೆ ಅದು ಪ್ರಭಾವ ಬೀರಿರುವುದು ಸುಳ್ಳಲ್ಲ.

ಹಿಂದಿ ಭಾಷೆಯಿಲ್ಲದೇ ಇರುವುದರಿಂದ ದಕ್ಷಿಣ ಭಾರತೀಯರು ಕಳೆದುಕೊಂಡದ್ದೇನೂ ಇಲ್ಲ. ಪ್ರಾದೇಶಿಕ ಭಾಷೆ ಮತ್ತು ಅಂತರ್‌ರಾಷ್ಟ್ರೀಯ ಇಂಗ್ಲಿಷ್ ಭಾಷೆಗಳಿಂದಾಗಿ ದಕ್ಷಿಣ ಭಾರತ ಬಹಳಷ್ಟನ್ನು ಸಾಧಿಸಿದೆ. ತಮಿಳು ನಾಡು, ಕೇರಳ ಮೊದಲಾದ ರಾಜ್ಯಗಳು ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಉತ್ತರ ಭಾರತದ ಎಲ್ಲ ರಾಜ್ಯಗಳಿಗೂ ಮಾದರಿಯಾಗಿವೆ. ಉತ್ತರ ಭಾರತದಲ್ಲಿರುವ ಧರ್ಮ, ಜಾತಿಯ ಹೆಸರಿನಲ್ಲಿ ನಡೆಯುತ್ತಿರುವ ವಿಭಜನೆಗೆ ಹೋಲಿಸಿದರೆ ದ್ರಾವಿಡ ಭಾಷೆಗಳು ಪರಸ್ಪರ ಹೊಂದಾಣಿಕೆಯಿಂದ ಬದುಕುತ್ತಿವೆ. ಬೆಂಗಳೂರು, ಚೆನ್ನೈಯಂತಹ ನಗರಗಳು ವಿಶ್ವ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿವೆ. ಬಡತನಕ್ಕೆ ಹೋಲಿಸಿದರೆ ಉತ್ತರ ಭಾರತಕ್ಕಿಂತ ದಕ್ಷಿಣ ಭಾರತ ಎಷ್ಟೋ ವಾಸಿ. ಬಿಹಾರ, ಉತ್ತರ ಪ್ರದೇಶ ಮೊದಲಾದ ರಾಜ್ಯಗಳು ಹಿಂದಿ ಮಾತನಾಡುತ್ತವೆ. ಆದರೆ ಅಲ್ಲಿ ‘ಏಕತೆ’ ಎನ್ನುವುದು ಎಲ್ಲಿದೆ? ಒಂದು ಭಾಷೆ ಜನರನ್ನು ಒಂದಾಗಿಸುತ್ತದೆ ಎಂದಾದರೆ, ಉತ್ತರ ಪ್ರದೇಶ ಪ್ರತಿ ದಿನ ಕೋಮುಗಲಭೆ ಮತ್ತು ಜಾತಿ ದೌರ್ಜನ್ಯಗಳಿಗಾಗಿ ಯಾಕೆ ಸುದ್ದಿಯಾಗುತ್ತಿದೆ? ಭಾಷೆ ಒಂದು ದೇಶವನ್ನು ಯಾವತ್ತೂ ಒಂದು ಮಾಡಲಾರದು. ಆ ಭಾಷೆಯೊಳಗಿರುವ ವೈಚಾರಿಕ ಚಿಂತನೆಗಳಷ್ಟೇ ದೇಶವನ್ನು ಒಂದು ಮಾಡಬಹುದು.

