ನಿರುದ್ಯೋಗ ಮತ್ತು ಕಡಿಮೆ ವೇತನದಡಿಯಲ್ಲಿ ನರಳುವ ʼಅಮೃತ ಕಾಲʼ

Update: 2022-04-11 08:01 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಎ.10: ಕಳೆದ ಐದು ವರ್ಷಗಳಲ್ಲಿ ಆರ್ಥಿಕ ಹಿಂಜರಿತ, ಕೋವಿಡ್ ಸಾಂಕ್ರಾಮಿಕ ಮತ್ತು ಅದರ ವಿನಾಶಕಾರಿ ಪರಿಣಾಮ ಹಾಗೂ ಸಾಮಾನ್ಯ ಜನರ ಬಗ್ಗೆ ನರೇಂದ್ರ ಮೋದಿ ಸರಕಾರದ ಉದಾಸೀನತೆ ಇವು ದಿನೇದಿನೇ ಹದಗೆಡುತ್ತಲೇ ಇರುವ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿವೆ. ಬಹುಶಃ ಚುನಾವಣಾ ಯಶಸ್ಸಿನ ಅಮಲು ತಲೆಗೇರಿರುವ ಸರಕಾರವು ಜನರ ಜೀವನ ಸ್ಥಿತಿಯನ್ನು ಸುಧಾರಿಸುವುದನ್ನೇ ಕೈಬಿಟ್ಟಿದೆ.

ಅಕ್ಟೋಬರ್,2018ರಿಂದ ನಿರುದ್ಯೋಗ ದರವು ಅಸಹನೀಯ ಶೇ.7ರಷ್ಟು ಅಥವಾ ಅದಕ್ಕೂ ಹೆಚ್ಚಿನ ಮಟ್ಟದಲ್ಲಿದ್ದರೂ ಈ ದಿನಗಳಲ್ಲಿ ಉದ್ಯೋಗ ಸೃಷ್ಟಿ ಬಿಡಿ,ಉದ್ಯೋಗಗಳ ಬಗ್ಗೆ ಸರಕಾರಿ ಭಾಷಣಗಳಲ್ಲಿ ಉಲ್ಲೇಖವೂ ಇರುವುದಿಲ್ಲ.

ಜನರಿಗೆ ಸಾಕಷ್ಟು ಉದ್ಯೋಗಗಳು ದೊರೆಯುತ್ತಿಲ್ಲ,ಹೀಗಾಗಿ ಆರ್ಥಿಕ ಪುಟಿದೇಳುವಿಕೆ ಅಥವಾ ಚೇತರಿಕೆಯ ಎಲ್ಲ ಮಾತುಗಳು ಅರ್ಥಹೀನವಾಗಿವೆ. ಈ ನಡುವೆ ದುಡಿಯುತ್ತಿರುವ ಅಥವಾ ಉದ್ಯೋಗಗಳ ಹುಡುಕಾಟದಲ್ಲಿರುವ ದುಡಿಯುವ ವಯಸ್ಸಿನ ಜನಸಂಖ್ಯೆಯ ಪಾಲು ಜನವರಿ 2017ರಲ್ಲಿ ಸುಮಾರು ಶೇ.45ರಷ್ಟಿದ್ದುದು ಮಾರ್ಚ್ 2022ರಲ್ಲಿ ಸುಮಾರು ಶೇ.40ಕ್ಕೆ ಕುಸಿದಿದೆ.

ಏನು ಇದರ ಅರ್ಥ? ಹೆಚ್ಚು ಹೆಚ್ಚು ಜನರು ಉದ್ಯೋಗಗಳ ಕೊರತೆಯಿಂದಾಗಿ ಹತಾಶರಾಗುತ್ತಿದ್ದಾರೆ,ನಿರುತ್ಸಾಹಗೊಳ್ಳುತ್ತಿದ್ದಾರೆ ಮತ್ತು ಸೋಮಾರಿಗಳಾಗುತ್ತಿದ್ದಾರೆ ಹಾಗೂ ಉದ್ಯೋಗ ಮಾರುಕಟ್ಟೆಯಿಂದ ಹೊರಗುಳಿಯುತ್ತಿದ್ದಾರೆ ಎನ್ನುವುದನ್ನು ಇದು ಸೂಚಿಸುತ್ತಿದೆ. ಅವರಲ್ಲಿ ಹೆಚ್ಚಿನ ಪಾಲು ಯುವಜನರದ್ದಾಗಿದ್ದು, ಭವಿಷ್ಯದಲ್ಲಿಯ ಉದ್ಯೋಗಗಳಿಗಾಗಿ ಉತ್ತಮವಾಗಿ ಸಿದ್ಧಗೊಳ್ಳುವ ಆಶಯದೊಂದಿಗೆ ಯಾವುದಾದರೂ  ಕೋರ್ಸ್ ಅಥವಾ ಇತರ ಅಧ್ಯಯನಗಳಿಗೆ ಸೇರಿಕೊಳ್ಳತೊಡಗಿದ್ದಾರೆ.