ದಕ್ಷಿಣ ಭಾರತ ಈ ಮಟ್ಟಿಗೆ ಬಹು ಭಾಗ್ಯವಂತ. ತಮಿಳುನಾಡಿನಲ್ಲಿ ಪೆರಿಯಾರ್ ಹುಟ್ಟಿದ್ದಾರೆ. ಕರ್ನಾಟಕದಲ್ಲಿ ಬಸವಣ್ಣ ಹುಟ್ಟಿದ್ದಾನೆ. ಕೇರಳದಲ್ಲಿ ನಾರಾಯಣ ಗುರು ಹುಟ್ಟಿದ್ದಾರೆ. ಇಂತಹ ಮಹಾತ್ಮರ ಸಂಸರ್ಗದಲ್ಲಿ ಇಲ್ಲಿನ ಜನರ ಯೋಚನೆಗಳು, ಬದುಕು ದೊಡ್ಡ ಮಟ್ಟದಲ್ಲಿ ಸುಧಾರಣೆಯಾಗಿದೆ. ವೈದಿಕ ಹಿಡಿತದಿಂದ ಪಾರಾಗಿ ಜನರು ಶಿಕ್ಷಣದ ಕಡೆಗೆ ಮುಖ ಮಾಡುವುದಕ್ಕೆ ಈ ಮಹಾತ್ಮರ ಕೊಡುಗೆ ಬಹುದೊಡ್ಡದು. ಬಸವಣ್ಣ ಕನ್ನಡದಲ್ಲಿ ವಚನಗಳನ್ನು ಹಾಡಿ ಕರ್ನಾಟಕವನ್ನು ವಿಶ್ವಮಾನ್ಯ ಮಾಡಿದರು. ಪೆರಿಯಾರ್ ಅವರ ಉಗ್ರ ಚಿಂತನೆಗಳಿಗೆ ವೈದಿಕ ಶಾಹಿ ಇಂದಿಗೂ ಬೆಚ್ಚಿ ಬೀಳುತ್ತದೆ. ದ್ರಾವಿಡ ಚಳವಳಿಯ ಕಾರಣದಿಂದಾಗಿ ಸಂಘಪರಿವಾರ ತಮಿಳುನಾಡಿನಲ್ಲಿ ಮೂಗು ತೂರಿಸುವುದಕ್ಕೆ ಅಂಜುತ್ತಿದೆ. ನಾರಾಯಣ ಗುರು ಚಿಂತನೆಯಿಂದ ಕೇರಳದ ಶೋಷಿತ ಸಮುದಾಯ ಅಲ್ಲಿನ ನಂಬೂದಿರಿಗಳ ಹಿಡಿತದಿಂದ ಪಾರಾಯಿತು. ಅಷ್ಟೇ ಅಲ್ಲ ತಮ್ಮ ನೆಲಮೂಲ ಭಾಷೆಗಳ ಜೊತೆಗೆ ಇಂಗ್ಲಿಷ್‌ನ್ನು ಕಲಿಯುತ್ತಾ ಬೇರೆ ಬೇರೆ ಕ್ಷೇತ್ರಗಳಲ್ಲಿ ಬೆಳೆದರು. ನಾಲ್ಮಡಿ ಕೃಷ್ಣ ರಾಜ ಒಡೆಯರ್, ವಿಶ್ವೇಶ್ವರಯ್ಯ, ಸಿ.ವಿ. ರಾಮನ್, ಇನ್ಫೋಸಿಸ್ ನಾರಾಯಣ ಮೂರ್ತಿ, ಎಂ.ಜಿ. ಆರ್. , ಎ. ಆರ್. ರೆಹಮಾನ್...ಹೀಗೆ ವಿಶ್ವವೇ ಗುರುತಿಸಿದ ದೈತ್ಯ ಪ್ರತಿಭೆಗಳು ಹಿಂದಿಯೇತರ ರಾಜ್ಯಗಳಿಂದ ಹೊರ ಬಂದಿದ್ದಾರೆ. ಹಿಂದಿಯ ಸಂಗವಿಲ್ಲದೇ ಇರುವುದರಿಂದ ಇಂದಿಗೂ ದ್ರಾವಿಡ ರಾಜ್ಯಗಳು ತಮ್ಮ ಸ್ವಂತಿಕೆಯನ್ನು ಉಳಿಸಿಕೊಂಡಿವೆ. ಹಿಂದಿ ಹೇರಿಕೆಯೆಂದರೆ ಪರೋಕ್ಷವಾಗಿ ಉತ್ತರ ಭಾರತವು ದಕ್ಷಿಣ ಭಾರತದ ಅಸ್ಮಿತೆಗಳನ್ನು ಅಳಿಸಿ ಹಾಕುವುದು ಎಂದು ಅರ್ಥ. ಈಗಾಗಲೇ ದಕ್ಷಿಣ ಭಾರತೀಯರ ಕುರಿತಂತೆ ಉತ್ತರ ಭಾರತೀಯರಲ್ಲಿ ಅತ್ಯಂತ ಕೀಳು ಮನೋಭಾವವಿದೆ. ದಿಲ್ಲಿ ದಕ್ಷಿಣ ಭಾರತೀಯರನ್ನು ಪೂರ್ಣ ಪ್ರಮಾಣದಲ್ಲಿ ಪ್ರತಿನಿಧಿಸುತ್ತಿಲ್ಲ ಎನ್ನುವ ನಮ್ಮ ಆಕ್ರೋಶ ಇಂದು ನಿನ್ನೆಯದಲ್ಲ.