ಈ ಐದು ವರ್ಷಗಳಲ್ಲಿ ಭಾರತದ ಜನಸಂಖ್ಯೆ 130.5 ಕೋ.ಯಿಂದ 137.4 ಕೋ.ಗೆ ಏರಿಕೆಯಾಗಿದೆಯಾದರೂ 2017 ಜನವರಿಯಲ್ಲಿ 40.1 ಕೋ.ಯಷ್ಟಿದ್ದ ಉದ್ಯೋಗಗಳ ಸಂಖ್ಯೆ 39.7 ಕೋ.ಗೆ ಕುಸಿದಿದೆ.

ಆದಾಯಗಳು ಮತ್ತು ಉದ್ಯೋಗಗಳು

ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿ (ಸಿಎಂಐಇ)ಯ ದತ್ತಾಂಶಗಳ ಇತ್ತೀಚಿನ ವಿಶ್ಲೇಷಣೆಯು ವಿವಿಧ ಸ್ತರಗಳ ಜನರಲ್ಲಿ ಆದಾಯಗಳು ಮತ್ತು ನಿರುದ್ಯೋಗ ಈ ಎರಡು ಮಹತ್ವದ ಅಂಶಗಳ ಮೇಲೆ ಬೆಳಕು ಚೆಲ್ಲಿದೆ.

ಕಡುಬಡವರು (ವಾ.ಆದಾಯ ಒಂದು ಲ.ರೂ.ಗೂ ಕಡಿಮೆ): 

ಸಾಂಕ್ರಾಮಿಕಕ್ಕೆ ಮುನ್ನ 2019-20ರಲ್ಲಿ ದೇಶದಲ್ಲಿಯ ಶೇ.9.8 ಕುಟುಂಬಗಳು ಈ ವರ್ಗಕ್ಕೆ ಸೇರಿದ್ದವು. 2021-22ರ ವೇಳೆಗೆ ಈ ಸಂಖ್ಯೆ ಶೇ.16.6ಕ್ಕೇರಿದೆ. ಈ ವರ್ಗದಲ್ಲಿ ನಿರುದ್ಯೋಗ ದರ ಕಡಿಮೆಯಿದೆ; 2019-20ನೇ ಸಾಲಿನ ಸೆಪ್ಟಂಬರ್-ಡಿಸೆಂಬರ್ನಲ್ಲಿ ಶೇ.4.1 ಮತ್ತು 2021-22ನೇ ಸಾಲಿನ ಇದೇ ಅವಧಿಯಲ್ಲಿ ಶೇ.4.8ರಷ್ಟಿತ್ತು. ಆದರೆ ಈ ವರ್ಗದಲ್ಲಿ ದುಡಿಮೆಯಲ್ಲಿ ಪಾಲ್ಗೊಳ್ಳುವಿಕೆಯ ದರವು ಸಾಂಕ್ರಾಮಿಕಕ್ಕೆ ಮುನ್ನ ಜುಜುಬಿ ಶೇ. 38.1ರಷ್ಟು ಇತ್ತು ಮತ್ತು 2021-22ರಲ್ಲಿ ಅದು ಕೇವಲ ಶೇ.31.3 ಆಗಿದೆ. ಈ ಕುಟುಂಬಗಳ ಸರಾಸರಿ ವಾರ್ಷಿಕ ಆದಾಯ ಕೇವಲ 53,000 ರೂ.ಗಳಾಗಿವೆ. ಅಂದರೆ ಅವರು ಬದುಕಿರಬೇಕೆಂದು ಮಾತ್ರ ಬದುಕುತ್ತಿದ್ದಾರೆ. ನಿರುದ್ಯೋಗ ದರವು ಅರ್ಥಹೀನವಾಗಿದೆ ಎನ್ನುವುದು ಸ್ಪಷ್ಟವಾಗಿದೆ.

ಕೆಳ ಮಧ್ಯಮ ವರ್ಗ (ವಾ.ಆದಾಯ 1ರಿಂದ 2 ಲ.ರೂ.): 

ಸುಮಾರು ಶೇ.45ರಷ್ಟು ಕುಟುಂಬಗಳು ಈ ವರ್ಗಕ್ಕೆ ಸೇರಿವೆ. ಎಲ್ಲ ನಿರುದ್ಯೋಗಿಗಳ ಮೂರನೇ ಒಂದರಷ್ಟು ಜನರು ಈ ವರ್ಗದಲ್ಲಿದ್ದಾರೆ. ಸಾಂಕ್ರಾಮಿಕದ ಅವಧಿಯಲ್ಲಿ ಇದು ಅಲ್ಪ ಏರಿಕೆಯನ್ನು ಕಂಡಿತ್ತಾದರೂ 2021ರ ಅಂತ್ಯದ ವೇಳೆಗೆ ಹಿಂದಿನ ಮಟ್ಟಕ್ಕೆ ಮರಳಿದೆ. ದುಡಿಮೆಯಲ್ಲಿ ಪಾಲ್ಗೊಳ್ಳುವಿಕೆ ದರವು ಕಡುಬಡವ ವರ್ಗಕ್ಕಿಂತ ಉತ್ತಮವಾಗಿದ್ದರೂ ಶ್ರೀಮಂತ ವರ್ಗಗಳಿಗೆ ಹೋಲಿಸಿದರೆ ಅತ್ಯಂತ ಕಳಪೆಯಾಗಿದೆ.

ಮಧ್ಯಮ ವರ್ಗ (ವಾ.ಆದಾಯ 2ರಿಂದ 5 ಲ.ರೂ.): 

ಶೇ.50 ರಷ್ಟು ಕುಟುಂಬಗಳು ಮತ್ತು ನಿರುದ್ಯೋಗಿಗಳ ಪೈಕಿ ಅರ್ಧದಷ್ಟು ಈ ವರ್ಗಕ್ಕೆ ಸೇರಿದ್ದಾರೆ. ನಿರುದ್ಯೋಗದ ಅತ್ಯಂತ ಹೆಚ್ಚಿನ ಬಿಸಿ ತಗುಲಿರುವುದು ಈ ವರ್ಗಕ್ಕೆ. ದುಡಿಮೆಯಲ್ಲಿ ಪಾಲ್ಗೊಳ್ಳುವಿಕೆ ದರವು ಶೇ.43 ಮತ್ತು ನಿರುದ್ಯೋಗ ದರವು ಶೇ.9ರಷ್ಟಿವೆ.

ಶ್ರೀಮಂತ ವರ್ಗಗಳು: ಮೇಲ್ಮಧ್ಯಮ ವರ್ಗ (ವಾ.ಆದಾಯ 5ರಿಂದ 10 ಲ.ರೂ.) ಮತ್ತು ಶ್ರೀಮಂತ ವರ್ಗ (ವಾ.ಆದಾಯ 10 ಲ.ರೂ.ಗಿಂತ ಹೆಚ್ಚು)ದಲ್ಲಿ ದುಡಿಮೆಯಲ್ಲಿ ಪಾಲ್ಗೊಳ್ಳುವಿಕೆ ದರವು ಶೇ.46ರಷ್ಟು ಉತ್ತಮ ಮಟ್ಟದಲ್ಲಿದೆ ಮತ್ತು ನಿರುದ್ಯೋಗ ದರವು ಶೇ.5ರಷ್ಟು ಕೆಳಮಟ್ಟದಲ್ಲಿದೆ. ಸಾಂಕ್ರಾಮಿಕದ ಸಂದರ್ಭದಲ್ಲಿ ಈ ವರ್ಗಗಳಲ್ಲಿಯ ನಿರುದ್ಯೋಗ ದರವು ಉತ್ತುಂಗಕ್ಕೇರಿತ್ತಾದರೂ ಅದೀಗ ಹಿಂದಿನ ಮಟ್ಟಕ್ಕೆ ಉತ್ತಮವಾಗಿ ಚೇತರಿಸಿಕೊಂಡಿದೆ.

ಈ ಎಲ್ಲ ದತ್ತಾಂಶಗಳು ಮಾದರಿ ಸಮೀಕ್ಷೆಗಳದ್ದಾಗಿದ್ದು,ವ್ಯಾಖ್ಯಾನಾತ್ಮಕ ಸೇರಿದಂತೆ ಸಾಮಾನ್ಯ ತಪ್ಪುಗಳನ್ನು ಒಳಗೊಂಡಿರಬಹುದು. ಆದರೆ ಇದು ಆದಾಯಗಳು ಮತ್ತು ಉದ್ಯೋಗಗಳೊಂದಿಗೆ ಭಾರತದ ಹೋರಾಟದ ನಿರುತ್ಸಾಹದಾಯಕ ಇಣುಕು ನೋಟವನ್ನು ಒದಗಿಸುತ್ತದೆ.

ಕುಟುಂಬಗಳ ದಯನೀಯವಾದ ಆದಾಯ ಮಟ್ಟಗಳು ಕಣ್ಣಿಗೆ ಎದ್ದು ಕಾಣಿಸುತ್ತಿವೆ. ಈ ಸಮೀಕ್ಷೆಯಂತೆ ಸುಮಾರು ಶೇ.57ರಷ್ಟು ಕುಟುಂಬಗಳು ವಾರ್ಷಿಕ ಎರಡು ಲ.ರೂ.ಗೂ ಕಡಿಮೆ ಆದಾಯವನ್ನು ಗಳಿಸುತ್ತಿವೆ,ಅಂದರೆ ಮಾಸಿಕ ಸುಮಾರು 16,666 ರೂ. ಹಲವರ ಗಳಿಕೆ ಇದಕ್ಕಿಂತ ಕಡಿಮೆಯಿದೆ,ಸುಮಾರು ಶೇ.17ರಷ್ಟು ಕುಟುಂಬಗಳ ಮಾಸಿಕ ಆದಾಯ ಕೇವಲ 8,333 ರೂ.ಗಳಷ್ಟಿದೆ.

ಉಲ್ಲೇಖಿಸಿರುವಂತೆ ಸರಾಸರಿ ವಾರ್ಷಿಕ ಆದಾಯವು ಕೇವಲ 1.7 ಲ.ರೂ. ಅಥವಾ ಮಾಸಿಕ ಸುಮಾರು 14,000 ರೂ.ಗಳಾಗಿವೆ. ಈ ಆದಾಯಕ್ಕಾಗಿ ಎಷ್ಟು ಗಂಟೆಗಳ ಕಾಲ ದುಡಿಯಬೇಕಿದೆ ಎನ್ನುವುದನ್ನು ಸಮೀಕ್ಷೆಯು ತಿಳಿಸಿಲ್ಲ,ಅದರೆ ಇಷ್ಟು ಆದಾಯವನ್ನು ಗಳಿಸಲು ಜನರು ಸಾಮಾನ್ಯವಾಗಿ ದಿನಕ್ಕೆ ಎಂಟು ಗಂಟೆಗೂ ಅಧಿಕ ಕಾಲ ದುಡಿಯುತ್ತಾರೆ ಎಂದು ಇತರ ಸಮೀಕ್ಷೆಗಳು ಸೂಚಿಸಿವೆ.

ಇದು ‘ಗುಪ್ತ ನಿರುದ್ಯೋಗ’ದ ವ್ಯಾಪಕತೆಯನ್ನೂ ಸೂಚಿಸುತ್ತದೆ. ಇದು ಬೇರೆ ಯಾವುದೇ ಪರ್ಯಾಯವಿಲ್ಲದೆ ಅತ್ಯಂತ ಕಡಿಮೆ ವೇತನಕ್ಕೆ ಜನರು ಅನಿವಾರ್ಯವಾಗಿ ದುಡಿಯುವ ಸಂದರ್ಭವಾಗಿದೆ-ಒಂದೋ ಅವರು ಹಸಿವಿನಿಂದ ಬಳಲುತ್ತಿರುತ್ತಾರೆ ಅಥವಾ ಸಿಕ್ಕ ಕೆಲಸವನ್ನು ಮಾಡುತ್ತಾರೆ. ಈ ವಿದ್ಯಮಾನವು ಕಡುಬಡ ವರ್ಗಗಳಿಗೆ ಮಾತ್ರ ಸೀಮಿತವಾಗಿಲ್ಲ. ತಥಾಕಥಿತ ಮಧ್ಯಮ ವರ್ಗದಲ್ಲಿಯೂ ಹೆಚ್ಚಿನ ಜನರು ಅತ್ಯಂತ ಕಡಿಮೆ ವೇತನಗಳಿಗೆ ದುಡಿಯುತ್ತಿದ್ದಾರೆ,ಮೋದಿಯವರು ಭರವಸೆ ನೀಡಿದ್ದ ‘ಅಚ್ಚೇ ದಿನ್’ಗಳಿಗಾಗಿ ಆಶಿಸುತ್ತ...

Writer - ಸುಬೋಧ್ ವರ್ಮಾ newsclick.in

contributor

Editor - ಸುಬೋಧ್ ವರ್ಮಾ newsclick.in

contributor

Similar News