ನಿಜಕ್ಕೂ ಉತ್ತರ ಭಾರತೀಯರಿಗೆ ದಕ್ಷಿಣ ಭಾರತವನ್ನು ಬೆಸೆಯುವ ಇಚ್ಛೆಯಿದ್ದಲ್ಲಿ ಉತ್ತರ ಭಾರತೀಯರ ಪಠ್ಯದಲ್ಲಿ ತಮಿಳು, ಕನ್ನಡ, ಮಲಯಾಳಂ, ತೆಲುಗು, ತುಳು ಇವುಗಳಲ್ಲಿ ಯಾವುದಾದರೂ ಒಂದು ಭಾಷೆಯನ್ನು ಹಿಂದಿ ಭಾಷಿಗರು ಕಡ್ಡಾಯವಾಗಿ ಕಲಿಯುವಂತಾಗಲಿ. ಹಾಗೆಯೇ ಆರೋಗ್ಯ, ಶಿಕ್ಷಣ, ಐಟಿ ಬಿಟಿ ಮೊದಲಾದ ಕ್ಷೇತ್ರಗಳಲ್ಲಿ ದಕ್ಷಿಣ ಭಾರತೀಯರು ಸಾಧಿಸಿದ ಸಾಧನೆ ಉತ್ತರ ಭಾರತೀಯರಿಗೆ ಮಾದರಿಯಾಗಲಿ. ಕೇರಳದಂತಹ ಪುಟ್ಟ ರಾಜ್ಯದಿಂದ ಗುಜರಾತ್, ರಾಜಸ್ಥಾನ, ಉತ್ತರ ಪ್ರದೇಶದಂತಹ ದೊಡ್ಡ ರಾಜ್ಯಗಳು ಕಲಿಯುವುದು ಬಹಳಷ್ಟಿದೆ. ಹಿಂದಿಯ ಕುರಿತಂತೆ ಇರುವ ಮೇಲರಿಮೆಯನ್ನು ಬಿಟ್ಟು ದಕ್ಷಿಣ ಭಾರತದ ಭಾಷೆಗಳ ಜೊತೆಗೆ ತೆರೆದುಕೊಳ್ಳಲು ಅಮಿತ್ ಶಾ ಅವರು ಉತ್ತರ ಭಾರತೀಯರಿಗೆ ಕರೆ ನೀಡಬೇಕಾಗಿದೆ. ಹಾಗೆಯೇ, ಕೇಂದ್ರ ಸರಕಾರದಲ್ಲಿ ಉತ್ತರ ಭಾರತಕ್ಕೆ ಸಿಕ್ಕಷ್ಟೇ ಸಮಪಾಲು ದಕ್ಷಿಣ ಭಾರತಕ್ಕೂ ಸಿಗಬೇಕಾಗಿದೆ. ಇಂದು ದೊಡ್ಡ ಸಂಖ್ಯೆಯಲ್ಲಿ ಉತ್ತರ ಭಾರತೀಯರು ಉದ್ಯೋಗ ಅರಸಿಕೊಂಡು ದಕ್ಷಿಣ ಭಾರತಕ್ಕೆ ಕಾಲಿಡುತ್ತಿದ್ದಾರೆ. ರೈಲ್ವೆ ಇಲಾಖೆ, ಬ್ಯಾಂಕುಗಳು, ವಿಮಾನ ನಿಲ್ದಾಣ ಸೇರಿದಂತೆ ಎಲ್ಲೆಂದರಲ್ಲಿ ಹಿಂದಿ ಭಾಷಿಕರು ತುಂಬಿಕೊಂಡಿದ್ದಾರೆ.

ಇವರೆಲ್ಲರೂ ಸ್ಥಳೀಯ ಭಾಷೆಯನ್ನು ಕಡ್ಡಾಯವಾಗಿ ಕಲಿತು, ಸ್ಥಳೀಯ ಜನರ ಜೊತೆಗೆ ಸಹಬಾಳ್ವೆ ನಡೆಸಲು ಅಮಿತ್ ಶಾ ಸಲಹೆ ನೀಡಬೇಕು. ಬ್ಯಾಂಕುಗಳಲ್ಲಿ ಗ್ರಾಹಕರಿಗಾಗಿ ಸಿಬ್ಬಂದಿ ಎನ್ನುವ ವಾಸ್ತವವನ್ನು ಒಪ್ಪಿಕೊಂಡು ಗ್ರಾಹಕರ ಭಾಷೆಯನ್ನು ಕರಗತ ಮಾಡಿಕೊಳ್ಳಬೇಕು. ಹಾಗೆಯೇ ಇಂದು ದಕ್ಷಿಣ ಭಾರತ ತನ್ನ ಮಾತೃ ಭಾಷೆಯನ್ನು ಹೊರತು ಪಡಿಸಿ ಆರಿಸಿಕೊಳ್ಳುವುದು ಇಂಗ್ಲಿಷ್‌ನ್ನು. ಇದರಿಂದಾಗಿ ಜಾಗತಿಕ ಅವಕಾಶಗಳನ್ನು ತನ್ನದಾಗಿಸಲು ಈ ಭಾಗದ ಜನರಿಗೆ ಸಾಧ್ಯವಾಗಿದೆ. ಲಕ್ಷಾಂತರ ಜನರು, ವಿದ್ಯಾರ್ಥಿಗಳು ವಿದೇಶಗಳಿಗೆ ತೆರಳಿ ಬದುಕು ಅರಸಿಕೊಳ್ಳುವಂತಾಗಿದೆ. ಇಂಗ್ಲಿಷ್ ಬದಲು ಹಿಂದಿಯನ್ನು ಕಲಿತರೆ ಅಂತರ್‌ರಾಷ್ಟ್ರೀಯ ಮಟ್ಟದ ಅವಕಾಶಗಳು ಕೈತಪ್ಪ ಬಹುದು. ಇದೇ ಸಂದರ್ಭದಲ್ಲಿ ದಕ್ಷಿಣ ಭಾರತೀಯರು ಹಿಂದಿ ಭಾಷೆಯನ್ನು ನಿರಾಕರಿಸುತ್ತಿಲ್ಲ, ಹಿಂದಿ ಹೇರಿಕೆಯನ್ನಷ್ಟೇ ವಿರೋಧಿಸುತ್ತಿದ್ದಾರೆ ಎನ್ನುವುದನ್ನು ಅಮಿತ್ ಶಾ ಗಮನದಲ್ಲಿಟ್ಟುಕೊಳ್ಳಬೇಕು. ಯಾರಿಗೆ ಅಗತ್ಯವಿದೆಯೋ ಅವರು ಹಿಂದಿಯನ್ನು ತಮ್ಮದಾಗಿಸಿಕೊಳ್ಳುತ್ತಿದ್ದಾರೆ. ಸಿನೆಮಾಗಳ ಮೂಲಕ, ಟಿವಿಗಳ ಮೂಲಕ ಹಿಂದಿಯನ್ನು ಕಲಿತು ಮಾತನಾಡುವವರೂ ಇದ್ದಾರೆ.

ದಕ್ಷಿಣ ಭಾರತೀಯರಿಗೆ ಹಿಂದಿ ಅಸ್ಪಶ್ಯ ಖಂಡಿತ ಅಲ್ಲ. ಆದರೆ ಪ್ರಾದೇಶಿಕ ಭಾಷೆಗಳನ್ನು ಅಳಿಸಿ ಆ ಜಾಗದಲ್ಲಿ ಹಿಂದಿಯನ್ನು ತಂದು ಕೂರಿಸುವ ಉತ್ತರ ಭಾರತೀಯರ ಸಂಚುಗಳನ್ನು ನಾವು ವಿರೋಧಿಸಬೇಕಾಗಿದೆ. ಇಷ್ಟಕ್ಕೂ ನಾವು ಯಾವ ಭಾಷೆಯಲ್ಲಿ ಮಾತನಾಡುತ್ತಿದ್ದೇವೆ ಎನ್ನುವುದು ಮುಖ್ಯವಲ್ಲ, ನಾವು ಯಾವ ಭಾಷೆಯಲ್ಲಿ ಏನನ್ನು ಮಾತನಾಡುತ್ತಿದ್ದೇವೆ ಎನ್ನುವುದು ಮುಖ್ಯ. ‘ಮುಸ್ಲಿಮ್ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ’ ‘ಅವರ ಜೊತೆ ವ್ಯಾಪಾರ ಮಾಡಬೇಡಿ’ ‘ಅವರನ್ನು ಕೊಲ್ಲಿ’ ‘ದೇವಸ್ಥಾನಕ್ಕೆ ಪ್ರವೇಶವಿಲ್ಲ’ ಎಂಬಿತ್ಯಾದಿ ಮಾತುಗಳನ್ನು ಯಾವ ಭಾಷೆಯಲ್ಲಿ ಆಡಿದರೇನು? ಅಂತಹ ಭಾಷೆಗಳಿಂದ ದೇಶ ಒಂದಾಗುತ್ತದೆ ಎನ್ನುವುದು ಕನಸಿನ ಮಾತು. ಆದುದರಿಂದ, ಭಾಷೆಯನ್ನು ಬದಲಿಸುವ ಬದಲು ತನ್ನ ಆಲೋಚನೆ, ಚಿಂತನೆಗಳನ್ನು ಬದಲಾಯಿಸುವ ಬಗ್ಗೆ ಅಮಿತ್ ಶಾ ಅವರು ಆಸಕ್ತಿ ವಹಿಸಿದರೆ ದೇಶಕ್ಕೆ ಏನಾದರೂ ಪ್ರಯೋಜನವಾದೀತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News